ಜಿಲ್ಲಾ ಕೇಂದ್ರ ರಾಮನಗರದ ರಸ್ತೆ ಬದಿಗಳಲ್ಲಿ ಟನ್ ಗಟ್ಟಲೆ ತ್ಯಾಜ್ಯ!

*ಮಳೆಗೆ ಕೊಳೆತು ನಾರಲಾರಂಭಿಸಿರುವ ತ್ಯಾಜ್ಯ, ಸಾಂಕ್ರಮಿಕ ರೋಗಗಳ ಭೀತಿ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕಸ ವಿಲೇವಾರಿಯಾಗದೆ ರಸ್ತೆ ಬದಿಗಳಲ್ಲಿ ಟನ್ ಗಟ್ಟಲೆ ರಾಶಿ ಸಂಗ್ರಹವಾಗುತ್ತಿದೆ. ನಿರಂತರ ಮಳೆಗೆ ಕಸ ಕೊಳೆತುನಾರುತ್ತಿದ್ದು, ಸಾಂಕ್ರಮಿಕ ರೋಗಗಳು ಉಲ್ಬಣಿಸುವ ಬಗ್ಗೆ ನಗರದ ನಾಗರೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಸ ವಿಲೇವಾರಿ ಸಮಸ್ಯೆಗೆ ನಗರಸಭೆಯ ಕೌನ್ಸಿಲರ್ ಗಳು ಮತ್ತು ಅಧಿಕಾರಿಗಳು ಮಳೆ ಕಾರಣ ಎಂದು ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.

ವರ್ಷಗಳು ಉರುಳುತ್ತಿದ್ದರೂ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ದೂರುಗಳು ನಾಗರೀಕ ವಲಯದಲ್ಲಿ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಮಿಷನ್ ಕಾರ್ಯಕ್ರಮ ತನ್ನ ಅರ್ಥ ಕಳೆದುಕೊಳ್ಳುವ ಸಮಯ ದೂರವಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಲ್ಯಾಂಡ್ ಫಿಲ್ ಸ್ಥಳಕ್ಕೆ ಹೋಗಲಾಗುತ್ತಿಲ್ಲ

ನಗರಸಭೆಯ ವಾರ್ಡ್ ಸಂಖ್ಯೆ 15ರಲ್ಲಿ ಖಾಸಗಿ ಜಮೀನಿನಲ್ಲಿ ನಗರದ ತ್ಯಾಜ್ಯ ವಿಲೇವಾರಿಯಾಗುತ್ತಿದೆ. ಆದರೆ ಈ ಲ್ಯಾಂಡ್ ಫಿಲ್ ಸ್ಥಳಕೆ ತೆರಳಲು ಇರುವ ದಾರಿ ಮಳೆ ನೀರಿನಿಂದಾಗಿ ಬದಿಯಾಗಿದೆ. ಸುಮಾರು 4 ಅಡಿಯಷ್ಟು ಬದಿ ನಿರ್ಮಾಣವಾಗಿದ್ದು ವಾಹನದ ಚಕ್ರಗಳು ಹೂತು ಹೋಗುತ್ತಿವೆ. ಹೀಗಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂದು ನಗರಸಭೆಯ ಚುನಾಯಿತ ಪ್ರತಿನಿಧಿಗಳು ಪ್ರತಿಕ್ರಯಿಸಿದ್ದಾರೆ.

ಮನೆಮನೆಯಿಂದ ಸಂಗ್ರಹವೂ ಸ್ದಗಿತ

ನಗರಸಭೆಯ ಸಿಬ್ಬಂದಿ ದಿನ ನಿತ್ಯ ಮನೆ-ಮನೆಗೆ ತೆರಳಿ ಕಸವನ್ನು ಸಂಗ್ರಹಿಸುತ್ತಿದ್ದರು. ಈ ಕಾರ್ಯವೂ ಕೆಲ ದಿನಗಳಿಂದ ಸ್ಥಗಿತಗೊಂಡಿದೆ.  ಈ ಕಾರಣ ನಾಗರಿಕರು ತಮ್ಮ ಮನೆ ತ್ಯಾಜ್ಯವನ್ನು ರಸ್ತೆಬದಿಗಳಲ್ಲಿ ಬೀಸಾಡುತ್ತಿದ್ದಾರೆ. ಹೀಗೆ ಬೀಸಾಡುತ್ತಿರುವ ತ್ಯಾಜ್ಯ ರಾಶಿಗಟ್ಟಲೆ ಸಂಗ್ರಹವಾಗುತ್ತಿದೆ. ಈಗಾಗಲೆ ಎಲ್ಲಾ 31 ವಾರ್ಡುಗಳಲ್ಲೂ ಟನ್ ಗಟ್ಟಲೆ ತ್ಯಾಜ್ಯ ಸಂಗ್ರಹವಾಗಿದ್ದು ಅಸಹನೀಯ ವಾತಾವರಣ ಸೃಷ್ಠಿಯಾಗಿದೆ.

ಸಾಂಕ್ರಮಿಕ ರೋಗಗಳ ಭೀತಿ

ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ರಸ್ತೆಬದಿಗಳಲ್ಲಿ ಸಂಗ್ರಹಗಾಗುತ್ತಿರುವ ತ್ಯಾಜ್ಯ ಮಳೆಯಿಂದಾಗಿ ಕೊಳೆತು ನಾರಲಾರಂಭಿಸಿದೆ. ನಗರದಲ್ಲಿ ವೈರಲ್ ಫೀವರ್, ಡೆಂಘಿ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೊಳೆತು ನಾರುತ್ತಿರುವ ತ್ಯಾಜ್ಯದಿಂದಾಗಿ ಸಾಂಕ್ರಮಿಕ ರೋಗಗಳು ಉಲ್ಭಣಿಸಬಹುದು ಎಂಬ ಆತಂಕವನ್ನು ನಾಗರೀಕರು ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳ ವಿರುದ್ದ ಆಕ್ರೋಶ!

ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳವನ್ನು ಗುರುತಿಸಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸ್ಥಾಪಿಸಲು ಚುನಾಯಿತ ಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಪಕ್ಷ ಬೇಧ ತೊರೆದು ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾಡಳಿತದ ಅಧಿಕಾರಿಗಳು ಸಹ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ. ನಾಗರೀಕರು ಸಹ ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂ ಪ್ರೇರಿತರಾಗಿ ನಿಲ್ಲಿಸಬೇಕು ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.

……….