ಅಮಾನತ್ತಾಗಿರುವ ಟೊಯೋಟಾ ಕಾರ್ಮಿಕರನ್ನು ಕೆಲಸಕ್ಕೆ ಕರೆಸಿಕೊಳ್ಳುವ ವಿಚಾರವನ್ನು ಸ್ಪಷ್ಟ ಪಡಿಸದ ಟೊಯೋಟಾ ವಕ್ತಾರರ ಹೇಳಿಕೆ

ರಾಮನಗರ: 86 ದಿನಗಳಿಂದ ನಡೆಯುತ್ತಿರುವ ಟೊಯೋಟಾ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಗುರುವಾರ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಮಾಗಡಿ ಶಾಸಕ ಎ.ಮಂಜುನಾಥ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದರು. ಫೆ.5ರ ಶುಕ್ರವಾರ ಮುಷ್ಕರ ತಾರ್ಕಿಕ ಅಂತ್ಯ ಕಾಣುತ್ತದೆ ಎಂಬ ವಿಶ್ವಾಸ ಮೂಡಿತ್ತು. ಆದರೆ ಗುರುವಾರ ರಾತ್ರಿ ಟೊಯೊಟಾ ವಕ್ತಾರರು ಬಿಡುಗಡೆ ಮಾಡಿರುವ ಹೇಳಿಕೆ ಮತ್ತೆ ಪ್ರಶ್ನೆಗಳನ್ನು ಸೃಷ್ಠಿಸಿವೆ!

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‍ ಟಿಕೆಎಂ
ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು.

ಅಮಾನತ್ತುಗೊಂಡಿರುವ ಕಾರ್ಮಿಕರ ವಿಚಾರಣೆಯನ್ನು ತ್ವರಿತವಾಗಿ ಮುಗಿಸುವುದಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ (ಟಿಕೆಎಂ) ವಕ್ತಾರರು ಬಿಡುಗಡೆಗೊಳಿಸಿರುವ ಹೇಳಿಕೆ ತಿಳಿಸಿದೆ. ಸಚಿವರ ಮನವಿಯನ್ನು ಪುರಸ್ಕರಿಸುವ ಸ್ಪಷ್ಟತೆ ಈ ಹೇಳಿಕೆಯಲ್ಲಿ ಇಲ್ಲ! ಹೀಗಾಗಿ ಶುಕ್ರವಾರ ಟೊಯೋಟಾ ಮತ್ತೊಂದು ಹೇಳಿಕೆ ಬಿಡುಗಡೆ ಮಾಡುವುದೇ ಎಂದು ಕಾದು ನೋಡಬೇಕಾಗಿದೆ.

86 ದಿನಗಳಿಂದ ಟಿಕೆಎಂ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗುರುವಾರ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಗೆ ಭೇಟಿ ನೀಡಿ, ಆಡಳಿತ ಮಂಡಳಿ ಮತ್ತು ಕಾರ್ಮಿಕರೊಂದಿಗೆ ಚರ್ಚೆ ನಡೆಸಿದ ನಂತರ ಕಾರ್ಮಿಕರು ಮತ್ತು ಮಾಧ್ಯಮಮಗಳ ಜೊತೆ ಮಾತನಾಡುವಾಗ,  ಅಮಾನತ್ತು ವಾಪಸ್ಸು ಪಡೆಯುವಂತೆ ತಾವು ಆಡಳಿತ ಮಂಡಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದರು.

ಗುರುವಾರ ರಾತ್ರಿ ಟಿಕೆಎಂ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿ ‘ಅಮಾನತು ಬಾಕಿ ವಿಚಾರಣೆ (ಎಸ್.ಪಿ.ಇ) ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಮತ್ತು ಸದಸ್ಯರನ್ನು ಆದಷ್ಟು ಬೇಗ ಸ್ವಾಗತಿಸುವಂತೆ ಕಾರ್ಮಿಕರ ಸಚಿವರು ಮನವಿ ಮಾಡಿದರು. ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ತನಿಖೆಗಳನ್ನು ಆದಷ್ಟು ಬೇಗ ಮುಗಿಸುವುದಾಗಿ ಟಿಕೆಎಂ ಆಡಳಿತ ಮಂಡಳಿ ಭರವಸೆ ನೀಡಿದೆ‘. ‘ಒಂದು ಜನಕೇಂದ್ರಿತ  ಸಂಸ್ಥೆಯಾಗಿ ಮೌಲ್ಯಗಳು ಮತ್ತು ಬಲವಾದ ನೈತಿಕ ಸಂಸ್ಕೃತಿಯಿಂದ ಮಾರ್ಗದರ್ಶನ ಪಡೆದ ಟಿಕೆಎಂ, ಈ ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಲು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮುಂದುವರಿಸಲಿದೆ‘ ಎಂದು ಹೇಳಿಕೊಂಡಿದೆ.

ಹೇಳಿಕೆಯಲ್ಲಿ ವಿಚಾರಣೆಯನ್ನು ಮುಂದುವರೆಸುವ ಮಾತು ಹೇಳಲಾಗಿದೆಯೆ ಹೊರತು ಅಮಾನತ್ತುಗೊಂಡಿರುವ ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ಸು ಕರೆಸಿಕೊಳ್ಳುವ ವಿಚಾರವನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ಶುಕ್ರವಾರ ಪ್ರಕಟಿಸುವ ಟಿಕೆಎಂ ನಿಲುವು ಮಹತ್ವ ಪಡೆದುಕೊಂಡಿದೆ.

………………