ಮುಂದುವರೆದ ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರ

ರಾಮನಗರ: ತಮ್ಮ ನೌಕರಿಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ಪೌರ ಸಂಸ್ಥೆಗಳ ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಅಹೋರಾತ್ರಿ ಅನಿಧಿಷ್ಟಾವಧಿ ಮುಷ್ಕರ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿತ್ತು.

ಶಾಸಕಿ ಅನಿತಾ ಭೇಟಿ

ಮುಷ್ಕರ ಸ್ಥಳಕ್ಕೆ ಶನಿವಾರ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದರು. ಈ ವೇಳೆ

ಮುಷ್ಕರ ನಿರತ ಪೌರಕಾರ್ಮಿಕರು ತಮ್ಮ ಸಮಸ್ಯೆಯನ್ನು ವಿವರಿಸಿದರು. ಎಲ್ಲವನ್ನು ಆಲಿಸಿದ ಶಾಸಕರು ಮಾತನಡಿ ಮುಷ್ಕರ ನಿರತ ಪೌರಕಾರ್ಮಿಕರಿಗೆ ಧೈರ್ಯ ತುಂಬಿದರು. ಸದನದಲ್ಲಿ ನಿಮ್ಮ ದನಿ ಎತ್ತುತ್ತೇನೆ ಎಂದು ಭರವಸೆ ಕೊಟ್ಟರು.

ಪ್ರತಿಭಟನಾ ನಿರತ ಮಹಿಳಾ ಪೌರಕಾರ್ಮಿಕರು ಶಾಸಕರೊಂದಿಗೆ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು. ತಮಗೆ ಶೌಚಾಲಯ ವ್ಯವಸ್ಥೆಯ ಕೊರತೆ ಇರುವುದಾಗಿ ಗಮನ ಸೆಳೆದರು. ಶಾಸಕರು ತಕ್ಷಣ ನಗರಸಭೆಯ ಆಯುಕ್ತ ನಂದಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ತದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಲಿಸಿದ್ದೇನೆ. ನೇರ ನೇಮಕಾತಿ ಮೂಲಕ ಮಾಡಿಕೊಳ್ಳದೆ ಗುತ್ತಿಗೆದಾರನ ಮೂಲಕ ನೇಮಕಾತಿಗಳು ಆಗಿವೆ. ಇಎಫ್, ಪಿಎಫ್‌ಗಳು ಸಹ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬ ದೂರುಗಳಿವೆ. ಮುಂದಿನ ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ಪ್ರತಿಭಟನೆ ಮುಂದುವರೆಯಲಿದೆ- ಚಲಪತಿ

ಗುತ್ತಿಗೆ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಚಲಪತಿ ಮಾತನಾಡಿ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೆಗೆ ಮುಷ್ಕರ ಮುಂದುವರೆಯಲಿದೆ ಎಂದರು. ಅಹೋರಾತ್ರಿ ಮುಷ್ಕರ ರಾಜ್ಯಾದ್ಯಂತ ನಡೆಯುತ್ತಿದೆ. ಮುಖ್ಯಮಂತ್ರಿಗಳು ವೇತನ ಹೆಚ್ಚಳದ ಮಾತುಗಳನ್ನುಹೇಳಿದ್ದಾರೆ. ಆದರೆ ಇದನ್ನೆಲ್ಲ ನಂಬಲು ಸಾಧ್ಯ”ಲ್ಲ. ನೌಕರ ಖಾಯಂ ಆಗದ ಹೊರತು ಮುಷ್ಕರ ನಿಲ್ಲದು ಎಂದರು.