ನರೇಗಾ ಯೋಜನೆಯಡಿ ಚಿರಶಾಂತಿ ಧಾಮಕ್ಕೂ ಹೈಟೆಕ್ ಸ್ಪರ್ಶ

ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆವತಿಯಿಂದ ಜಿಲ್ಲೆಯಲ್ಲಿ ವಿನೂತನ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ಇದೀಗ ಸುಸಜ್ಜಿತವಾದ ರುದ್ರಭೂಮಿ ಅಭಿವೃದ್ದಿಗೊಂಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದ್ಯಾವಸಂದ್ರ ಗ್ರಾಮ ಪಂಚಾಯಿತಿಯ ಕಾಡು ಜಕ್ಕಸಂದ್ರ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಸ್ಮಶಾನವನ್ನು ಅಭಿವೃದ್ದಿ ಪಡಿಸಲಾಗಿದೆ. ಈ ಕಾಮಗಾರಿಗೆ ಸುಮಾರು 10 ಲಕ್ಷ ರೂ ವೆಚ್ಚವಾಗಿದೆ.
ಕಾಡುಜಕ್ಕಸಂದ್ರ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತಾಲೂಕು ಆಡಳಿತ ಮೊದಲು ತೆರವುಗೊಳಿಸಿ ಸುತ್ತಲು ಮುಳ್ಳು ತಂತಿಯಿಂದ ಕಾಂಪೌಂಡ್ ನಿರ್ಮಿಸಿದೆ. ನಂತರ ಇಲ್ಲಿ ಚಿತಾಗಾರ, ನೀರಿನ ವ್ಯವಸ್ಥೆ, ವಿಶಾಂತ್ರಿ ತಾಣವನ್ನು ನಿರ್ಮಿಸಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಟ್ಟು ಸುಂದರ ಉದ್ಯಾನವನವನ್ನು ನಿರ್ಮಿಸಲಾಗಿದೆ.
ಇಲ್ಲಿ ಚಿತಾಗಾರದ ಸಮಸ್ಯೆ ಇತ್ತು. ಸ್ಮಶಾನ ಅಭಿವೃದ್ಧಿಯಿಂದ ತುಂಬಾ ಅನುಕೂಲವಾಗಿದೆ ಎಂದು ಆಭಾಗದ ಜನರು ಅಭಿಪ್ರಾಯಪಟ್ಟಿದ್ದಾರೆ.