ಉಪಟಳ ನೀಡುತ್ತಿರುವ ಎರಡು ಗಂಡು ಕಾಡಾನೆಗಳ ಸೆರೆಗೆ ಆದೇಶ

* ರಾಮನಗರ, ಚನ್ನಪಟ್ಟಣ, ಸಾತನೂರು ವಲಯಗಳಲ್ಲಿ ಗ್ರಾಮಸ್ಥರನ್ನು ಕಾಡುತ್ತಿದ್ದ ಆನೆಗಳ ಸೆರೆಗೆ ಸಿಕ್ಕಿತು ಅನುಮತಿ

* ಸೆರೆಹಿಡಿದ ನಂತರ ತೀರುವುದೆ ಬವಣೆ?

ರಾಮನಗರ:  ಜಿಲ್ಲೆಯ ರಾಮನಗರ, ಚನ್ನಪಟ್ಟಣ ಮತ್ತು ಸಾತನೂರು ಅರಣ್ಯ ವಲಯಗಳಲ್ಲಿ ಉಪಟಳ ನೀಡುತ್ತಿರುವ 35 ವರ್ಷ ಎರಡು ಒಂಟಿ ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ, ವನ್ಯಜೀವಿ (ರಕ್ಷಣಾ) ಕಾಯ್ದೆ, 1972ರ ಸೆಕ್ಷನ್ 11(1)(ಎ)ರ ಅನ್ವಯ ಸೆರೆಹಿಡಿಯುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ರಾಮನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಎಲ್ಲೆಲ್ಲಿ ಸಮಸ್ಯೆ ಇದೆ?

ಸಾಂದರ್ಭಿಕ ಚಿತ್ರ

ಕೆಲವು ತಿಂಗಳುಗಳಿಂದ ರಾಮನಗರ ತಾಲೂಕು, ಚನ್ನಪಟ್ಟಣ ತಾಲೂಕು ಹಾಗೂ ಕನಕಪುರ ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳವನ್ನು ತಡೆಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದರು. ಕೃಷಿ, ತೋಟಗಾರಿಕೆ ಬೆಳೆಗಳು, ಆಸ್ತಿ ನಷ್ಟವಾಗುತ್ತಿರುವ ಬಗ್ಗೆ ದೂರಿದ್ದರು, ಈ ಹಿನ್ನೆಲೆಯಲ್ಲಿ ರಾಮನಗರ ವಿಬಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ತಮ್ಮ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಉಪಟಳ ಕೊಡುತ್ತಿರುವ ಎರಡು ಆನೆಗಳನ್ನು ಸೆರೆ ಹಿಡಿಯಲು ಅನುಮತಿ ಕೊಡುವಂತೆ ಮನವಿ ಮಾಡಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವರದಿಯನ್ನು ಆಧರಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಈ ಆದೇಶ ಹೊರೆಡಿಸಿದ್ದಾರೆ.

ಎಲ್ಲೆಲ್ಲಿ ತೊಂದರೆ?

ಕಾವೇರಿ ವನ್ಯಜೀವಿ ವಿಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾತನೂರು ವಲಯದ ಕಬ್ಬಾಳು, ಸಾಸಾಲಪುರ, ಕಂಚನಹಳ್ಳಿ, ಚನ್ನಪಟ್ಟಣ ವಲಯದ ನರಿಕಲ್ಲುಗುಡ್ಡ, ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ಮಾರ್ಗವಾಗಿ ಸಂಚಾರ ಮಾಡಿ ಆಗಾಗ್ಗೆ ಜನವಸತಿ ಪ್ರದೇಶಗಳಾದ ಊರುಗಳಲ್ಲಿ ರಸ್ತೆ ಬಳಿಯಲ್ಲಿ, ಕೆರೆಗಳಲ್ಲಿ ಹಾಗೂ ನಗರ ಭಾಗದ ತೋಪುಗಳಲ್ಲಿ ಬೀಡು ಬಿಡುತ್ತಿವೆ.  ಸಾತನೂರು ವಲಯದ ಕಬ್ಬಾಳು ಮೀಸಲು ಅರಣ್ಯದಲ್ಲಿ ಸುಮಾರು ಒಂದುವರೆ ವರ್ಷಗಳಿಂದ ಇತರೆ ಕಾಡಾನೆಗಳ ಗುಂಪಿಗೆ ಸೇರದೆ ಕಾವೇರಿ ವನ್ಯಜೀವಿ ಘಟಕದಿಂದ ಬಂದಂತಹ ಎರಡು ಆನೆಗಳು ಹಿಂತಿರುಗದೇ ಹಗಲು & ರಾತ್ರಿ ಸಮಯದಲ್ಲಿ ಚನ್ನಪಟ್ಟಣ ಪ್ರಾದೇಶಿಕ ವಲಯ ವ್ಯಾಪ್ತಿಯಲ್ಲಿನ ತೆಂಗಿನಕಲ್ಲು ಅರಣ್ಯ ಶಾಖೆಯ ಗ್ರಾಮಗಳಾದ ತೆಂಗಿನಕಲ್ಲು ಭಾಗದ ನೆಲೆಮಲೆ, ಕಾಡನಕುಪ್ಪೆ, ಅಮ್ಮನಪುರದೊಡ್ಡಿ, ದೇವರದೊಡ್ಡಿ, ಅರಳಾಳುಸಂದ್ರ, ಮೆಣಸಿಗನಹಳ್ಳಿ, ಹೊಸದೊಡ್ಡಿ, ತಗಚಗೆರೆ, ಮೊಳೆದೊಡ್ಡಿ, ವಿರೂಪಾಕ್ಷಿಪುರ, ಬಿ.ವಿ.ಹಳ್ಳಿ, ಮಲ್ಲುಂಗೆರೆ, ದೊಡ್ಡನಹಳ್ಳಿ, ಬ್ರಹ್ಮಣೀಪುರ, ಅಮ್ಮನದೊಡ್ಡಿ, ಹೊಂಗನೂರು, ಸಿಂಗರಾಜಿಪುರ, ಭೈರಶೆಟ್ಟಹಳ್ಳಿ, ವಿರೂಪಸಂದ್ರ, ಬಲ್ಲಾಪಟ್ಟಣ, ಕೋಡಿಪುರ, ಕೋಡಂಬಳ್ಳಿ, ಮಂಗಾಡಹಳ್ಳಿ, ಅಣ್ಣಪನದೊಡ್ಡಿ, ನರಿಕಲ್ಲುಗುಡ್ಡ ಹಾಗೂ ಚನ್ನಪಟ್ಟಣ ಟೌನ್ ಶಾಖಾ ವ್ಯಾಪ್ತಿಗೆ ಬರುವ ಚನ್ನಪಟ್ಟಣ ಟೌನ್ ಭಾಗಕ್ಕೆ ಸಮೀಪವಿರುವ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ಸುತ್ತಲೂ ಗ್ರಾಮಗಳಾದ ತಿಮ್ಮಯ್ಯನದೊಡ್ಡಿ, ಕುಂಭಾಪುರ, ಹುಚ್ಚಯ್ಯನದೊಡ್ಡಿ, ಗೆಂಡೆಕಟ್ಟೆದೊಡ್ಡಿ ಹಾಗೂ ಮೈಸೂರು-ಬೆಂಗಳೂರು ಮುಖ್ಯ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿ 275ರ ಪಕ್ಕದಲ್ಲಿನ ಮಂಚಶೆಟ್ಟಹಳ್ಳಿ ಗ್ರಾಮ, ಮಂಗಳವಾರಪೇಟೆ, ಕೆರೆಮೇಗಲದೊಡ್ಡಿ, ಕೂಡ್ಲರು ಇತ್ಯಾದಿ ಗ್ರಾಮಗಳಿಗೆ ನಿರಂತರವಾಗಿ ಲಗ್ಗೆ ಇಟ್ಟು ರೈತರ ಜಮೀನಿನಲ್ಲಿ ಬೆಳೆದ ತೆಂಗು, ಮಾವು, ಬಾಳೆ, ಭತ್ತ, ರಾಗಿ, ಜೋಳ ಹಾಗೂ ಇತ್ಯಾದಿ ಬೆಳೆಗಳು, ನೀರಾವರಿ ಉಪಕರಣಗಳಾದ ಪೈಪುಗಳು, ಬೋರ್‌ವೆಲ್ ಸೆಟ್‌ಗಳು ಇತ್ಯಾದಿ ಆಸ್ತಿ-ಪಾಸ್ತಿ ನಾಶ ಮತ್ತು ಪ್ರಾಣಹಾನಿಯನ್ನು ಸಹ ಮಾಡುತ್ತಿರುತ್ತವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವರದಿ ಮಾಡಿದ್ದರು.  ಸಾರ್ವಜನಿಕ ಹಾಗೂ ರೈತರಿಗೆ ಹೆಚ್ಚಿನ ಉಪಟಳ ನೀಡುತ್ತಿರುವ 35 ವರ್ಷಗಳ ಎರಡು ಒಂಟಿ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅನುಮತಿ ನೀಡಬೇಕೆಂದು ಕೋರಿದ್ದರು.

ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗದಂತೆ ಸೂಚನೆ

ಈ ಮನವಿಯನ್ನು ಆಧರಿಸಿ ಪ್ರಧಾನ ಅರಣ್ಯ ಸಂರಕ್ಷಣಾರ್ಥಿಗಳು ಎರಡು ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಆದೇಶ ಹೊರೆಡಿಸಿದ್ದಾರೆ. ವನ್ಯಜೀವಿ (ರಕ್ಷಣಾ) ಕಾಯ್ದೆ, 1972ರ ಸೆಕ್ಷನ್ 11(1)(ಎ)ರ ಅನ್ವಯ ಸೆರೆಹಿಡಿದು ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದ ಗುರುತಿಸಲ್ಪಟ್ಟ ಸೂಕ್ತ ಅರಣ್ಯ ಪ್ರದೇಶಕ್ಕೆ ಬಿಡುವಂತೆಯೂ ಅವರು ನಿರ್ದೇಶನ ನೀಡಿದ್ದಾರೆ. ಸದರಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ವನ್ಯಜೀವಿ (ರಕ್ಷಣಾ) ಕಾಯ್ದೆ, 1972ರ ಉಲ್ಲಂಘನೆಯಾಗದಂತೆ ಹಾಗೂ ಭಾರತ ಸರ್ಕಾರದಿಂದ / ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ನೀಡಿದ ನಿರ್ದೇಶನ ಹಾಗೂ ಪ್ರಮಾಣಿತ ಕಾರ್ಯ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಮುಂಜಾಗ್ರತಾ ಕ್ರಮ ವಹಿಸುವಂತೆ ಅವರು ಸೂಚಿಸಿದ್ದಾರೆ.