ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ: ಭಾವೈಕ್ಯತೆಯ ಸಂಕೇತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ಬಿ.ವಿ.ಸೂರ್ಯ ಪ್ರಕಾಶ್‍

ರಾಮನಗರ: ಸಪ್ತಗಿರಿಗಳ ನಗರ, ಸಿಲ್ಕ್‌ಸಿಟಿ ಎಂಬ ಬಿರುದುಗಳಿಂದಲೂ ಗುರುತಿಸಿಕೊಂಡಿರುವ ರಾಮನಗರದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಭಾವೈಕ್ಯತೆಯ ಸಂಕೇತವಾಗಿದೆ. ನಗರದ ನಾಗರೀಕರು ಪರಸ್ಪರ ಸಹಕಾರದಲ್ಲಿ ಸಮಿತಿವತಿಯಿಂದ ಮಹೋತ್ಸವವನ್ನು ನೆರೆವೇರಿಸಿಕೊಂಡು ಬರಲಾಗುತ್ತಿದೆ.

ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರು 19/07/2022

ಕಾಲಕ್ರಮೇಣ ಈ ಕರಗಮಹೋತ್ಸವ ಅಕ್ಕಪಕ್ಕದ ಜಿಲ್ಲೆಗಳ ಜನತೆಯ ಗಮನವನ್ನು ಸೆಳೆದಿದೆ. ಕರಗ ಮಹೋತ್ಸಕ್ಕೆ ನಾಗರೀಕರು ತಮ್ಮ ಬಂಧು-ಮಿತ್ರರನ್ನು ಆಹ್ವಾನಿಸಿ ಆಚರಿಸುವುದು ವಾಡಿಕೆಯಾಗಿದೆ. ಚಾಮುಂಡೇಶ್ವರಿ ಕರಗದ ದಿನದಂದು ಜಿಲ್ಲಾ ಕೇಂದ್ರದಲ್ಲಿ ಶಾಲಾ-ಕಾಲೆಜುಗಳಿಗೆ ರಜೆ ಘೋಸಲಾಗುತ್ತಿದೆ.

ಭಾವೈಕತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಕ್ಷಿ

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮತ್ತು ಶ್ರೀ ರಾಮ ಚಿತ್ರ ಮಂದಿರದ ಬಳಿ ಇರುವ ಮೈದಾನದಲ್ಲಿ ಕಳೆದೊಂದು ದಶಕದಿಂದ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಾಮರನ್ನು ಆಹ್ವಾನಿಸಿ ನಗರದ ನಾಗೀಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಾಗುತ್ತಿದೆ. ಜಾತಿ ಬೇದ ಮರೆತು ಈ ಕಾರ್ಯಕ್ರಮಗಳಲ್ಲಿ ನಾಗರೀಕರು ಭಾಗವಹಿಸುತ್ತಿದ್ದಾರೆ. ಈ ನಗರದ ಭಾವೈಕ್ಯತೆಗೆ ಮುಖ್ಯ ರಸ್ತೆಯಲ್ಲಿರುವ ಪೀರನ್ ಷಾ ವಲಿ ದರ್ಗಾದಲ್ಲಿ ಪ್ರತಿ ವರ್ಷ ನಡೆಯುವ ಗಂಧ ಮಹೋತ್ಸವ ಕೂಡ ಸಾಕ್ಷಿಯಾಗಿದೆ.

ಎಚ್‌ಡಿಕೆ ಆರಾಧಿಸುವ ದೇವತೆ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಆರಾಧಿಸುವ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರು. ಪ್ರತಿ ಭಾರಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಅಥವಾ ಪ್ರಮುಖ ನಿರ್ಧಾರವನ್ನು ಅನುಷ್ಠಾನಕ್ಕೆ ತರುವ ಮುನ್ನ ಅಮ್ಮನವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರವಷ್ಟೆ ಅವರು ಅನುಷ್ಠಾನಕ್ಕೆ ಮುಂದಾಗುವ ಸಂಪ್ರದಾಯ ಪಾಲಿಸುತ್ತಿದ್ಧಾರೆ. ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಜನತಾ ಜಲಧಾರೆ ಕಾರ್ಯಕ್ರಮಕ್ಕೂ ಮುನ್ನ ಈ ಮಾತೆಗೆ ಪೂಜೆ ಸಲ್ಲಿಸಿದ ನಂತರವೇ ಚಾಲನೆ ಕೊಟ್ಟಿದ್ದಾರೆ. ರಾಮನಗರದಲ್ಲಿ ರಾಜಕೀಯ ಆರಂಭಿಸಿದ್ದು ಸಹ ಇದೇ ದೇವತೆಯ ಕೃಪೆುಂದಲೇ ಎಂದು ಅವರು ಇಂದಿಗೂ ನಂಬಿಕೆ ಇರಿಸಿಕೊಂಡಿದ್ದಾರೆ.

ರಾಮನಗರವೇ ಅಲ್ಲದೆ, ಜಿಲ್ಲೆ ಮತ್ತು ರಾಜ್ಯಾದ್ಯಂತ ಶ್ರೀ ಮಾತೆಗೆ ಭಕ್ತರಿದ್ದಾರೆ. ದಿನನಿತ್ಯ ನೂರಾರು ಭಕ್ತರು ದೇ”ಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಮಂಗಳವಾರ, ಶುಕ್ರವಾರಗಳಂದು ಸುಮಂಗಲಿಯರು ಗಣನೀಯ ಸಂಖ್ಯೆಯಲ್ಲಿ ಆಗಮಿಸಿ ನಿಂಬೆ ದೀಪ ಹಚ್ಚುವುದು ಮುಂತಾಗಿ ಧಾರ್ಮಿಕ ಚಟುವಟಿಕೆಗಳ ಮೂಲಕ ಶ್ರೀ ಮಾತೆಯನ್ನು ಆರಾಧಿಸುವುದು ವಾಡಿಕೆ.

ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು

ರಾಮನಗರ ರಾಜಕೀಯದಲ್ಲಿ ಕೆ.ಶೇಷಾದ್ರಿ (ಶಶಿ) ಅವರ ಹೆಸರು ಪ್ರಮುಖವಾಗಿದೆ. ರಾಮನಗರ ಚನ್ನಪಟ್ಟಣ ಪ್ರಾಧಿಕಾರದ ಅಧ್ಯಕ್ಷರಾಗಿ, ನಗರಸಭೆ ಅಧ್ಯಕ್ಷರಾಗಿ, ಮೈಸೂರು ಎಲೆಕ್ಟ್ರಿಕಲ್ ಕಂಪನಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಕೆ.ಶೇಷಾದ್ರಿ (ಶಶಿ) ಸಧ್ಯ ನಗರಸಭೆಯ ಸದಸ್ಯರಾಗಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದ ಇವರು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.

1990ರಲ್ಲಿ ರಾಮನಗರದಲ್ಲಿ ಕೋಮು ಸಂಘರ್ಷ ನಡೆದು ಪ್ರಮುಖ ಕೋಮುಗಳ ನಡುವಿನ ಸಂಬಂಧ ಹಳಸಿತ್ತು. ಇಡೀ ನಗರದ ಆರ್ಥಿಕ ಸ್ಥಿತಿ ಡೋಲಾಯಮಾನಕ್ಕೆ ತಳ್ಳಿದ ಕೋಮು ದಳ್ಳೂರಿಯ ಬಗ್ಗೆ ಜನಸಾಮಾನ್ಯರು ಹೈರಾಣಾಗಿದ್ದರು. ರೇಷ್ಮೆಗೆ ಖ್ಯಾತಿಯಾಗಿದ್ದ ರಾಮನಗರಕ್ಕೆ ಕೋಮು ಸಂಘರ್ಷದ ಕಳಂಕ ಅಂಟಿಕೊಂಡಿತ್ತು. ಆಗ ಪ್ರವರ್ಧಮಾನದಲ್ಲಿದ್ದ ಕೆ.ಶೇಷಾದ್ರಿಯವರು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗಮಹೋತ್ಸವವನ್ನು ಮೈಸೂರು ದಸರೆಯ ರೀತಿಯಲ್ಲಿ ಎಲ್ಲ ಕೋಮುಗಳ ಸಹಕಾರದಲ್ಲಿ ಅದ್ದೂರಿಯಾಗಿ ನೆರೆವೇರಿಸಲು ನಿರ್ಧರಿಸಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಗಮನ ಸಳೆದಿದ್ದರು, ಕುಮಾರಸ್ವಾಮಿಯವರು ಸಹ ಸಹಕಾರದ ಭರವಸೆ ನೀಡಿದ್ದರಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರಂಭವಾಯಿತು. ಹೀಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿಗೂ ಭಾವೈಕ್ಯತೆಯ ಸಂಕೇತವಾಗಿ ಮುಂದುವರೆದಿದೆ.

ತದ ನಂತರ ಶ್ರೀ ರಾಮ ಚಿತ್ರಮಂದಿರದ ಬಳಿಯ ಮೈದಾನದಲ್ಲಿ ಕಾಂಗ್ರೆಸ್ ಮುಖಂಡ ಸಿ.ಎನ್.ಆರ್ ವೆಂಕಟೇಶ್ ಅವರು ಆಸ್ತಕಿವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರಂಭಿಸಿದ್ದಾರೆ. ಇಂದಿಗೂ ಈ ಎರಡೂ ಕಾರ್ಯಕ್ರಮಗಳನ್ನು ವೀಕ್ಷಿಸಲು ನೆರೆಹೊರೆ ಜಿಲ್ಲೆಗಳಿಂದಲೂ ಸೇರಿದಂತೆ ಲಕ್ಷಾಂತರ ಮಂದಿ ನಾಗರೀಕರು ಆಗಮಿಸುತ್ತಿದ್ದಾರೆ.

ಮದುವಣಗಿತ್ತೆಯಂತೆ ನಗರ ಸಿಂಗಾರ

ಜೂನಿಯರ್ ಕಾಲೇಜು ಮೈದಾನ ಮತ್ತು ಶ್ರೀ ರಾಮ ಚಿತ್ರ ಮಂದಿರದ ಬಳಿಯ ಮೈದಾನಗಳಲ್ಲಿ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಬೆನ್ನಲ್ಲೇ ನಗರದ ಆಯಾ ಬಡಾವಣೆಗಳ ಸಂಘಟನೆಗಳು ನಗರದ ತುಂಬೆಲ್ಲ ವಿದ್ಯುತ್ ದೀಪಗಳು, ತಳಿರು – ತೋರಣಗಳಿಂದ ಸಿಂಗರಿಸುತ್ತಿದ್ದಾರೆ. ಶ್ರೀ ಬನ್ನಿಮಹಾಕಾಳಿ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಗಳನ್ನು ನಗರದ ಆಸ್ತಿಕ ಸಮುದಾಯ ಅತ್ಯಂತ ಭಕ್ತಿ ಶ್ರದ್ದೆಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ.