ಜುಲೈ 23ರಂದು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕಾರ್ಯಾಗಾರ, ಭಾಗವಹಿಸುವ ಸ್ಪರ್ಧಾ ಆಕಾಂಕ್ಷಿಗಳಿಗೆ ಉಚಿತ ಪುಸ್ತಕ ವಿತರಣೆ

ರಾಮನಗರ: ಬೆಂಗಳೂರಿನ ಇನ್‌ಸ್ಪೈರ್ ಕರ್ನಾಟಕ ಫೌಂಡೇಷನ್ ಮತ್ತು ಉಜ್ವಲ ಅಕಾಡೆಮಿ ವತಿಯಿಂದ, ನಗರದ ಎಂ.ಜಿ. ರಸ್ತೆಯ ಗುರುಭವನದಲ್ಲಿ ಜುಲೈ 23ರಂದು ಭಾನುವಾರ ಪಿಡಿಒ, ಪಿಎಸ್‌ಐ, ಕೆಎಎಸ್‌ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10 ಗಂಟೆಗೆ ಶುರುವಾಗುವ ಕಾರ್ಯಾಗಾರದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಹೇಗೆ ತಯಾರಿ ನಡೆಸಬೇಕು? ಓದುವಾಗ ಅನುಸರಿಸಬೇಕಾದ ಕ್ರಮಗಳೇನು? ವಿಷಯವಾರು ಅಧ್ಯಯನ ಹೇಗಿರಬೇಕು? ಸಂದರ್ಶನ ಎದುರಿಸುವುದು ಹೇಗೆ? ಎಂಬುದರ ಕುರಿತು ಮಾಹಿತಿ ನೀಡಲಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ₹500 ಮೌಲ್ಯದ 250 ಪುಟಗಳ ಸಾಮಾನ್ಯ ಜ್ಞಾನ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುವುದು.

‘ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಸರ್ಕಾರಿ ಹುದ್ದೆ ಗಿಟ್ಟಿಸುವುದು ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವೀಧರರ ಕನಸು. ಈ ಕನಸು ನನಸು ಮಾಡಿಕೊಳ್ಳಲು ಬಡ ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಕೊರತೆ ಇರುತ್ತದೆ. ಇದನ್ನು ನೀಗಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ಇನ್‌ಸ್ಪೈರ್ ಫೌಂಡೇಷನ್ ಸಂಸ್ಥಾಪಕ ಉದಯ್ ಸಿಂಗ್ ಮತ್ತು ಉಜ್ವಲ ಅಕಾಡೆಮಿ ನಿರ್ದೇಶಕ ಮಂಜುನಾಥ್ ಕೆ.ಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಇನ್‌ಸ್ಪೈರ್ ಫೌಂಡೇಷನ್ ಕಾರ್ಯದರ್ಶಿ ನೀರಕಲ್ಲು ಶಿವಕುಮಾರ್ (ಮೊ: 9686682997) ಹಾಗೂ ಉಜ್ವಲ ಅಕಾಡೆಮಿ ನಿರ್ದೇಶಕ ಮಂಜುನಾಥ್ (88843 34488) ಅವರನ್ನು ಸಂಪರ್ಕಿಸಬಹುದು.