ರಂಗೋಲಿ ಭಾರತೀಯ ಸಂಸ್ಕೃತಿಯ ಪ್ರತೀಕ: ಶಾಸಕಿ ಅನಿತಾ ಕುಮಾರಸ್ವಾಮಿ

ರಾಮನಗರ: ರಂಗೋಲಿ ಕೇವಲ ಚಿತ್ರವಲ್ಲ, ಅದು ಭಾರತೀಯ ಸಂಸ್ಕೃತಿಯ ಪ್ರತೀಕ. ಆಧುನಿಕತೆಯ ಭರಾಟೆಯಲ್ಲಿ ರಂಗೋಲಿ ಕಲೆಯು ನಶಿಸಬಾರದು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಹಳ್ಳಿಮಾಳ ಗ್ರಾಮದಲ್ಲಿ ಆ ಭಾಗದ ಜೆಡಿಎಸ್ ಪ್ರಮುಖರು ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ  ಅವರು ಮಾತನಾಡಿದರು. ಮುಂಜಾನೆ ಎದ್ದು, ನೆಲವನ್ನು ಸೆಗಣಿಯಿಂದ ಸಾರಿಸಿ, ರಂಗೋಲಿ ಹಾಕುವುದು ಶುಭದ ಸಂಕೇತ. ಮನೆಯ ಮುಂದೆ ರಂಗೋಲಿ ಹಾಕಿದರೆ ಕೆಡುಕು ಉಂಟಾಗುವುದಿಲ್ಲ ಎಂಬ ನಂಬಿಕೆ ನಮ್ಮ ಹಿರಿಯರದಾಗಿತ್ತು ಎಂದರು.

ನಾವಿಂದು ಆಚರಿಸುವ ಪ್ರತಿಯೊಂದು ಸಂಪ್ರದಾಯವೂ ವೈಜ್ಞಾನಿಕವಾದುದಾಗಿದೆ. ತಮ್ಮ ಅನುಭವದ ಆಧಾರದ ಮೇಲೆ ಪ್ರತಿಯೊಂದನ್ನೂ ಆಚರಿಸಿಕೊಂಡು ಬಂದಿದ್ದಾರೆ. ಆದರೆ, ಇಂದಿನ ಯುವ ಪೀಳಿಗೆಯು ಅರಿವಿನ ಕೊರತೆಂದ ಸಂಪ್ರದಾಯಗಳ ಆಚರಣೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಕುಟುಂಬದ ಹಿರಿಯರು ಸಂಪ್ರದಾಯ ಆಚರಣೆಗಳ ಉಪಯುಕ್ತತೆ ಬಗ್ಗೆ ಯುವಜನತೆಗೆ ತಿಳಿಸಿಕೊಡಿ ಎಂದು ಸಲಹೆ ನೀಡಿದರು. 

ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನನ್ನ ಆಶಯವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು. 2023ರ ಚುನಾವಣೆಯ ಮೂಲಕ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಮತ್ತಷ್ಟು ಅಭಿವೃದ್ದಿಗೆ ಜೆಡಿಎಸ್‍ ಪಕ್ಷದ ಬಗ್ಗೆ ವಿಶ‍್ವಾಸ ಮುಂದುವರೆಸಿ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿ ಸಿಎಂ ಆದಾಗ ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದರು. ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾದರು. ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿ ಇಡೀ ದೇಶದಲ್ಲಿಯೇ ಉತ್ತಮ ಮುಖ್ಯಮಂತ್ರಿ ಎಂಬ ಬಿರುದು ಗಳಿಸಿದ್ದರು. ಎರಡನೇ ಬಾರಿ ಸಿಎಂ ಆದಾಗ ಜಿಲ್ಲೆಯ ಜನರಿಗೆ ನೀರೊದಗಿಸಲು 456 ಕೋಟಿ ವೆಚ್ಚದಲ್ಲಿ ಸತ್ತೇಗಾಲ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದು ಪೂರ್ಣಗೊಂಡರೆ ದಿನದ 24 ತಾಸು ಕುಡಿಯುವ ನೀರು ದೊರೆಯಲಿದೆ. ಕೃಷಿ ಉದ್ದೇಶಕ್ಕಾಗಿ ಹಲವಾರು ಸಣ್ಣಸಣ್ಣ ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ರಸ್ತೆ ಅಭಿವೃದ್ಧಿ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ನಮ್ಮ ಕುಟುಂಬದ ಮೇಲೆ ನೀವಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಮುಂದೆಯೂ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಹೀಗೇ ಮುಂದುವರಿಯಲಿ ಎಂದರು.

ಹಳ್ಳಿಮಾಳ ವೃತ್ತದಲ್ಲಿ ಆಯೋಜಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹರೀಸಂದ್ರ ಗ್ರಾಪಂ ಅಧ್ಯಕ್ಷೆ ಆಶಾ ಮಂಚೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ರಾಜ್ಯ ವಕ್ತಾರ ಬಿ.ಉಮೇಶ್, ಮಂಚೇಗೌಡ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಪಾದರಹಳ್ಳಿ ರಾಮು, ಪುಟ್ಟಲಕ್ಷ್ಮಮ್ಮ, ದೇವಾಜಮ್ಮ, ಚೌಳೂರಯ್ಯ, ಜಿ.ಟಿ.ಕೃಷ್ಣ, ರವಿ, ನಾಗಯ್ಯ, ಹನುಮಂತೇಗೌಡನದೊಡ್ಡಿ ರಾಮಣ್ಣ, ನಾಗರಾಜು, ಜೈಕುಮಾರ್, ವೆಂಕಟರಾಮು, ಜಯರಾಮ, ಬಾಬು ಮತ್ತಿತರರು ಭಾಗವಹಿಸಿದ್ದರು.

………………