ಬ್ಯಾಂಕ್‌ಗಳ ಮೂಲಕ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ – ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ

ರಾಮನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಜಿಲ್ಲೆಯಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೂಲಕ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಸಾಲ ಸೌಲಭ್ಯ ದೊರಕಿಸಿ ಕೊಡುತ್ತಿದೆ ಎಂದು ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ ತಿಳಿಸಿದರು.

ಬ್ಯಾಂಕ್ ಮೂಲಕ ಸಾಲ ಸೌಲಭ್ಯ

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿದರು. ಸ್ವಸಹಾಯ ಸಂಘದ ಸದಸ್ಯರು ಸ್ವ ಉದ್ಯೋಗ ಕೈಗೊಳ್ಳುವುದು, ಕೃಷಿ, ಹೈನುಗಾರಿಕೆ ಹೀಗೆ ವಿವಿಧ ಕಸುಬುಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಸಾಲ ಸೌಲಭ್ಯ ದೊರೆಯುತ್ತಿದೆ. ಗುಂಪುಗಳ ಸಾಲ ಮರುಪಾವತಿಗೆ ಟ್ರಸ್ಟ್ ಗ್ಯಾರಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದೆ. ಶೇ 100 ಮರುಪಾವತಿ ಮಾಡುವುದರ ಮೂಲಕ ಪಾಲುದಾರ ಬಂಧುಗಳು ಸಾಲದ ಸದ್ವಿನಿಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಸಾಲಗಾರ ಸದಸ್ಯರಿಗೆ ವಿಮಾ ಸೌಲಭ್ಯ

ಸ್ವಸಹಾಯ ಸಂಘಗಳ ಸಾಲ ಪಡೆದ ಸದಸ್ಯರಿಗೆ ಜೀವ ಭದ್ರತೆಯ ಉದ್ದೇಶದಲ್ಲಿ ಭಾರತೀಯ ಜೀವ ವಿಮಾ ನಿಗಮದ ಮೂಲಕ ಸಾಲ ಪಡೆದ ಸದಸ್ಯರು ಮರಣಪಟ್ಟ ಸಂದರ್ಭದಲ್ಲಿ ಸಾಲಕ್ಕೆ ವಿಮಾ ಮೊತ್ತವನ್ನು ವಜಾಕರಿಸುವ ಸವಲತ್ತನ್ನು ಟ್ರಸ್ಟ್ ಕೊಡಿಸಿದೆ ಎಂದರು. ಮಹಿಳಾ ಸ್ವಾವಲಂಬನೆ ವಿಚಾರದಲ್ಲಿ ಟ್ರಸ್ಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ 125 ಕೇಂದ್ರಗಳ ಮೂಲಕ 5 ಸಾವಿರ ಸದಸ್ಯರು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದಕುನ್ನು ನಡೆಸಲು ಈ ಕಾರ್ಯಕ್ರಮಗಳು ನೆರವಾಗುತ್ತಿದೆ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕೃಷಿ ಅಭಿವೃದ್ದಿ ವಿಚಾರದಲ್ಲಿ 26 ಕಾರ್ಯಕ್ರಮಗಳನ್ನು ಅನುಷ್ಠಾನಗೊಂಡಿವೆ. ಕೃಷಿಯಲ್ಲಿ ಯಾಂತ್ರೀಕರಣಕ್ಕೆ ರೈತರಿಗೆ ಕೃಷಿ ಯಂತ್ರಧಾರೆ ಯೋಜನೆ ಮೂಲಕ ಸಹಕಾರ ನೀಡಲಾಗುತ್ತಿದೆ. ಸಮಗ್ರ ಕೃಷಿ, ಮಿಶ್ರ ಬೆಳೆ ಮುಂತಾದ ವಿಚಾರದಲ್ಲಿ ರೈತರಿಗೆ ತರಬೇತಿ ಕೊಡಲಾಗುತ್ತಿದೆ. ಗ್ರಾಮಪಂಚಾಯ್ತಿಗಳ  ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಈವರೆಗೆ 6 ಕೆರೆಗಳ ಹೂಳೆತ್ತಲಾಗಿದೆ ಎಂದರು.

ನಿರ್ಗತಿಕರಿಗಾಗಿ ಟ್ರಸ್ಟ್ ಮೂಲಕ ಮಾಸಿಕ 750 ರೂ ನಿಂದ 1500 ರೂವರೆಗೆ ಮಾಶಾಸನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 215 ಮಂದಿ ಈ ಸವಲತ್ತು ಪಡೆಯುತ್ತಿದ್ದಾರೆ ಎಂದರು.

ಪರಿಸರ ಕಾಳಜಿ

ಸಾಮಾಜಿಕ ಕಳಕಳಿ ಅಲ್ಲದೆ ಟ್ರಸ್ಟ್‌ಗೆ ಪರಿಸರ ಕಾಳಜಿಯೂ ಇದೆ. ಹೀಗಾಗಿಯೇ ಹಸಿರು ಇಂಧನ ಕಾರ್ಯಕ್ರಮ ಅನುಷ್ಠಾನಗೊಂಡಿದೆ. ಗ್ರಾಮೀಣ ಭಾಗದಲ್ಲಿ ಸೌರ ವಿದ್ಯುತ್ ಮೂಲಕ ಕಾರ್ಯನಿರ್ವಹಿಸುವ ದೀಪಗಳು, ಬಿಸಿ ನೀರಿನ ಘಟಕಗಳು, ಜಿರಾಕ್ಸ್ ಮೆಷಿನ್, ಕುಲುಮೆ ಯಂತ್ರ, ಟೈಲರಿಂಗ್ ಮೆನ್‌ಗಳನ್ನು ನೀಡಲಾಗಿದೆ ಜಿಲ್ಲೆಯಲ್ಲಿ 21 ಸಾವಿರ ಕುಟುಂಬಗಳು ಈ ಸವಲತ್ತು ಪಡೆದುಕೊಂಡಿದೆ. 13200 ಕುಟುಂಬಗಳಿಗೆ ಸೌರ ಶಕ್ತಿಯ ಆಧಾರದ ಕುಕ್ ಸ್ಟವ್‌ಗಳನ್ನು ವಿತರಿಸಲಾಗಿದೆ ಎಂದರು.

ದುರ್ಬಲ ಕುಟುಂಬಗಳಿಗೆ ನೆರವು

ಜಿಲ್ಲೆಯಲ್ಲಿ ಅತಿ ದುರ್ಬಲ ಮತ್ತು ಅಸಾಹಯಕ ಸ್ಥಿತಿಯಲ್ಲಿರುವ ಕುಟುಂಬಗಳ ಸರ್ವೆ ನಡೆಸಿ ಅವರಿಗೆ ಬಟ್ಟೆ, ಬರೆ, ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಇಂತಹ ನಿರ್ಗತಿಕರಿಗೆ ಪ್ರತಿ ತಿಂಗಳು ಆಹಾರದ ಕಿಟ್‌ಗಳನ್ನು ಒದಗಿಸಲು ಚಿಂತನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ತಲಾ 1500 ರೂ ಮೌಲ್ಯದ ವಾತ್ಸಲ್ಯ ಕಿಟ್‌ಗಳನ್ನು 125 ಸದಸ್ಯರಿಗೆ ವಿತರಿಸಲಾಗಿದೆ. 32 ವಾತ್ಸಲ್ಯ ಕುಟುಂಬಗಳಿಗೆ ಹೊಸ ಮನೆ ರಚನೆ, ಮನೆ ದುರಸ್ಥಿ, ಶೌಚಾಲಯ ನಿರ್ಮಾಣ, ಸೌರ ವಿದ್ಯುತ್ ಅಳವಡಿಕೆ ಮಾಡಿಕೊಡಲಾಗಿದೆ ಎಂದರು.

ದೇವಾಲಯಗಳ ಸ್ವಚ್ಚತಾ ಅಭಿಯಾನ, ಮದ್ಯವ್ಯಸನಿಗಳಿಗೆ ಮದ್ಯವ್ಯರ್ಜನಾ ಕಾರ್ಯಕ್ರಮಗಳು, ಜಿಲ್ಲೆಯಲ್ಲಿ 202 ಹಾಲು ಉತ್ಪಾದಕ ಸಹಕಾರಿ ಸಂಘಗಳ ಕಟ್ಟಡಗಳ ನಿರ್ಮಾಣಕ್ಕೆ 1.23 ಕೋಟಿ ರೂ ವಿನಿಯೋಗಿಸಲಾಗಿದೆ. ಸಮುದಾಯ ಭವನ ನಿರ್ಮಾಣ, ಗ್ರಂಥಾಲಯ ಕಟ್ಟಡ ನಿರ್ಮಾಣ, ರುದ್ರಭೂಮಿ ಅಭಿವೃದ್ದಿ ಇಂತಹ ಅಭಿವೃಧ್ದಿ ಕಾರ್ಯಗಳ 670 ಕಾರ್ಯಕ್ರಮಗಳಿಗೆ 3.20 ಕೋಟಿ ರೂ ಅನುದಾನವನ್ನು ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ನಿರ್ದೇಶಕ ಜಯಕರ ಶೆಟ್ಟಿ, ಯೋಜನಾಧಿಕಾರಿಗಳಾದ ರೇಷ್ಮ, ಅಶ್ವಿನ್, ನಾಗವೇಣಿ, ಗೋಪಾಲಕೃಷ್ಣ, ನಾಗಭೂಷಣ ಪೈ, ಮುರಳೀಧರ್ ಮತ್ತು ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ವೀರೇಂದ್ರ ಹೆಗ್ಗಡೆ ರಾಜ್ಯ ಸಭೆಗೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರಾಜ್ಯ ಸಭಾ ಸದಸ್ಯರಾಗಿ ನೇಮಕವಾಗುತ್ತಿರುವ ಬಗ್ಗೆ ಅವರು ಟ್ರಸ್ಟ್‌ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

…………