ಜೂ.30ರವರೆಗೆ ಕನಕಪುರದಲ್ಲಿ ಸ್ವಯಂ ಘೋಷಿತ ಲಾಕ್‍ಡೌನ್‍

* ವ್ಯಾಪಾರಸ್ಥರು, ಸಂಘ-ಸಂಸ್ಥೆಗಳ ನಿರ್ಧಾರ

ರಾಮನಗರ, ಜೂನ್‍ 21,2020:: ಜಿಲ್ಲೆಯ ಕನಕಪುರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೋವಿಡ್‍ 19 ಪ್ರಕರಣಗಳ ಹಿನ್ನೆಲೆಯಲ್ಲಿ ಅಲ್ಲಿರುವ ವ್ಯಾಪಾರಸ್ಥರು ಜೂನ್‍ 30ರವರೆಗೆ ಸ್ವಯಂ ಪ್ರೇರಿತ ಲಾಕ್‍ಡೌನ್‍ ವಿಧಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಭಾನುವಾರ ಕನಕಪುರದಲ್ಲಿ ನಗರಸಭೆವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍, ಸಂಸದ ಡಿ.ಕೆ.ಸುರೇಶ್‍ ಅವರ ಸಮ್ಮುಖದಲ್ಲಿ ಕನಕಪುರ ನಗರದ ವ್ಯಾಪಾರಿ ಮಳಿಗೆಗಳ ಮಾಲೀಕರು ಮತ್ತು ವಿವಿಧ ಸಂಘ-ಸಂಸ್ಥೆಗಳು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು. ಶಾಸಕ ಡಿ.ಕೆ.ಶಿವಕುಮಾರ್‍ ವ್ಯಾಪಾರಸ್ಥರ ನಿರ್ಧಾರವನ್ನು ಸ್ವಾಗತಿಸಿದರು. ಜನರ ಆರೋಗ್ಯ ಮುಖ್ಯ. ನಿಮ್ಮ ನಿಲುವಿಗೆ ನನ್ನ ಬೆಂಬಲವಿದೆ ಎಂದರು. ಆದರೆ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳಿಗೆ ಕೊರತೆಯಾಗದಂತೆ ಎಚ್ಚರವಹಿಸಲು ದಿನಸಿ ಅಂಗಡಿಗಳನ್ನು ಬೆಳಿಗ್ಗೆ 11 ಗಂಟೆಯವರೆಗೆ ತೆರೆಯುವಂತೆ ಸಲಹೆ ನೀಡಿದರು. ಆದರೆ ಸಾಮಾಜಿಕ ಅಂತರ ಕಾಪಾಡುವ ವ್ಯವಸ್ಥೆ, ಸ್ಯಾನಿಟೈಸರ್‍ ವ್ಯವಸ್ಥೆ ಮೆರೆಯಬೇಡಿ ಎಂದರು. ಸರ್ಕಾರಿ ಕಚೇರಿ, ಸರ್ಕಾರಿ ಬಸ್‍ ಸೇವೆ, ಆರೋಗ್ಯ ಸೇವೆಗಳು ಮುಂದುವರೆಯಲಿ ಎಂದರು.