ಜೂನ್‍ 24ರಿಂದ ಜೂನ್‍ 30ರವರೆಗೆ ರಾಮನಗರ ನಗರದಲ್ಲಿ ವರ್ತಕರ ಸ್ವಯಂ ಪ್ರೇರಿತ ಲಾಕ್‍ಡೌನ್‍ಗೆ ನಿರ್ಧಾರ

ರಾಮನಗರ,ಜೂನ್‍ 23,2020: 24ನೇ ಜೂನ್‍ 2020ರ ಗುರುವಾರದಿಂದ ಮಾಸಾಂತ್ಯದವರೆಗೆ ಸ್ವಯಂ ಪ್ರೇರಿತ ಲಾಕ್‍ಡೌನ್ಗೆ ಜಿಲ್ಲಾ ಕೇಂದ್ರ ರಾಮನಗರದ ವರ್ತಕರು ನಿರ್ಧಾರ ತೆಗೆದುಕೊಂಡಿದ್ದಾರೆ.

ನಗರದ ಶ್ರೀ ಕನ್ನಿಕಾ ಮಹಲ್‍ನಲ್ಲಿ ಮಂಗಳವಾರ ಸಂಜೆ ನಡೆದ ವರ್ತಕರ ಸಭೆಯಲ್ಲಿ ಒಕ್ಕೊರಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸುಮಾರು 200 ಮಂದಿ ವರ್ತಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಕೋವಿಡ್‍ 19 ಸೋಂಕು ಹರಡುವುದನ್ನು ತಪ್ಪಿಸಲು ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ದಿನಸಿ, ತರಕಾರಿ, ಹಾಲು ಇತ್ಯಾದಿ ಅವಶ್ಯಕ ವಸ್ತುಗಳ ಮಳಿಗೆಗಳು ಮಾತ್ರ ಬೆಳಿಗ್ಗೆ 6 ರಿಂದ 11ರವರೆಗೆ ವ್ಯಾಪಾರ ಮಾಡಲು ಅವಕಾಶವಿದೆ. ಉಳಿದವರು ಕಡ್ಡಾಯವಾಗಿ ಲಾಕ್‍ಡೌನ್‍ನಲ್ಲಿ ಭಾಗವಹಿಸಲು ನಿರ್ಧಾರವಾಗಿದೆ. ಜೂನ್‍ 30ರಂದು ಪುನಃ ಸಭೆ ಸೇರಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚಿಸಲಾಗುವುದು ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಔಷಧಿ, ಕ್ಲಿನಿಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಸಭೆಯಲ್ಲಿ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‍, ತಾಲೂಕು ಜೆಡಿಎಸ್‍ ಅಧ್ಯಕ್ಷ ರಾಜಶೇಖರ್‍ ಮಾತನಾಡಿ ಸ್ವಯಂ ಪ್ರೇರಿತ ಲಾಕ್‍ಡೌನ್ ಅಗತ್ಯದ ಬಗ್ಗೆ ಮಾತನಾಡಿದರು.  

ಎಪಿಎಂಸಿ ಮಾಜಿ ಅಧ್ಯಕ್ಷ ಪುಟ್ಟರಾಮಯ್ಯ, ನಗರಸಭೆ ಮಾಜಿ ಸದಸ್ಯರುಗಳಾದ ಜೆ.ಮುಕುಂದರಾಜ್‍, ಬಿ.ನಾಗೇಶ್‍, ತಾಲೂಕು ವರ್ತಕರ ಸಂಘದ ಅಧ್ಯಕ್ಷ ಬಿ.ಉಮೇಶ್‍, ವಿವಿಧ ವ್ಯಾಪಾರಿಗಳ ಸಂಘದ ಪ್ರಮುಖರಾದ ಶ್ರೀಚಂದ್‍ ಜೈನ್‍, ಬಾಬು, ಕುಮಾರ್‍, ಚಂದ್ರಶೇಖರ್‍, ಕೆ.ವಿ.ಉಮೇಶ್‍, ಪ್ರಸನ್ನ ಕುಮಾರ್‍ ಮುಂತಾದವರು ಭಾಗವಹಿಸಿದ್ದರು.

ಹೋಟೆಲ್‍ಗಳ ಕತೆ ಏನು?

ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ದಿನಸಿ, ಬಟ್ಟೆ, ಸ್ಟೇಷನರಿ, ಜ್ಯೂಯೆಲರಿ, ಮೊಬೈಲ್‍, ಬೇಕರಿ ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳ ಮಾಲೀಕರು ಭಾಗವಹಿಸಿದ್ದರು ಸ್ವಯಂ ಪ್ರೇರಿತ ಲಾಕ್‍ಡೌನ್‍ಗೆ ಬೆಂಬಲ ನೀಡಿದ್ದಾರೆ. ಆದರೆ ನಗರದ ಪ್ರಮುಖ ಹೋಟೆಲ್‍ ಮಾಲೀಕರೊಬ್ಬರು ಸುದ್ದಿಗಾರರೊಡನೆ ಮಾತನಾಡಿ ಹೋಟೆಲ್‍ಗಳು ಎಂದಿನಂತೆ ವ್ಯಾಪಾರ ನಡೆಸಲಿವೆ ಎಂದು ತಿಳಿಸಿದ್ದಾರೆ.