ಕ.ಎ.ವಿ.ಮಹಾಸಭಾಧ್ಯಕ್ಷ ಆರ್‍.ಪಿ.ರವಿಶಂಕರ್‍ ಅವರನ್ನು ವಿಧಾನಪರಿಷತ್‍ಗೆ ನಾಮನಿದೇರ್ಶನ ಮಾಡುವಂತೆ ಸ್ಥಳೀಯ ಆರ್ಯವೈಶ್ಯರಿಂದ ಸಿಎಂಗೆ ಮನವಿ

ರಾಮನಗರ, 24 ಜೂನ್‍ 2020: ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷರಾದ ಆರ್.ಪಿ.ರವಿಶಂಕರ್  ಅವರನ್ನು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡುವಂತೆ ಸ್ಥಳೀಯ ಆರ್ಯವೈಶ್ಯ ಸಮುದಾಯ ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪ ಅವರನ್ನು ಆಗ್ರಹಿಸಿದೆ.

R. P.Ravishankar

ಈ ಸಂಬಂಧ ನಗರದ ಶ್ರೀ ಕನ್ನಿಕಾಮಹಲ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ  ಸಮುದಾಯದ ಪ್ರಮುಖರು ಸಮುದಾಯದ ಕಳಶಪ್ರಾಯದಂತಿರುವ ಆರ್‍.ಪಿ.ರವಿಶಂಕರ್‍ ಅವರನ್ನು ಈ ಬಾರಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಕರ್ನಾಟಕ ಆರ್ಯವೈಶ್ಯ ಮಹಾಸಭೆಯ ನಿರ್ದೇಶಕ ಕೆ.ವಿ.ಪ್ರಸನ್ನ ಕುಮಾರ್ ಮಾತನಾಡಿ, ಸಂಖ್ಯಾಬಲದಲ್ಲಿ  ಆರ್ಯವೈಶ್ಯರು ಕಡಿಮೆ ಇದ್ದರೂ,  ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಆರ್.ಪಿ.ರವಿಶಂಕರ್ ಅವರು ರಾಜ್ಯದ ಆರ್ಯವೈಶ್ಯ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನು ಪರಿಗಣಿಸಿ ಅವರಿಗೆ ವಿಧಾನಪರಿಷತ್ತಿನಲ್ಲಿ  ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಅಲ್ಪಸಂಖ್ಯಾತರಾದ ನಮ್ಮ ಸಮುದಾಯಕ್ಕೆ  ರಾಜಕೀಯ ಅಧಿಕಾರ ಸಿಗುವುದು  ಕಷ್ಟಸಾಧ್ಯ. ಸರ್ಕಾರದ ವ್ಯವಸ್ಥೆಯಲ್ಲಿಯೂ ಸಹ ಯಾವುದೇ ಮೀಸಲಾತಿ ಸೌಲಭ್ಯವಿಲ್ಲ. ಆದರೆ ಸಮಾಜ ಸೇವೆ ಸಲ್ಲಿಸುವ ಇಚ್ಛಾಶಕ್ತಿ, ಕ್ರಿಯಾಶಕ್ತಿ ಪ್ರಬಲವಾಗಿದೆ. ರಾಜಕೀಯ ಕ್ಷೇತ್ರದ ಮೂಲಕ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶವಿದೆ ಹೀಗಾಗಿ ಈ ಬಾರಿ ಆರ್ಯವೈಶ್ಯ ಸಮುದಾಯದ ಪ್ರತಿನಿಧಿಯನ್ನು ಪರಿಗಣಿಸಿ ಎಂದು ಮನವಿ ಮಾಡಿದರು. ಅಲ್ಲದೆ ಆರ್‍.ಪಿ.ರವಿಶಂಕರ್‍ ಅವರು ಸಂಘಟನಾ ಚತುರರು, ಸೇವಾ ಮನೋಭಾವನೆ ಉಳ್ಳವರು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು. ಸಾರ್ವಜನಿಕವಾಗಿ ಹಲವಾರು ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆರ್ಯವೈಶ್ಯ ಸಮುದಾಯಕ್ಕೆ ಮಾತ್ರವಲ್ಲದೇ ಇಡೀ ಸಮಾಜದ ಪ್ರಗತಿಗಾಗಿ ದುಡಿದಿದ್ದಾರೆ. ಸ್ವತಃ 78 ಬಾರಿ ರಕ್ತದಾನ ಮಾಡಿರುವ ಇವರು ಕೋವಿಡ್‍ 19 ಸೋಂಕು ಹಿನ್ನೆಲೆಯಲ್ಲಿ ಲಾಕ್‍ಡೌನ್‍ ಆಗಿದ್ದ ವೇಳೆ ರಾಜ್ಯಾದ್ಯಂತ ಆರ್ಯವೈಶ್ಯ ಸಂಘಟನೆಗಳ ಮೂಲಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸುಮಾರು 6000ಕ್ಕೂ ಅಧಿಕ ಯೂನಿಟ್‍ ರಕ್ತ ಸಂಗ್ರಹಿಸುವಂತಹ ಕಾರ್ಯ ಮಾಡಿದ್ದಾರೆ ಎಂದು ಆರ್‍.ಪಿ.ರವಿಶಂಕರ್‍ ಅವರ ಪ್ರತಿಭೆ, ಸಾಮಾಜಿಕ ಕಾಳಜಿ, ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.

ರಾಮನಗರ ಆರ್ಯವೈಶ್ಯ ಸಭೆಯ ಅಧ್ಯಕ್ಷ ಕೆ.ಎಲ್.ರತ್ನಶೇಖರ್  ಮಾತನಾಡಿ ರಾಜ್ಯದಲ್ಲಿ ಬಹುತೇಕ ಆರ್ಯವೈಶ್ಯರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಆರ್.ಪಿ.ರವಿಶಂಕರ್ ಅವರು ಸಹ ಸಂಘ ಪರಿವಾರದ ಹಿನ್ನೆಲೆ ಮತ್ತು ಪ್ರೇರಣೆಯಿಂದ ಸಮಾಜದ ಪ್ರಗತಿಗೆ ಶ್ರಮಿಸಿದ್ದಾರೆ. ರಾಜ್ಯ ಎದುರಿಸಿದ ಪ್ರಕೃತಿ ವಿಕೋಪದ ಸಮಯದಲ್ಲಿ  ಸಮುದಾಯದ ದಾನಿಗಳನ್ನು ಸಂಘಟಿಸಿ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ ಎಂದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷರಾಗಿರುವ ಆರ್.ಪಿ.ರವಿಶಂಕರ್  ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇವರು ರೂಪಿಸಿದಂತಹ ಯೋಜನೆಗಳನ್ನು ಸರ್ಕಾರವೂ ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಅವರನ್ನು  ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ  ಆರ್ಯವೈಶ್ಯ ಸಭಾದ ಕಾರ್ಯದರ್ಶಿ ಕೆ.ವಿ.ಉಮೇಶ್, ವಾಸವಿ ಯೂತ್ಸ್ ಫೋರಂ ಅಧ್ಯಕ್ಷ ಅಶ್ವಿನ್, ವಾಸವಿ ವನಿತಾ ಸಂಘದ ಅಧ್ಯಕ್ಷರಾದ ಸುಧಾ  ಉಪಸ್ಥಿತರಿದ್ದರು.