ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸದಿದ್ದರೆ, ಜು.11ರಿಂದ ಪ್ರತಿಭಟನೆ ತೀವ್ರ – ಬಿ.ಎಸ್.ಪಿ ಮತ್ತು ದಲಿತ ಮುಖಂಡರ ಎಚ್ಚರಿಕೆ

ರಾಮನಗರ: ಎಸ್ಸಿ, ಎಸ್ಟಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ  ಮೀಸಲಾತಿ ಪ್ರಮಾಣವನ್ನು ಹೆಚ್ಚಿಸದಿದ್ದರೆ ಇದೇ ಜುಲೈ 11ರಿಂದ ಪ್ರತಿಭಟನೆಗಳು ಉಗ್ರ ರೂಪ ಪಡೆಯಲಿವೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಎಚ್ಚರಿಸಿದರು.

ನಗರದಲ್ಲಿ ಕರ್ನಾಟಕ ಸ್ವಾಭಿಮಾನಿ, ಎಸ್ಸಿ, ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಸ್ಸಿ, ಎಸ್ಸಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳಕ್ಕೆ ನ್ಯಾ. ನಾಗಮೋಹನದಾಸ್ ಆಯೋಗ ಮಾಡಿರುವ ಶಿಪಾರಸ್ಸುಗಳನ್ನು ತಕ್ಷಣ ಜಾರಿಗೊಳಿಸಬೇಕು. ಈ ವಿಚಾರದಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾಂದ ಮಹಾಸ್ವಾಮೀಜಿ ಅವರು ಕಳೆದ 140 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸುತ್ತಿದ್ದಾರೆ.  ಇದೇ ಜುಲೈ 9ಕ್ಕೆ 150 ದಿನಗಳು ಪೂರೈಸಲಿದೆ. ಅಷ್ಟರೊಳಗೆ ಸರ್ಕಾರ ನಾಗಮೋಹನ ದಾಸ್ ಆಯೋಗದ ವರದಿಯನ್ನು ಜಾರಿಗೆ ತರಬೇಕು ಇಲ್ಲದಿದ್ದರೆ ಪ್ರತಿಭಟನೆಗಳು ತೀವ್ರವಾಗುತ್ತವೆ. ಆಗ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದರು.

ನ್ಯಾ.ಎಚ್.ಎನ್.ನಾಗಮೋಹನದಾಸ್ ಆಯೋಗ ತನ್ನ ವರದಿ ಕೊಟ್ಟು 2 ವರ್ಷವಾಗಿದೆ. ಯಾವುದೇ ಆಗ್ರಹವೂ ಇಲ್ಲದಿದ್ದರೂ ಬಿಜೆಪಿ ಸರ್ಕಾರ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ಮೀಸಲಾತಿ ಕೊಟ್ಟಿದೆ. ಇಷ್ಠೇ ಕಾಳಜಿಯನ್ನು ರಾಜ್ಯದ ಬಿಜೆಪಿ ಸರ್ಕಾರ ಕೂಡ ಈ ಸಮುದಾಯಗಳ ಬಗ್ಗೆ ತೋರಿಸಬೇಕು. ಮೀಸಲಾತಿ ಸಂವಿಧಾನದ ಹಕ್ಕು ಎಂದರು.

ಎಸ್ಸಿಗಳಿಗೆ ಶೇ 17, ಎಸ್ಸಿಗಳಿಗೆ ಶೇ 7.5 ಮೀಸಲಾತಿ ನಿಗಧಿಪಡಿಸಿ – ವಾಸು

ವಾಲ್ಮೀಕಿ ಸಮುದಾಯದ ಜಿಲ್ಲಾಧ್ಯಕ್ಷ ವಾಸು ಮಾತನಾಡಿ ಎಸ್ಸಿ ಸಮುದಾಯಕ್ಕೆ ಹಾಲಿ ಶೇ 15 ಮೀಸಲಾತಿ ಇದೆ. ಇದನ್ನು ಶೇ 17ಕ್ಕೆ ಹೆಚ್ಚಿಸಬೇಕು. ಎಸ್ಸಿ ಸಮುದಾಯಕ್ಕಿರುವ ಮೀಸಲಾತಿಯನ್ನು ಶೇ 3 ರಿಂದ 7.5ಕ್ಕೆ ಏರಿಸಬೇಕು. ಇದು ನ್ಯಾ. ನಾಗಮೋಹನದ ದಾಸ್ ಆಯೋಗದ ಶಿಪಾರಸ್ಸು ಸಹ ಆಗಿದೆ. ವರದಿ ಕೊಟ್ಟು 2 ವರ್ಷಗಳಾದರು ಮೀಸಲಾತಿ ಹೆಚ್ಚಳವಾಗಿಲ್ಲ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಜರಿದರು.

ನಾವು ನಮ್ಮ ಸಂವಿಧಾನದ ಹಕ್ಕು ಕೇಳುತ್ತಿದ್ದೇವೆ. ಬಿಕ್ಷೆಯನ್ನಲ್ಲ ಎಂದರು. ಮಾಡು ಇಲ್ಲವೆ ಮಡಿ ಎಂಬ ಉದ್ದೇಶದಿಂದ ಶ್ರೀ ವಾಲ್ಮೀಕಿ ಪ್ರಸನ್ನಾಂದ ಸ್ವಾಮೀಜಿ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳು ಅವರನ್ನು ಭೇಟಿ ಮಾಡಿದ್ದರು. ಆದರೆ ಯಾವ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿರುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಅಂದಾನಪ್ಪ, ನಾಗೇಶ್, ನರಸಿಂಹಯ್ಯ, ಕಿರಣ್ ಕುಮಾರ್, ಜಗದೀಶ್, ಕಾಮರಾಜ್, ಗೌರಮ್ಮ ಶಿವಲಿಂಗೇಗೌಡ ಮುಂತಾದವರು ಹಾಜರಿದ್ದರು.