ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ 65.72 ಮತದಾನ

ರಾಮನಗರ: ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಶಾಂತಿಯುತ ಚುನಾವಣೆ ನಡೆದಿದ್ದು ಶೇ 65.72 ಮತದಾನವಾಗಿದೆ.

2019ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶೇ 64.98 ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹೆಚ್ಚಿನ ಮತದಾನವಾಗಿದೆ.

ಶುಕ್ರವಾರ ಮತದಾನ ಶಾಂತಿಯುತವಾಗಿ ನೆರೆವೇರಿತು. ಬೆಳಿಗ್ಗೆ 7 ಗಂಟೆ ವೇಳೆಗೆ ಮತದಾನ ಆರಂಭವಾತು. ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ 8.39 ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 20.35, ಮಧ್ಯಾಹ್ನ 1 ಗಂಟೆಯವೇಳೆಗೆ ಶೇ 36.09, ಮಧ್ಯಾಹ್ನ 3 ಗಂಟೆಯವೇಳೆಗೆ ಶೇ 49.62, ಸಂಜೆ 5 ಗಂಟೆ ವೇಳೆಗೆ ಶೇ 61.78 ಮತದಾನವಾಗಿತ್ತು. ಅಂತಿಮವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.72 ಮತದಾನವಾಗಿದೆ.

8 ವಿಧಾನಸಭಾ ಕ್ಷೇತ್ರಗಳ ಪೈಕಿ ಕುಣಿಗಲ್‌ನಲ್ಲಿ ಅತಿ ಹೆಚ್ಚಿನ ಮತದಾನವಾಗಿದೆ. ಇಲ್ಲಿ ಶೇ 83.34ರಷ್ಟು ಮತದಾನವಾಗಿದೆ. ಅತಿ ಕಡಿಮೆ ಮತದಾನವಾಗಿರುವುದು ಬೆಂಗಳೂರು ದಕ್ಷಿಣ “ಧಾನಸಭಾ ಕ್ಷೇತ್ರದಲ್ಲಿ ಇಲ್ಲಿ ಶೇ 52.6ರಷ್ಟು ಮಾತ್ರ ಮತದಾನವಾಗಿದೆ.

ಇನ್ನು ಉಳಿದಂತೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 53.83, ಆನೇಕಲ್ ನಲ್ಲಿ ಶೇ 58.17, ಮಾಗಡಿಯಲ್ಲಿ ಶೇ 82.65, ರಾಮನಗರದಲ್ಲಿ ಶೇ 82.5, ಕನಕಪುರದಲ್ಲಿ ಶೇ 82.8 ಮತ್ತು ಚನ್ನಪಟ್ಟಣದಲ್ಲಿ ಶೇ 82.22 ಮತದಾನವಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಇವರಿಬ್ಬರ ನಡೆವೆ ನೇರ ಹಣಾಹಣಿ ಏರ್ಪಟ್ಟಿತ್ತು. ಉಭಯ ಸ್ಪರ್ಧಿಗಳ ಪೈಕಿ ಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದು ಜೂನ್.4ರಂದು ನಡೆಯುವ ಮತ ಎಣಿಕೆಯಲ್ಲಿ ಗೊತ್ತಾಗಲಿದೆ.