ಆಸ್ತಿ ತೆರಿಗೆ ಹೆಚ್ಚಳಕ್ಕೆ ರಾಮನಗರ ನಗರಸಭಾ ಸದಸ್ಯರ ಸಮ್ಮತಿ

ರಾಮನಗರ:24ನೇ ಮಾರ್ಚ್ 2023: ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲು ನಗರಸಭೆಯ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ವಸತಿ ಕಟ್ಟಡಗಳಿಗೆ ಶೇ 3, ವಾಣಿಜ್ಯ ಕಟ್ಟಡಗಳಿಗೆ ಶೇ 4ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಲು ಸದಸ್ಯರು ಸಮ್ಮತಿಸಿದ್ದಾರೆ.

ನಗರಸಭೆಯ ಪ್ರಶಸ್ತಿ ಭವನದಲ್ಲಿ ನಗರಸಭೆಯ ಅಧ್ಯಕ್ಷೆ ಬಿ.ಕೆ.ಪವಿತ್ರ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತುರ್ತು ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಆಯುಕ್ತ ಎಲ್.ನಾಗೇಶ್,  ಸರ್ಕಾರದ ಆದೇಶದಂತೆ ಪ್ರತಿ ವರ್ಷ ಕನಿಷ್ಠ ಶೇ 3 ಮತ್ತು ಗರಿಷ್ಠ ಶೇ 5ರವರೆಗೆ ಏರಿಕೆಗೆ ಅವಕಾಶವಿದೆ. ಕೆಲವು ತಿಂಗಳುಗಳ ಹಿಂದೆ ಉಂಟಾದ ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಅನೇಕ ಕಾಮಗಾರಿಗಳು ಆಗಬೇಕಾಗಿದೆ. ಹೀಗಾಗಿ ಆಸ್ತಿ ತೆರಿಗೆ ಏರಿಕೆ ಸರ್ಕಾರದ ಆದೇಶದಂತೆ ಕಡ್ಡಾಯವೂ, ಅನಿವಾರ್ಯವೂ ಆಗಿದೆ ಎಂದು ಸದಸ್ಯರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು ಕಳೆದ ವರ್ಷವಷ್ಠೆ ಆಸ್ತಿ ತೆರಿಗೆ ಏರಿಕೆಯಾಗಿದೆ. ನಗರಸಭೆಯ ಆದಾಯಕ್ಕೂ ಗಮನ ಹರಿಸಬೇಕು. ಇನ್ನೊಂದೆಡೆ ಜನರ ಆರ್ಥಿಕ ಸ್ಥಿತಿಯೂ ಉತ್ತಮವಾಗಿಲ್ಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ನಗರಸಭೆಯಿಂದ ನಾಗರೀಕರಿಗೆ ಸೌಲಭ್ಯ ಕಲ್ಪಿಸುವುದು ಸಹ ಕಡಿಮೆ ಇದೆ. ಹೀಗಾಗಿ ಜನರಿಗೆ ಹೊರೆಯಾಗಬಾರದು ಎಂದು ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸದಸ್ಯರು ಕೆಲಹೊತ್ತು ಚರ್ಚೆ ನಡೆಸಿದ ನಂತರ ವಸತಿ ಉದ್ದೇಶಿತ ಕಟ್ಟಡಗಳಿಗೆ ಶೇ 3, ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ ಶೇ 4ರಷ್ಟು ಆಸ್ತಿ ತೆರಿಗೆ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದರು.

ನಗರಸಭೆ ವ್ಯಾಪ್ತಿಯ ವಿವಿದೆಡೆ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿುಂದ 1530 ಮನೆಗಳು ನಿರ್ಮಾಣವಾಗಬೇಕಾಗಿದೆ. ಈ ಪೈಕಿ 511 ಮನೆಗಳು ನಿರ್ಮಾಣವಾಗಿದೆ. ಉಳಿಕೆ 1019 ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ನಗರಸಭೆ ಮತ್ತು ಫಲಾನುಭವಿಗಳು ಮನೆ ನಿರ್ಮಾಣದ ಮೊತ್ತವನ್ನು ಭರಿಸಬೇಕಾಗಿದೆ. ನಗರಸಭೆ ತನ್ನ ಪಾಲಿನ ಹಣ 312 ಲಕ್ಷ ರೂಗಳನ್ನು ಕೊಟ್ಟಿದ್ದು, ಉಳಿಕೆ 1712.07 ಲಕ್ಷ ರೂ ಬಾಕಿ ಕೊಡಬೇಕಾಗಿದೆ. ಬಾಕಿ ಹಣ ಪಾವತಿಸುವಂತೆ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ದಿ ಮಂಡಳಿಯ ಸಹಾಯಕ ಕಾರ್ಯಪಾಲಕರು ಪತ್ರ ಬರೆದಿದ್ದಾರೆ ಎಂದು ಆಯುಕ್ತ ಎಲ್.ನಾಗೇಶ್ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು ಹಣ ಪಾವತಿಸುವಂತೆ ಸಮ್ಮತಿ ಸೂಚಿಸಿದರು.

ಸಭೆಯ ಅಧ್ಯಕ್ಷತೆಯನ್ನು ನಗರಸಭಾಧ್ಯಕ್ಷೆ ಬಿ.ಕೆ.ಪವಿತ್ರವಹಿಸಿದ್ದರು. ಉಪಾಧ್ಯಕ್ಷೆ ಜಯಲಕ್ಷಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹಿನ್ ಅಹಮದ್ ಖುರೇಷಿ ಉಪಸ್ಥಿತರಿದ್ದರು.