ಮಾನವರನ್ನು ಕೋವಿಡ್ 19 ವೈರಸ್ ಕಾಡುತ್ತಿದೆ, ರಾಸುಗಳನ್ನು ಕಾಡುತ್ತಿವೆ ಪಾಕ್ಸ್‌ವಿರಿಡೆ ಕುಟುಂಬದ ವೈರಸ್

* ರಾಸುಗಳಲ್ಲಿ ಚರ್ಮರೋಗಕ್ಕೆ ಕಾರಣವಾದ ಲಿಂಪಿ ಸ್ಕಿನ್ ಡಿಸೀಸ್ ವೈರಸ್ (ಎಲ್.ಎಸ್.ಡಿ.ವಿ)

ರಾಮನಗರ, ಜೂನ್‍ 16: ಮಾನವರನ್ನು ಕೋವಿಡ್ 19 ವೈರಸ್ ಸೋಂಕು ಕಾಡುತ್ತಿದ್ದರೆ, ಜಿಲ್ಲೆಯಲ್ಲಿ ರಾಸುಗಳಿಗೆ  ಪಾಕ್ಸ್‌ವಿರಿಡೆ ಎಂಬ ಕುಟುಂಬಕ್ಕೆ ಸೇರಿದ ವೈರಸ್ ಕಾಡುತ್ತಿವೆ. ಈ ವೈರಸ್ ಕಾರಣ ರಾಸುಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದೆ. ವೈದ್ಯರು ಇದನ್ನು  ಲಂಪಿ ಸ್ಕಿನ್ ಡಿಸೀಸ್ (ಎಲ್ ಎಸ್  ಡಿ ವಿ) ಎಂದು ಕರೆದಿದ್ದಾರೆ.

ರಾಮನಗರ ತಾಲೂಕಿನ ಬಿಡದಿ ಹೋಬಳಿ ಸೇರಿದಂತೆ ಚನ್ನಪಟ್ಟಣ ಮತ್ತು ಕನಕಪುರದ ಕೆಲವು ಹೋಬಳಿಗಳಲ್ಲಿ ಈ ರೋಗ ಕಾಡುತ್ತಿದೆ.

ಲಕ್ಷಣಗಳೇನು?

ಲಂಪಿ ಸ್ಕಿನ್ ಡಿಸೀಸ್ ಒಂದು ವೈರಸ್‌ನಿಂದ ಬರುವ ರೋಗ. ಮಾರಣಾಂತಿಕವಲ್ಲದಿದ್ದರೂ, ಚಿಕಿತ್ಸೆ ಸಿಗದಿದ್ದರೆ ಅಪಾಯ ಸಾಧ್ಯತೆ ಇದೆ. ಕೀಟಗಳಿಂದ ಈ ಸೋಂಕು ಹರಡುತ್ತದೆ. ರಾಸುಗಳ ಚರ್ಮದ ಮೇಲೆ ದೊಡ್ಡ ಗಾತ್ರದ ನೂರಾರು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಜ್ವರ ದಿನಗಳದಂತೆ ತೀವ್ರವಾಗುತ್ತದೆ. ರಾಸುಗಳು ನೋವು ತಡೆಯಲಾರದೆ ನರಳುತ್ತವೆ.  ಹಾಲು ಉತ್ಪತ್ತಿಯ ಪ್ರಮಾಣವೂ ಕ್ಷೀಣಿಸುತ್ತದೆ.

ವೈರಸ್‌ನಿಂದ ಉಂಟಾಗುವ ರೋಗವಾದ್ದರಿಂದ ನಿರ್ಧಿಷ್ಟ ಔಷ‘ವಿಲ್ಲ. ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಕೊಟ್ಟು  ವೈದ್ಯರು ವಾಸಿ ಮಾಡುತ್ತಾರೆ.  ಈ ಸೋಂಕಿನ ಲಕ್ಷಣಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಆರಂಭಿಸುವುದು ಅಗತ್ಯವಿದೆ.

ತಜ್ಞರು ಏನಂತಾರೆ?

ಬೆಂಗಳೂರು ಹಾಲು ಒಕ್ಕೂಟದ ಸ್ಥಳೀಯ ಕ್ಯಾಂಪ್‌ನ  ಸಹಾಯಕ ವ್ಯವಸ್ಥಾಪಕ (ಪಶುವೈದ್ಯಕೀಯ ಮತ್ತು ಕೃತಕ ಗರ್ಭ)  ಡಾ.ಪೂರ್ಣಚಂದ್ರ ತೇಜಸ್ವಿ  ಅವರ ಪ್ರಕಾರ  ಹಸುವಿನ ಮೈ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಲಿಂಪ್ ನೋಡ್‌ಗಳು ಊದಿಕೊಳ್ಳುವುದರಿಂದ ಈ ರೀತಿಯ ಗಂಟು/ಗಡ್ಡೆಗಳು ಕಾಣಿಸುತ್ತವೆ. ಗಂಟುಗಳು ಗಾಯವಾಗಿ,  ಕೀವು ತುಂಬಿಕೊಂಡು, ಒಸರುತ್ತವೆ. ಎದೆ ಭಾಗ ಮತ್ತು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತವೆ. ವೈರಸ್‌ನಿಂದ ಉಂಟಾದ ರೋಗಗಳಿಗೆ ಔಷಧಗಳು ಕಡಿಮೆ. ಹೀಗಾಗಿ  ಎಲ್.ಎಸ್.ಡಿ.ವಿ ಸೋಂಕಿಗೂ ನಿರ್ಧಿಷ್ಟ ಔಷಧವಿಲ್ಲ. ತಾವು ತಮ್ಮ ಹಿರಿಯ ವೈದ್ಯರನ್ನು ಸಂಪರ್ಕಿಸಿ ಹೋಮಿಯೋಪತಿ ಔಷಧಗಳನ್ನು ರಾಸುಗಳಿಗೆ ಕೊಡುತ್ತಿರುವುದಾಗಿ, ಕೆಲವು ರೈತರು ಈ ಔಷಧಗಳಿಗೆ ತಮ್ಮ ರಾಸುಗಳು ಸ್ಪಂದಿಸುತ್ತಿವೆ ಎಂಬ ಸಕರಾತ್ಮಕ ಪ್ರತಿಕ್ರಿಯೆಗಳು ಲಭಿಸಿವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.  ರೋಗ ಲಕ್ಷಣಗಳು ಕಾಣಿಸಿಕೊಂಡಾಕ್ಷಣ ಪಶುವೈದ್ಯರ ಸಲಹೆ, ಚಿಕಿತ್ಸೆ ಅನುಸರಿಸಿದರೆ ಬೇಗ ಗುಣಮುಖವಾಗುತ್ತವೆ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರತಿಕ್ರಿಯೆ:

ಕೃಷ್ಣಪ್ಪ, ರೈತ, ಸೀಬಕಟ್ಟೆ ಗ್ರಾಮ ಕೆಲವು ವಾರಗಳಿಂದ ರಾಸುಗಳಲ್ಲಿ ಚರ್ಮ ರೋಗ ಬಂದಿದೆ. ಗಡ್ಡ/ಗಂಟುಗಳ ರೀತಿ ನೂರಾರು ಸಂಖ್ಯೆಯಲ್ಲಿ ರಾಸುಗಳ ಮೈಮೇಲೆ ಕಾಣಿಸಿಕೊಳ್ಳುತ್ತಿವೆ. ಸೀಬಕಟ್ಟೆ, ಗೋಪಳ್ಳಿ, ಎಂ.ಜಿ.ಪಾಳ್ಯ ಮುಂತಾದ ಗ್ರಾಮಗಳಲ್ಲಿ ಕೆಲವು ರಾಸುಗಳಲ್ಲಿ  ಈ ಸಮಸ್ಯೆ ಕಾಡುತ್ತಿದೆ. ಪಶುವೈದ್ಯಕೀಯ ಇಲಾಖೆ ತಕ್ಷಣ ಸೂಕ್ತ ಚಿಕಿತ್ಸೆ ಕೊಟ್ಟು ರಾಸುಗಳನ್ನು ಉಳಿಸಿಕೊಡಬೇಕು.

ಡಾ.ಅಸದುಲ್ಲಾ ಷರೀಫ್‍, ಸಹಾಯಕ ನಿರ್ದೇಶಕರು, ಪಶುವೈದ್ಯಕೀಯ ಇಲಾಖೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಲಿಂಪ್ ಸ್ಕಿನ್ ಡಿಸೀಸ್ ಕಾಣಿಸಿಕೊಳ್ಳುತ್ತಿದೆ. ನಿರ್ಧಿಷ್ಟ ಚಿಕಿತ್ಸೆ ಇಲ್ಲ. ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಬೇಕಾಗಿದೆ. ಸಾಮಾನ್ಯವಾಗಿ ಈ ರೋಗದಿಂದ ರಾಸುಗಳು ಸಾಯುವುದಿಲ್ಲ, ಆದರೆ ತಕ್ಷಣ ಚಿಕಿತ್ಸೆ ಕೊಡಿಸುವುದು ಅಗತ್ಯವಿದೆ.

ಬಿ.ವಿ.ಸೂರ್ಯ ಪ್ರಕಾಶ್