ಯಾರು ಬೊಬ್ಬೆ ಹೊಡೆದರು ಬಿಜೆಪಿ ಮತ್ತೆ ಅಧಿಕಾರಕ್ಕೆ – ಬಿ.ಎಸ್.ಯಡಿಯೂರಪ್ಪ

ರಾಮನಗರ: ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಯಾರು ಏನೇ ಬೊಬ್ಬೆ ಹೊಡೆದರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲೂಕಿನ ಹರೀಸಂದ್ರ ಗ್ರಾಮದಲ್ಲಿ ತಮ್ಮ ಆಪ್ತ ಕೆ.ಆರ್.ಐ.ಡಿ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ಮಾಲೀಕತ್ವದ Ravishing Retreat Resort ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿ.ಎಸ್.ವೈ, ಭಾರತ್ ಜೋಡೋ ಯಾತ್ರೆಗೆ ಹೆದರಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿಲ್ಲ, ನಾನು ಆ ಮನುಷ್ಯನಿಗೆ ಪ್ರಶ್ನೆ ಕೇಳಲು ಬಯಸುತ್ತೇನೆ. ಉತ್ತರ ಪ್ರದೇಶದಲ್ಲಿ ಅವರ ತಂಗಿ (ಪ್ರಿಯಾಂಕ ವಾದ್ರ) ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರನ್ನು ಅಭ್ಯರ್ಥಿ ಮಾಡಿದ್ದರು. ಆದರೂ 2 ಸೀಟ್ ಗೆಲ್ಲಲು ಅಗಲಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ನ್ ಅಡ್ರೆಸ್ ಇಲ್ಲದಂತಾಗಿದೆ. ಎಲ್ಲೋ ಒಂದೆರಡು ಕಡೆ ಇದ್ದು, ಕರ್ನಾಟಕದಲ್ಲಿ ಉಸಿರಾಡುತ್ತಿದೆ. ಹಾಗಾಗಿ ಇಲ್ಲಿಗೆ ಬಂದು ಮನಬಂದಂತೆ ಮಾತನಾಡಿದರೆ ಪ್ರಯೋಜನ ಇಲ್ಲ. ಕರ್ನಾಟಕದಲ್ಲಿಯೂ ಸಹ ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲ್ಲ ಎಂದು ರಾಹುಲ್ ಗಾಂಧಿ ಅವರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ತಾವು ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಎರಡು ತಂಡಗಳು ರಾಜ್ಯಾದ್ಯಂತ ಪ್ರವಾಸ ಆರಂಭಿಸುತ್ತಿರುವುದಾಗಿ ತಿಳಿಸಿದರು. ಕೆಲವರು ನಾನೇ ಸಿಎಂ, ನಾನೇ ಉಪಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದೆಲ್ಲವೂ ಸಾಧ್ಯವಾಗುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

Ravishing Retreat Resort

ಬಿಜೆಪಿ ದೀನ ದಲಿತರ ಪಕ್ಷವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಗೆ ಪ್ರತಿಕ್ರಿುಸಿದ ಅವರು, ಬಿಜೆಪಿ ದೀನ ದಲಿತರು, ಎಲ್ಲ ಸಮುದಾಯದವರ ಹಾಗೂ ಪ್ರಧಾನಿ ನರೇಂದ್ರ ಮೋದಿರವರ ಪಕ್ಷವಾಗಿದೆ ಎಂದರು.

2023 ಕ್ಕೆ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂದು ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಹಿರಿಯರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಅವರ ಮಗನ ಮೇಲಿನ ಮಮತೆಗೆ ಆ ಮಾತು ಹೇಳಿದ್ದಾರೆ. ಅದನ್ನು  ಬೇಡ ಎನ್ನಲು ನಾನ್ಯಾರು ಎಂದರು.

ರೈಲೊಂದಕ್ಕೆ ಟಿಪ್ಪು ಹೆಸರನ್ನು ಬದಲಿಸಿರುವ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಬಿಜೆಪಿಯ ಧ್ವೇಷದ ರಾಜಕರಣ ಎಂದಿದ್ದಾರೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಅವರಿಗೆ ಅಲ್ಪಸಂಖ್ಯಾತರ ಓಲೈಕೆ ಮಾಡುವ ಚಟ. ಹಾಗಾಗಿ ಈ ರೀತಿ ಮಾತನಾಡುತ್ತಾರೆ. ರೈಲಿಗೆ ಒಡೆಯರ್ ಹೆಸರು ಇಟ್ಟಿರುವುದನ್ನು ರಾಜ್ಯ, ದೇಶದ ಜನತೆ ಸ್ವಾಗತ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ  ಕೆಲವರಿಗೆ ಬೇಸರ ಆಗಿರಬಹುದು ಅಷ್ಟೆ ಎಂದು ವ್ಯಂಗ್ಯವಾಡಿದರು.

ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಅದನ್ನು ಮುಖ್ಯಮಂತ್ರಿಗಳ ಬಳಿ ಕೇಳಿ, ನನ್ನನ್ನು ಏನು ಕೇಳಬೇಡಿ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಕೆ.ಆರ್.ಐ.ಡಿ.ಸಿ.ಎಲ್ ಅಧ್ಯಕ್ಷ ರುದ್ರೇಶ್, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ, ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜು ಗೌಡ, ಕನಕಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗನ್ನಾಥ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಎಚ್.ಎಸ್.ಮುರಳೀಧರ್, ಎಸ್.ಆರ್. ನಾಗರಾಜು, ಹರೀಸಂದ್ರ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಸದಸ್ಯ ಪ್ರವೀಣ್ ಗೌಡ, ಮುಖಂಡರಾದ ರಮೇಶ್, ಮಂಜು ಮುಂತಾದವರು ಹಾಜರಿದ್ದರು.

………………..

ಐಷಾರಾಮಿ ರೆಸಾರ್ಟ್‌ನಲ್ಲಿ ಕನ್ನಡವೇ ಮಾಯ!

ರಾಮನಗರ: ತಾಲೂಕಿನ ಹರೀಸಂದ್ರ ಗ್ರಾಮದ ಬಳಿ ನೂತನವಾಗಿ ಆರಂಭವಾಗಿರುವ ರ್ಯಾವಿಷಿಂಗ್ ರಿಟ್ರೀಟ್ ರೆಸಾರ್ಟ್ ತನ್ನ ಹೆಸರಿಗೆ ತಕ್ಕಂತೆ ನಿರ್ಮಾಣವಾಗಿದೆ. ಸುಮಾರು 8 ಎಕರೆ ವಿಶಾಲವಾದ ಪ್ರದೇಶದಲ್ಲಿ ಎತ್ತರದ ಸ್ಥಳದಲ್ಲಿರುವ ಈ ರೆಸಾರ್ಟ್ ಹಸಿರು ಸಿರಿಯ ಮಡಿಲಲ್ಲಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಕೆಲವು ಸಾಹಸ ಕ್ರೀಡೆಗಳು ಸಹ ಅಳವಡಿಕೆಯಾಗಲಿದೆ ಎಂದು ಮಾಲೀಕ ಎಂ.ರುದ್ರೇಶ್ ತಿಳಿಸಿದ್ದಾರೆ.

ಆದರೆ ಅಧುನಿಕತೆಯನ್ನು ಮೈಗೂಡಿಸಿಕೊಂಡಿರುವ ರೆಸಾರ್ಟ್ನಲ್ಲಿ ಎಲ್ಲವೂ ಆಂಗ್ಲಮಯ, ಕನ್ನಡದ ಅಕ್ಷರಗಳು ಇಲ್ಲಿ ಮಾಯವಾಗಿದೆ.

…………..