ಸಿ.ಪಿ.ಯೋಗೇಶ್ವರ್‌ಗೆ ಕೊಟ್ಟಷ್ಟೇ ಅನುದಾನವನ್ನು ಎಲ್ಲ ಎಂ.ಎಲ್.ಸಿಗಳಿಗೂ ಸರ್ಕಾರ ಕೊಡಬೇಕು – ಶಾಸಕಿ ಅನಿತಾ ಆಗ್ರಹ

ರಾಮನಗರ: 09 ಅಕ್ಟೋಬರ್ 2022:: ರಾಜ್ಯದ ಬೇರೆ ಯಾವ ಎಂ.ಎಲ್.ಸಿ.ಗೂ ಇಷ್ಟು ಪ್ರಮಾಣದ ಅನುದಾನ ಕೊಟ್ಟಿಲ್ಲ, ಸಿ.ಪಿ.ಯೋಗೇಶ್ವರ್ ಅವರಿಗೆ ಕೊಟ್ಟ ಹಾಗೆ ನಮ್ಮ ಪಕ್ಷದ ಎಂ.ಎಲ್.ಸಿಗಳಿಗೂ ಸರ್ಕಾರ ಅನುದಾನ ಬಿಡುಗಡೆ ಮಾಡಲಿ ಎಂದು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಲೂಕಿನ ಹರೀಸಂದ್ರ ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ರಾವಿಷಿಂಗ್ ರೆಟ್ರಿಟ್ ರೆಸಾರ್ಟ್ ಭೇಟಿ ಕೊಟ್ಟು ಮಾಲೀಕರಿಗೆ ಶುಭಾಶಯ ಕೋರಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಚನ್ನಪಟ್ಟಣದಲ್ಲಿ ಇತ್ತೀಚೆಗೆ ಶಿಷ್ಟಾಚಾರ ಉಲ್ಲಂಘನೆ ಪ್ರಕರಣದ ವಿಚಾರದಲ್ಲಿ ಅವರು  ಪ್ರತಿಕ್ರಿಯೆ ನೀಡಿದರು. ಸ್ಥಳೀಯ ಶಾಸಕರನ್ನು ಕಡೆಗಣಿಸಿ ಒಬ್ಬ ಎಂ.ಎಲ್.ಸಿಗೆ 50 ಕೋಟಿ ರೂ ಅನುದಾನ ಬಿಡುಗಡೆ ಮಾಡಿರುವುದು ಸರಿಯಲ್ಲ. ಅಲ್ಲಿನ ಶಾಸಕರಾದ ಎಚ್.ಡಿ.ಕುಮಾರಸ್ವಾಮಿಯವರು ಎಂದಿಗೂ ಅಭಿವೃದ್ದಿ ವಿಚಾರದಲ್ಲಿ ವಿರೋಧಿಸುವುದಿಲ್ಲ. ಶಾಸಕರಾಗಿ ಕಾಮಗಾರಿಗೆ ಅವರೇ ಚಾಲನೆ ನೀಡಬೇಕಿತ್ತು. ಆದರೆ ಅವರಿಗೂ ವಿಚಾರ ತಿಳಿಸದೆ ಕಾಮಗಾರಿಗೆ ಚಾಲನೆ ನೀಡಿರುವುದು ಸರಿಯಲ್ಲ. ಇಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಒಬ್ಬ ಎಂ.ಎಲ್.ಸಿಗೆ 50 ಕೋಟಿ ರೂ ಆನುದಾನ ಬಿಡುಗಡೆಯಾಗಿದೆ. ಬೇರೆ ಯಾವ ಎಂ.ಎಲ್.ಸಿಗಳಿಗೂ ಈ ಪ್ರಮಾಣದ ಅನುದಾನ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಸಿ.ಪಿ.ಯೋಗೇಶ್ವರ್ ಒಬ್ಬರೇ ಎಂ.ಎಲ್.ಸಿ ಅಲ್ಲ. ನಮ್ಮ ಪಕ್ಷದವರು ಇಷ್ಟೇ ಪ್ರಮಾಣದ ಅನುದಾನ ಕೇಳುತ್ತಿದ್ದಾರೆ. ಎಲ್ಲ ಎಂ.ಎಲ್.ಸಿಗಳಿಗು ಇದೇ ರೀತಿಯಲ್ಲಿ ಅನುದಾನ ಕೊಡಬೇಕು. ಬೇರೆ ಕ್ಷೇತ್ರಗಳ ಅಭಿವೃದ್ದಿಗೂ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದರು. ಈ ವೇಳೆ ಜೆಡಿಎಸ್ ಪ್ರಮುಖರು ಹಾಜರಿದ್ದರು.

………..