ಉಸ್ಮಾರ್ಡ್‍ ವತಿಯಿಂದ ಅನುದಾನರಹಿತ ಶಾಲೆಗಳ ವಿಜ್ಞಾನ, ಇಂಗ್ಲೀಷ್‍ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

ರಾಮನಗರ: ಜಿಲ್ಲೆಯ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ (ಉಸ್ಮಾರ್ಡ್) ತನ ಸದಸ್ಯ ಶಾಲೆಗಳ ವಿಜ್ಞಾನ ಮತ್ತು ಇಂಗ್ಲೀಷ್ ಬೋಧಕರಿಗೆ ಕೌಶಲ ವೃಧ್ದಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.

ನಗರದ ಎಂ.ಎಚ್.ಶಿಕ್ಷಣ ಸಂಸ್ಥೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉಸ್ಮಾರ್ಡ್ ಮತ್ತು ಟ್ರೈ ವೇ ಪ್ರೈ.ಲಿಮಿಟೆಡ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದವು.

ಕಾರ್ಯಾಗಾರವನ್ನ ಉದ್ಘಾಟಿಸಿದ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ತಾವು ಬೋಧಿಸುವ ವಿಷಯಗಳಲ್ಲಿ ಪರಿಣಿತಿ ಇರಬೇಕು. ಬೋಧನಾ ಕೌಶಲ್ಯ ವೃದ್ದಿಯ ವಿಚಾರದಲ್ಲಿ ಶಿಕ್ಷಕರಿಗೆ ಆಗಾಗ್ಗೆ ತರಬೇತಿ ಅಗತ್ಯವಿದೆ. ಜಿಲ್ಲೆಯಲ್ಲಿ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ತನ್ನ ಸದಸ್ಯ ಶಾಲೆಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ಆಗಾಗ್ಗೆ ತರಬೇತಿ ಕಾರ್ಯಾಗಾರಗಳು ನಡೆಯುತ್ತವೆ. ಇಂತಹ ವ್ಯವಸ್ಥೆಯನ್ನು ಅನುದಾನರಹಿತ ಶಾಲೆಗಳು ತಾವೇ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕೋವಿಡ್ 19 ಸೋಂಕು ಕಾರಣ 2020-21ನೇ ಸಾಲಿನಲ್ಲಿ ಕಲಿಕೆ ಬಹುತೇಕ ಸ್ಥಗತಿವಾಗಿತ್ತು. 2021-22ನೇ ಸಾಲಿನಲ್ಲಿ ಅಪೂರ್ಣವಾಗಿದೆ. ಹೀಗಾಗಿ 2022-23ನೇ ಸಾಲನ್ನು ಕಲಿಕಾ ಚೇತರಿಕಾ ವರ್ಷ ಎಂದು ಗುರುತಿಸಲಾಗಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಚ್ಚ ಗಮನ ಹರಿಸಲಾಗಿದೆ. ಕಲಿಕಾ ಚೇತರಿಕಾ ವರ್ಷಕ್ಕೆ ಸಂಬಂಧಿಸಿದಂತೆ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳ ಶಿಕ್ಷಕರಿಗೆ ಈಗಾಗಲೆ ತರಬೇತಿ ದೊರೆತಿದೆ ಎಂದರು.

ಇದೀಗ ಕೋವಿಡ್ ಸೋಂಕಿನ 4ನೆ ಅಲೆಯ ಭೀತಿ ಎದುರಾಗಿದೆ. ಆದರೆ ಯಾವ ಆತಂಕವೂ ಬೇಡ ಎಂದು ತಜ್ಞರು ಹೇಳಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ಮಕ್ಕಳಿಗೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲು ತಿಳುವಳಿಕೆ ನೀಡಬೇಕು ಎಂದರು.

ಅನುದಾನರಹಿತ ಶಾಲೆಗಳ ರಾಜ್ಯ ಸಂಘಟನೆ ಕ್ಯಾಮ್ಸ್‌ನ ರಾಮನಗರ ಜಿಲ್ಲಾ ಪ್ರತಿನಿಧಿ ಕಿರಣ್ ಪ್ರಸಾದ್ ಮಾತನಾಡಿ ಕೋವಿಡ್ ಸೋಂಕು ಕಾರಣ ಲಾಕ್‌ಡೌನ್ ವೇಳೆಯಲ್ಲಿ ಮಕ್ಕಳು ಶಾಲೆಗಳಿಂದ ದೂರವುಳಿದಿದ್ದರು. ಆನ್‌ಲೈನ್ ತರಬೇತಿ ಅನಿವಾರ್ಯವಾಗಿತ್ತು. ಅನುದಾನರಹಿತ ಶಾಲೆಗಳ ಶಿಕ್ಷಕರು ಕೇವಲ ಕೆಲವೇ ವಾರಗಳಲ್ಲಿ ಆನ್‌ಲೈನ್ ತರಬೇತಿಗೆ ಬೇಕಾದ ಪರಿಣಿತಿಯನ್ನು ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಸ್ಮಾರ್ಡ್ ಸಂಘಟನೆಯ ಗೌರವ ಅಧ್ಯಕ್ಷ ವೆಂಕಟಸುಬ್ಬಯ್ಯ ಚೆಟ್ಟಿ ಮಾತನಾಡಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ತರಬೇತಿ ವಿಚಾರದಲ್ಲಿ ಶಿಕ್ಷಣ ಇಲಾಖೆಯ ಕೊಡುಗೆ ಶೂನ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಸ್ಮಾರ್ಡ್ ಅಧ್ಯಕ್ಷ ಪಟೇಲ್ ಸಿ ರಾಜು ಮಾತನಾಡಿ ಪಠ್ಯಕ್ರಮಕ್ಕೆ ತಕ್ಕಂತೆ ಬೋಧನಾ ವಿಧಾನಗಳ ಬದಲಾಗುತ್ತವೆ. ಇದಕ್ಕೆ ತಕ್ಕದಾಗಿ ಎಲ್ಲ ಶಿಕ್ಷಕರು ಬೋಧನಾ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಹೊಸ ರಾಷ್ಟ್ರೀಯ  ಶಿಕ್ಷಣ ನೀತಿ ಜಾರಿಯಾಗಲಿದೆ. ನೂತನ ಶಿಕ್ಷಣ ನೀತಿಗೆ ಅನ್ವಯವಾಗಿ ಶಿಕ್ಷಕರು ತಮ್ಮ ಬೋಧನಾ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಟ್ರೈವೇ ಲಿರ್ನಿಂಗ್ ಪ್ರೈ.ಲಿಮಿಟೆಡ್‌ನ ಮೊಹಮ್ಮದ್ ರಫೀವುಲ್ಲಾ, ಫಾತಿಮಾ ರಫೀವುಲ್ಲಾ, ವ್ಯಾಪ್ಸ್ ಟೆಕ್ನೋಸಾಫ್ಟ್ ಮತ್ತು ಸೆಂಟ್ರಾಡೋ ಟೆಕ್ ಸಲ್ಯೂಷನ್ಸ್‌ನ ಪ್ರತಿನಿಧಿಗಳು ಇಂಗ್ಲೀಷ್ ಮತ್ತು ವಿಜ್ಞಾನ ಬೋಧನೆಗೆ ಪೂರಕ ಚಟುವಟಿಕೆಗಳು, ಸಾಧನಗಳು, ಶಿಕ್ಷಣ ಸಂಸ್ಥೆಗಳ ಡಿಜಟಲೀಕರಣದ ವಿಚಾರದಲ್ಲಿ ಮಾಹಿತಿ ಕೊಟ್ಟರು.

ವೇದಿಕೆಯಲ್ಲಿ ಎಂ.ಎಚ್.ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಚ್.ಚಂದ್ರಶೇಖರ್, ಉಸ್ಮಾರ್ಡ್ ಸಂಘಟನೆಯ ಕಾರ್ಯದರ್ಶಿ ಇಶಾಂತ್ (ಸುನಿಲ್), ಖಜಾಂಚಿ ಬಾಲಗಂಗಾಧರ ಮೂರ್ತಿ, ಉಪಾಧ್ಯಕ್ಷರುಗಳಾದ ಪ್ರದೀಪ್, ನವೀನ್ ಕುಮಾರ್, ಧನಂಜಯ ಉಪಸ್ಥಿತರಿದ್ದರು.