ಶರಣತ್ವದಿಂದ ಮನುವಾದದ ಕಡೆಗೆ ಸಿಎಂ ಬಸವರಾಜ ಬೊಮ್ಮಾಯಿ – ಎಸ್‍.ಡಿ.ಪಿ.ಐ

ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶರಣತ್ವದಿಂದ ಮನುವಾದದ ಕಡೆಗೆ ಹೋಗಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯ ಪದಾಧಿಕಾರಿ ಅಬ್ದುಲ್ ಜಲೀಲ್ ಟೀಕಿಸಿದರು.

ತಮ್ಮ ಪಕ್ಷ ಹೊರ ತಂದಿರುವ ಬಿಜೆಪಿ ಸರ್ಕಾರದ ಅರಾಜಕತೆಯ ದಿನಗಳು ಕಿರುಪುಸ್ತಕವನ್ನು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇವರ ತಂದೆ ಎಸ್.ಆರ್.ಬೊಮ್ಮಾಯಿ ಜಾತ್ಯಾತೀತ ತತ್ವಗಳನ್ನು ಅನುಸರಿಸಿದ್ದರು. ಆದರೆ ಬಸವರಾಜ ಬೊಮ್ಮಾಯಿ ಅವರು ಯಾರದ್ದೋ ಕೃಪಕಟಾಕ್ಷಕ್ಕಾಗಿ ಮನುವಾದದ ಕಡೆ ಜಾರಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಕೋಮುವಾದದ ಹಿನ್ನೆಲೆಯಲ್ಲಿ ನಡೆದಿರುವ ಕೊಲೆಗಳ ವಿಚಾರದಲ್ಲೂ ಅವರು ಇಬ್ಬಗೆಯ ನೀತಿಯನ್ನು ಅನುಸರಿಸಿದ್ದಾರೆ ಎಂದು ಕಿಡಿಕಾರಿದರು.

ಎಸ್‍ಡಿಪಿಐ 60 ಕ್ಷೇತ್ರಗಳಿಂದ ಸ್ಪರ್ಧೆ

ರಾಜ್ಯ ವಿಧಾನಸಭೆಗೆ ಮುಂದೆ ನಡೆಯುವ ಚುನಾವಣೆಯ ವೇಳೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ  ಅವರು ತಮ್ಮ ಪಕ್ಷದ ಗುರಿ ಯಾವುದೇ ರಾಜಕೀಯ ಪಕ್ಷಗಳನ್ನು ಮಣಿಸುವುದಲ್ಲ, ವಿಧಾನಸೌಧಕ್ಕೆ ಪ್ರವೇಶ ಪಡೆದು ಪ್ರಜಾ ಪ್ರಭುತ್ವವನ್ನು ಬಲ ಪಡಿಸುವುದು ಮತ್ತು ಸಂವಿಧಾನ ಉಳಿಸುವುದು ತಮ್ಮ ಪಕ್ಷದ ಉದ್ದೇಶ ಎಂದರು.

ಬಿಜೆಪಿ ಸರ್ಕಾರದಲ್ಲಿ ಅರಾಜಕತೆ

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಈ ಸರ್ಕಾರ ವಿಫಲವಾಗಿದೆ. ಮುಂಬರುವ ಚುನಾವಣೆಯ ಬಗ್ಗೆ ಮೈಮರೆತಿದ್ದಾರೆ. ಬಿಜೆಪಿ ಸರ್ಕಾರದ ಆರಾಜಕತೆಯ ಸತ್ಯವನ್ನು ಜನರ ಮುಂದಿಡಲು ಕಿರು ಪುಸ್ತಕವನ್ನು ಹೊರ ತಂದಿರುವುದಾಗಿ ತಿಳಿಸಿದರು.

ಸಂಘ ನಿಷ್ಟೆ ಇರುವ ಅಧಿಕಾರಿಗಳಿಗೆ ಮನ್ನಣೆ

ಬಿಜೆಪಿ ಸರ್ಕಾರಗಳು ಸಂಘ ನಿಷ್ಟೆ ಇರುವ ಅಧಿಕಾರಿಗಳಿಗೆ ಮನ್ನಣೆ ನೀಡುತ್ತಿವೆ. ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಲಂಗುಲಗಾಮು ಇಲ್ಲದೆ ನಡೆಯುತ್ತಿದೆ. ನಿರ್ಧಿಷ್ಠ ಸಮುದಾಯದವರಿಗೆ ವರ್ಗಾವಣೆ ಘೋಷಿಸಿ ಪೋಸ್ಟಿಂಗ್ ಕೊಟ್ಟಿಲ್ಲ ಎಂದರು. ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿಯನ್ನು ಇಲ್ಲಿ ಜಾರಿಗೆ ತರುತ್ತಾರಂತೆ. ಅದು ಸಾಧ್ಯವಿಲ್ಲದ ಮಾತು, ರಾಜ್ಯದ ಜನತೆ ಅದನ್ನು ಒಪ್ಪುವುದಿಲ್ಲ ಎಂದರು.

ಕೇಂದ್ರ ಸರ್ಕಾರದ ವಿರುದ್ದವೂ ಹರಿಹಾಯ್ದ ಅವರು ಸತ್ಯದ ದನಿ ಅಡಗಿಸಲು ಎನ್.ಐ.ಎ, ಎಸ್.ಐ.ಟಿ, ಇಡಿ ಹೀಗೆ ಸರ್ಕಾರಿ ಏಜೆನ್ಸಿಗಳ ದುರುಪಯೋಗ ನಡೆಯುತ್ತಿದೆ ಎಂದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು ಭಿನ್ನಮತಿಯರಿಗೆ ಹಣ ಎಲ್ಲಿಂದ ಬಂತು ಎಂಬುದನ್ನು ಇಡಿ ಏಕೆ ಪ್ರಶ್ನಿಸುತ್ತಿಲ್ಲ ಎಂದರು.

ಅನ್ಯ ಪಕ್ಷಗಳ ವಿರುದ್ದವೂ ಕಿಡಿ

ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅಬ್ದುಲ್ ಜಲೀಲ್, ಜಾತ್ಯಾತೀತ ಹಸರಿನಲ್ಲಿ ಚುನಾವಣೆ ಎದುರಿಸಿದ ಪಕ್ಷಗಳೇಕೆ ಗೆಲ್ಲಲಿಲ್ಲವೇಕೆ? ವೋಟ್ ಬ್ಯಾಂಕ್ ರಾಜಕರಣದ ಬಗ್ಗೆ ಇರುವ ಕಾಳಜಿ ಸಾಮಾಜಿಕ ನ್ಯಾಯದ ಬಗ್ಗೆ ಏಕಿಲ್ಲ ಎಂದು ಬಿಜೆಪಿಯೇತರ ಪಕ್ಷಗಳ ವಿರುದ್ದವೂ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ನಿಸಾರ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಷಹಬಾಷ್ ಆಲಿ, ತಾಲೂಕು ಅಧ್ಯಕ್ಷ ಅಸ್ಸಾದುಲ್ಲಾ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಅಜೀಜ್, ತಾಲೂಕು ಉಪಾಧ್ಯಕ್ಷ ಅಸ್ಲಂ ಉಪಸ್ಥಿತರಿದ್ದರು.