ರಾಮನಗರ ಜಿಲ್ಲೆಯ ಔಷಧ ವ್ಯಾಪಾರಿಗಳಿಂದ ವಿಕಲಚೇತನ ಮಕ್ಕಳಿಗೆ ವೀಲ್‍ ಚೇರ್ ವಿತರಣೆ

* ಸ್ವಾತಂತ್ರ ಅಮೃತಮಹೋತ್ಸವದ ಹಿನ್ನೆಲೆ

ರಾಮನಗರ: ಜಿಲ್ಲೆಯ ಔಷಧಿ ವ್ಯಾಪಾರಿಗಳು ಆರು ಮಂದಿ ವಿಕಲಚೇತನ ಮಕ್ಕಳಿಗೆ ಗಾಲಿ ಕುರ್ಚಿಗಳನ್ನು (ವೀಲ್‍ ಚೇರ್) ವಿತರಿಸಿ ಸ್ವಾತಂತ್ರ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ

ರಾಮನಗರ ತಾಲೂಕಿನ ನಾಲ್ವರು, ಮಾಗಡಿ ತಾಲೂಕಿನ ಇಬ್ಬರು ವಿಕಲಚೇತನ ಮಕ್ಕಳಿಗೆ ತಲಾ 12 ಸಾವಿರ ರೂ ಮೌಲ್ಯದ ಆರು ವೀಲ್‍ ಚೇರ್ ಗಳನ್ನು ಕೊಡುಗೆ ನೀಡಿದ್ದಾರೆ.

ಜಿಲ್ಲಾಕೇಂದ್ರ ರಾಮನಗರದಲ್ಲಿರುವ ರಾಮನಗರ ವೃತ್ತ ಸಹಾಯಕ ಔಷಧ ನಿಯಂತ್ರಕರ ಕಚೇರಿಯಲ್ಲಿ ನಡೆದ ಈ ಸರಳ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಹಾಯಕ ಔಷಧ ನಿಯಂತ್ರಕರಾದ ಮಮತಾ ಮಾತನಾಡಿ ಭಾರತ ಸ್ವಾತಂತ್ರ್ಯಕ್ಕಾಗಿ ಅನೇಕರು ಹೋರಾಡಿ ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ತಮ್ಮ ಜೀವವನ್ನು ಬಲಿ ಕೊಟ್ಟ ಮಹನೀಯರನ್ನು ಸದಾ ಸ್ಮರಣೆಯಲ್ಲಿರಿಸಿಕೊಂಡು ದೇಶಕ್ಕಾಗಿ  ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರು ನಡೆಯಬೇಕಾಗಿದೆ ಎಂದು ಕರೆ ನೀಡಿದರು.

ಜಿಲ್ಲೆಯ ಔಷಧ ವ್ಯಾಪಾರಿಗಳು ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ 6 ಮಂದಿ ವಿಕಲಚೇತನರಿಗೆ ವೀಲ್‍ ಚೇರ್‌ ಗಳನ್ನು ನೀಡುತ್ತಿರುವುದು ಅರ್ಥಪೂರ್ಣ ಮತ್ತು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆರ್ಥಿಕವಾಗಿ ಬಡ ಕುಟುಂಬದ ಈ ಮಕ್ಕಳಿಗೆ ಈ ಕೊಡುಗೆ ಅತ್ಯಂತ ಉಪಯುಕ್ತವಾಗಿದೆ ಎಂದರು.

ಸಂಘದ ಮೂಲಕ ವೀಲ್‍ ಚೇರ್ ಗಳನ್ನು ವಿತರಿಸಲಾಗಿದೆ. ಈ ಸತ್ಕಾರ್ಯಕ್ಕೆ ನೆರವು ನೀಡಿದವರಿಗೆ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಜಿಲ್ಲಾ ಮತ್ತು ತಾಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯ ಬಿ.ಐ.ಅರ್‍.ಟಿಗಳು ಹಾಜರಿದ್ದರು.