ಎಚ್ಚರ!!! ಚಳಿಗಾಲದಲ್ಲೇ ಹೃದಯಾಘಾತ ಹೆಚ್ಚು ಅಂತ ಹೃದಯ ತಜ್ಞರ ಅಭಿಪ್ರಾಯ

ರಾಮನಗರ: ಬೇರೆ ಋತುಮಾನಕ್ಕೆ ಹೋಲಿಸಿದರೆ, ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ದೇಹವನ್ನು ಬೆಚ್ಚಗಿರಿಸಿಕೊಳ್ಳುವುದು, ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳುವುದು,  ಮುಂಜಾನೆ ಮನೆ ಹೊರಗೆ ವಾಕಿಂಗ್, ಜಾಗಿಂಗ್ ಮಾಡುವುದು, ಜಂಕ್ ಫುಡ್ ತಿನ್ನುವುದು ಬೇಡ ಎಂದು ಬೆಂಗಳೂರು (ವೈಟ್‌ಫೀಲ್ಡ್)  ಮಣಿಪಾಲ್ ಆಸ್ಪತ್ರೆಯ ಹೃದಯ ತಜ್ಞ  ಡಾ. ಸಂದೇಶ್ ಪ್ರಭು ಜನಸಾಮಾನ್ಯರಿಗೆ ತಿಳುವಳಿಕೆ ಹೇಳಿದ್ದಾರೆ.

Dr.Sandesh Prabhu

ನಗರದ ಶಾಂತಿ ನಿಕೇತನ ವಿದ್ಯಾಸಂಸ್ಥೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 16 ವರ್ಷಗಳ ಕಾಲ 2,80,000 ರೋಗಿಗಳ ಕುರಿತು ನಡೆಸಿದ ಅಭಿಯಯನ ಇದನ್ನು ದೃಢಪಡಿಸಿದೆ. ಚಳಿಗಾಲದಲ್ಲಿ ತಾಪಮಾನ ಕಡಿಮೆಯಾದಂತೆಲ್ಲ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಗಂಭೀರ ಹೃದಯಾಘಾತಕ್ಕೆ ಒಳಗಾಗದ 30 ದಿನಗಳ ಒಳಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಉಳಿದ ಋತುಮಾನಗಳಿಗಿಂದ ಚಳಿಗಾಲದಲ್ಲಿ ಶೇ. 50 ಹೆಚ್ಚಿದೆ ಎಂದು ಎಚ್ಚರಿಸಿದರು.

ಏಕೆ?

ಚಳಿಗಾಲದಲ್ಲಿ ರಕ್ತದ ಹರಿವು ಜಡವಾಗಿರುವ ಸಾಧ್ಯತೆ ಇದೆ. ರಕ್ತ ಹೆಪ್ಪುಗಟ್ಟುತ್ತದೆ, ಇದು ಹೃದಯಕ್ಕೆ ಹೆಚ್ಚಿನ ಕಂಟಕಪ್ರಾಯವಾಗಲಿದೆ. ಚಳಿಗಾಲದಲ್ಲಿ ದೇಹವು ಹೆಚ್ಚಿನ ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡುವುದರಿಂದಲೂ ಹೃದಯದ ಸಮಸ್ಯೆಯನ್ನು ವೃದ್ದಿಸುತ್ತದೆ. ಅಲ್ಲದೆ ಚಳಿಗಾಲದಲ್ಲಿ ವಿವಿಧ ಸೋಂಕು ರೋಗಗಳು ಮತ್ತು ಶೀತ ತಗಲುವ ಸಾಧ್ಯತೆ ಇರುವುದರಿಂದ ಇದು ಹೃದಯದ ತೊಂದರೆಯನ್ನು ಸಂಕೀರ್ಣ ಮಾಡುತ್ತದೆ ಎಂದರು.

ಲಕ್ಷಣಗಳೇನು?

ಎದೆ ನೋವು, ಎದೆ ಭಾರ, ಎದೆ ಉರಿ, ಉಸಿರಾಟದಲ್ಲಿ ಸಮಸ್ಯೆ, ಅತಿಯಾದ ಸುಸ್ತು, ಎದೆ ನೋವಿನೊಂದಿಗೆ ಬೆವರುವುದು, ಎಡಗೈ ನೋವು ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿಗೆ ಹೋಗುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ವೈದ್ಯರ ಲಭ್ಯತೆ ತಡವಾಗುತ್ತದೆ ಎನಿಸಿದಲ್ಲಿ ಆಸ್ಪಿರಿನ್‍ ಮಾತ್ರೆ ಸೇವಿಸುವುದು ಒಳಿತು ಎಂದಿದ್ದಾರೆ.

ಮುಂಜಾಗ್ರತೆ ಏನು?

ವಿಶೇಷವಾಗಿ ಹೃದ್ರೋಗಿಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸಲೇ ಬೇಕಾಗಿದೆ. ಜನಸಾಮಾನ್ಯರು ಸಹ ಮೊದಲಿಗೆ ತಮ್ಮ ದೇಹವನ್ನು ಬೆಚ್ಚಗಿರಿಸಲು ಶ್ರಮವಹಿಸಬೇಕಾಗಿದೆ. ಇದು ರಕ್ತದೊತ್ತಡ, ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಸರಾಗ ಕಾರ್ಯಕ್ಕೆ ಆಮ್ಲಜನಕದ ಬೇಡಿಕೆ ಪ್ರಮಾಣ ಹೆಚ್ಚಿಸುತ್ತದೆ. ಆರೋಗ್ಯವಂತ ಮನುಷ್ಯ ಈ ಬದಲಾವಣೆಗೆಗಳಿಗೆ ಒಗ್ಗಿಕೊಳ್ಳಬಹುದು, ಆದರೆ, ಹೃದ್ರೋಗಿ, ಹೃದಯಕ್ಕೆ ಒತ್ತಡ ಹೆಚ್ಚಿದಾಗ ಒಗ್ಗಿಕೊಳ್ಳುವುದು ಸುಲಭವಲ್ಲ.

ಧೂಮಪಾನ, ಮಧ್ಯಪಾನ, ಜಂಕ್ ಫುಡ್, ಕರಿದ ಪದಾರ್ಥಗಳ ಸೇವನೆ, ಅತಿಯಾದ ಮಾಂಸಾಹಾರ ಸೇವನೆ ಬೇಡ. ಸ್ಥೂಲಕಾಯ, ಬಿಪಿ, ಶುಗರ್ ಕಾಯಿಲೆ ಇರುವವರು ಇನ್ನಷ್ಟು ಎಚ್ಚರವಹಿಸಬೇಕಾಗಿದೆ ಎಂದರು. ವೈದ್ಯರ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸುತ್ತ, ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ತಂದುಕೊಂಡರೆ, ಹೃದ್ರೋಗದಿಂದ ದೂರ ಉಳಿಯಬಹುದು ಎಂದರು.

ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ನಂದಕುಮಾರ್, ಹಿರಿಯ ಪತ್ರಕರ್ತರುಗಳಾದ ಸು.ತ.ರಾಮೇಗೌಡ, ಚಲವರಾಜ್ ಇದ್ದರು.