ದೀಪಾವಳಿ; ಪರಿಸರದ ಬಗ್ಗೆ ಮರಸಪ್ಪ ರವಿ‌ ಕಾಳಜಿ

ಬರಹ: ಮರಸಪ್ಪ ರವಿ, ಪರಿಸರ ಪ್ರೇಮಿ

ಬೆಳಕಿನ ಹಬ್ಬ ದೀಪಾವಳಿ ಎಲ್ಲರಿಗೂ ತುಂಬಾ ದೊಡ್ಡ ಹಬ್ಬ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಬ್ಬದ ಕೆಲವು ಆಚರಣೆಗಳು ಇತ್ತೀಚಿನ ವರ್ಷಗಳಲ್ಲಿ ಪರಿಸರಕ್ಕೆ ಹಾನಿಯಾಗಿ ಪರಿಣಮಿಸುತ್ತಿವೆ. ಪರಿಸರಕ್ಕೆ ತುಂಬಾ ಹಾನಿಯುಂಟು ಮಾಡುವ ಹಬ್ಬವೆಂದರೆ ದೀಪಾವಳಿ ಎಂಬ ಕುಖ್ಯಾತಿಗ ನಾವೇ ಕಾರಣರಾಗುತ್ತಿರುವುದು ವಿಷಾಧನೀಯ!

ದೀಪಾವಳಿ ಹಬ್ಬದ ವೇಳೆ ಬಳಕಯಾಗವ ಪಟಾಕಿಗಳು ವಾಯು ಮತ್ತು ಶಬ್ದಮಾಲಿನ್ಯ ಉಂಟು ಮಾಡುತ್ತದೆ, ರಾಸಾಯನಿಕ ವಸ್ತುಗಳನ್ನು ಮಿಶ್ರ ಮಾಡಿರುವ ರಂಗೋಲಿಗಳು ಮಣ್ಣನ್ನು ಕಲುಷಿತಗೊಳಿಸುತ್ತವೆ ಹಾಗೂ ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್‌ ವಸ್ತುಗಳೂ ಪರಿಸರಕ್ಕೆ ಪೂರಕವಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರು ಸಾಧ್ಯವಾದಷ್ಟು ಪರಿಸರ ಸ್ನೇಹಿ ಪದಾರ್ಥಗಳನ್ನು ಬಳಸಿ ಸುರಕ್ಷಿತವಾಗಿ ಆಚರಿಸಬೇಕಿದೆ. ದೀಪಾವಳಿ ದೀಪ ಬೆಳಗುವ ಹಬ್ಬವೇ ಹೊರತು ಪಟಾಕಿ ಸಿಡಿಸುವ ಹಬ್ಬವಲ್ಲ ಎನ್ನುವುದನ್ನು ಸರ್ವರು ಅರಿಯಬೇಕಿದೆ.

ದೀಪಾವಳಿಗೆ ಹೆಚ್ಚಿನವರು ಪ್ಲಾಸ್ಟಿಕ್‌ನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ. ಪ್ಲಾಸ್ಟಿಕ್‌ನ ಹೂವು, ಬೌಲ್‌, ತೋರಣ, ಪ್ಲಾಸ್ಟಿಕ್‌ನ ಗಿಫ್ಟ್‌ ಐಟಂ ಇತ್ಯಾದಿಗಳು ಪ್ಲಾಸ್ಟಿಕ್‌ಮಯವಾಗಿವೆ. ಈ ಪ್ಲಾಸ್ಟಿಕ್‌ಗಳು ಮಣ್ಣಿನಲ್ಲಿ ಕರಗುವುದಿಲ್ಲ. ಪರಿಸರಕ್ಕೆ ಹಾನಿಯುಂಟು ಮಾಡುವ ಇಂಥ ಡೆಕೋರ್‌ ಆ್ಯಕ್ಸೆಸರಿಗಳಿಂದ ದೂರವಿದ್ದು, ಎಲೆ, ಮಣ್ಣಿನ ಕಲಾಕೃತಿಗಳು ಮುಂತಾದ ನೈಸರ್ಗಿಕ ಅಲಂಕಾರಿಕ ವಸ್ತುಗಳನ್ನು ಬಳಸಿ. ಕೆಲವರು ಅತಿಥಿಗಳಿಗೆ ಡಿಸ್ಪೊಸೇಬಲ್‌ ಪ್ಲಾಸ್ಟಿಕ್‌ ಪ್ಲೇಟ್‌ಗಳಲ್ಲಿ ಊಟ ಬಡಿಸುತ್ತಾರೆ. ಇದಕ್ಕಿಂತ ಬಾಳೆ ಎಲೆ ಅಥವಾ ಅಡಿಕೆ ಹಾಳೆಗಳಿಂದ ಮಾಡಿದ ನೈಸಗಿಕ ಪ್ಲೇಟ್‌ಗಳಲ್ಲಿ ಊಟ ನೀಡಿದರೆ ಉತ್ತಮವಾಗಿದ್ದು, ಅರೋಗ್ಯಕ್ಕೂ ಹಿತವಾಗಿದೆ.

ವಿವಿಧ ರೀತಿಯ ಪಟಾಕಿಗಳು ಪರಿಸರಕ್ಕೆ ತೀರಾ ಹಾನಿಯನ್ನುಂಟು ಮಾಡುತ್ತವೆ. ಇದರ ಹೊಗೆ ಮತ್ತು ರಾಸಾಯನಿಕ ವಸ್ತು ಬೆರೆತ ದಪ್ಪ ಕಾಗದಗಳು ಪರಿಸರಕ್ಕೆ ಒಳ್ಳೆಯದಲ್ಲ. ಪಟಾಕಿಗೆ ಬದಲು ದೀಪಗಳನ್ನು ಬೆಳಗಿಸಿ. ಪಟಾಕಿ ಅನಿವಾರ್ಯವಾದರೆ ಪುನರ್‌ ಬಳಕೆಗೆ ಯೋಗ್ಯವಾದ ಪೇಪರ್‌ಗಳಿಂದ ಮಾಡಿದ ಹೆಚ್ಚು ಶಬ್ಧವಿಲ್ಲದ ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸಿ. ಅದರೂ ಕಡಿಮೆ ಪ್ರಮಾಣದಲ್ಲಿ ಪಟಾಕಿ ಖರೀದಿಸುವುದು ಉತ್ತಮವೆನಿಸುತ್ತದೆ.

ಹಬ್ಬಕ್ಕೆ ಬಣ್ಣ ಬಣ್ಣದ ಕ್ಯಾಂಡಲ್‌ಗಳನ್ನು ಬೆಳಗಿಸುವುದಕ್ಕಿಂತ ಮಣ್ಣಿನ ಹಣತೆಯಲ್ಲಿ ಎಣ್ಣೆ ಹಾಕಿ ದೀಪ ಬೆಳಗಿಸಿ. ಮಣ್ಣಿನ ಹಣತೆಗಳನ್ನು ಮತ್ತೆ ಮತ್ತೆ ಬಳಸಬಹುದು. ಇದನ್ನು ಪರಿಸರ ಸ್ನೇಹಿ ವಸ್ತುಗಳಿಂದಲೇ ತಯಾರಿಸಲಾಗುತ್ತದೆ. ಜೊತೆಗೆ ಮಣ್ಣಿನ ಹಣತೆ ಮಾಡುವ ಕುಂಬಾರಿಕೆ ಮಾಡುವವರಿಗೆ ಒಂದಷ್ಟು ಆರ್ಥಿಕ ಚೈತನ್ಯ ನೀಡಿದಂತಾಗುತ್ತದೆ. ಇದೇ ರೀತಿ ತೀಕ್ಷ್ಣವಾದ ರಾಸಾಯನಿಕ ಬಣ್ಣಗಳನ್ನು ಹಚ್ಚಿದ ಹಣತೆಗಳನ್ನು ಕೊಳ್ಳಬೇಡಿ. ಪೆಟ್ರೋಲಿಯಂ ಬಳಸಿ ಮಾಡುವ ಕ್ಯಾಂಡಲ್‌ಗಳು ವಿಷಕಾರಿ ವಸ್ತುಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಇವುಗಳಿಗೂ ತೀಲಾಂಜಲಿ ಇಡಬೇಕಿದೆ. ಮನೆ ಮುಂದೆ ತೂಗು ಹಾಕುವ ಆಕಾಶಬುಟ್ಟಿಯೂ ಪರಿಸರ ಸ್ನೇಹಿಯಾಗಿರಲಿ. ಪುನರ್‌ ಬಳಕೆಗೆ ಯೋಗ್ಯವಾದ ಕಾಗದದಿಂದ ತಯಾರಿಸಿದ ಆಕಾಶಬುಟ್ಟಿಯನ್ನೇ ಬಳಸಿ ಬೆಳಕಿನ ಹಬ್ಬ ಆಚರಣೆ ಮಾಡುವಂತಾಗಬೇಕು.

ಹೀಗಿದ್ದರೆ ಒಳಿತ್ತಲ್ಲವೇ?

ಸಮುದಾಯಗಳಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಆಚರಣೆಗಳನ್ನು ಆನಂದಿಸಬೇಕು. ಈ ಹಬ್ಬವನ್ನು ಆಚರಸುವುದು ಪ್ರೀತಿ ಪಾತ್ರರ ಜೊತೆ ಸತ್ಕಾರಗಳನ್ನು ಹಂಚಿಕ್ಕೊಳ್ಳುವುದು ಸಂತಸದಿಂದ ಕೂಡಿರುವಂತೆ ನಿಗಾವಹಿಸಿ

ವಿದ್ಯುತ್‌ ಅಥವಾ ಚೈನಿಸ್‌ ದೀಪಗಳ ಬದಲಿಗೆ ನಿಮ್ಮ ಮನೆಯನ್ನು ಆಲಂಕರಿಸಲು ಮಣ್ಣಿನ ದೀಪಗಳನ್ನು ಬೆಳಗಿಸಿ. ಮಣ್ಣಿನಿಂದ ಮಾಡಿದ ದೀಪಗಳು ಬೆಳಕು ಚೆಲ್ಲಲು ಎಣ್ಣೆಯ ಅಗತ್ಯವಿದ್ದರೂ, ಅವು ಮಾಲಿನ್ಯವನ್ನು ಉಂಟು ಮಾಡುವುದಿಲ್ಲ.

ಪಟಾಕಿಗಳನ್ನು ಸಿಡಿಸುವುದರಿಂದ ಶಬ್ದಮಾಲಿನ್ಯವಾಗುವುದು ಖಚಿತ ಇದರಿಂದ ಜನರಿಗೆ ಅಘಾತವಾದಂತೆ ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗಲಿದೆ. ಅದ್ದರಿಂದ ಪರಿಸರ ಹಾನಿಯಾಗದಂತ ಪರಿಸರರ ಸ್ನೇಹಿಯಾದ ಭೂಚಕ್ರ, ಹೊಕುಂಡಗಳನ್ನು ಬಳಸಿ.