ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ರಾಮನಗರದ ವಿಜಯ್ ಕುಮಾರ್ ತಂಡದಿಂದ ಮಂಗಳವಾದ್ಯ

ರಾಮನಗರ: 16ನೇ ಜನವರಿ 2024: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ವಿಚಾರದಲ್ಲಿ ಕನ್ನಡಿಗರು ಮತ್ತೊಮ್ಮೆ ಹೆಮ್ಮೆ ಪಡಬೇಕಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ಅದೇ ವೇಳೆಯಲ್ಲಿ ರಾಮನಗರದ ಡೋಲು ವಿದ್ವಾನ್ ವಿಜಯ್ ಕುಮಾರ್ ನೇತೃತ್ವದ ತಂಡ ಮಂಗಳವಾದ್ಯ ಮೊಳಗಿಸಲಿದೆ!

ಹೌದು, ರಾಮನಗರದ ಡೋಲು ಕಲಾವಿದ ವಿಜಯ್ ಕುಮಾರ್ ನೇತೃತ್ವದಲ್ಲಿ ೧೦ ಮಂದಿಯ ತಂಡ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲನ ಪ್ರಾಣಪತ್ರಿಷ್ಠಾಪನೆ ವೇಳೆಯಲ್ಲಿ ಮಂಗಳವಾದ್ಯ ನೆರೆವೇರಿಸಲಿದ್ದು, ಒಟ್ಟು ೪೮ ದಿನಗಳ ಕಾಲ ಅಯೋಧ್ಯೆಯ ಶ್ರೀರಾಮ ದೇವಾಲಯದಲ್ಲೇ ಇದ್ದು, ಮಂಗಳವಾದ್ಯ ಮೊಳಗಿಸಲಿದ್ದಾರೆ.

ರಾಮನಗರದ ಕೃಷ್ಣಪ್ಪ, ಲಕ್ಷ್ಮಮ್ಮ ದಂಪತಿಯ ಪುತ್ರ ವಿಜಯ್ ಕುಮಾರ್ ಪರಂಪರೆಯ ವೃತ್ತಿಯನ್ನೇ ಜೀವನ ಸಾಗಿಸಲು ಆಯ್ಕೆ ಮಾಡಿಕೊಂಡು ೨೫ ವರ್ಷಗಳಾಗಿದೆ. ತಂದೆ ಕೃಷ್ಣಪ್ಪನವರಿಗೆ ಈಗ ೮೦ ವರ್ಷ, ಅವರು ಡೋಲು ಭಾರಿಸುವ ವೃತ್ತಯಲ್ಲೇ ಪಳಗಿದವರು. ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನೇ ವಿಜಯ್ ಕುಮಾರ್ ಕರಾಗತ ಮಾಡಿಕೊಂಡಿದ್ದಾರೆ.

೪೧ ವರ್ಷದ ವಿಜಯ್ ಕುಮಾರ್‌ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಎಸ್.ಎಸ್.ಎಲ್.ಸಿಗೆ ತಮ್ಮ ವ್ಯಾಸಂಗ ಮುಗಿಸಿದ ವಿಜಯ್ ಕುಮಾರ್ ಡೋಲು ಭಾರಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ೫ ಭಾಷೆಗಳನ್ನು ಮಾತನಾಡುತ್ತಾರೆ.

ಪ್ರತಿವರ್ಷ ಅಯೋಧ್ಯೆಗೆ!

೨೦೦೮ರಿಂದ ನಿರಂತರವಾಗಿ ಪ್ರತಿ ವರ್ಷ ಶ್ರೀರಾಮ ನವಮಿಯಂದು ವಿಜಯ್ ಕುಮಾರ್ ನೇತೃತ್ವದ ತಂಡ ಅಯೋಧ್ಯೆಯಲ್ಲಿ ಹಾಜರ್! ಅಂದಿನಿಂದಲೂ ವಿಜಯ್ ಕುಮಾರ್ ತಂಡ ಮಂಗಳವಾದ್ಯ ಮೊಳಗಿಸುತ್ತಿದ್ದಾರೆ. ಬಹುಶಃ ಅಲ್ಲಿನ ಮೇಲುಸ್ತುವಾರಿಗಳಿಗೆ ಇವರ ಸೇವೆ ಮತ್ತು ಕಲೆಯ ಸೊಗಸು ಕಂಡು ಇದೇ ಜನವರಿ ೨೨ರಂದು ನಡೆಯುತ್ತಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿಸಿದ್ದಾರೆ.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ವಿಜಯ್ ಕುಮಾರ್, ಕೆಲವು ವಾರಗಳ ಹಿಂದೆ ತಮಗೆ ಅಯೋಧ್ಯೆಯ ಶ್ರೀರಾಮ ದೇವಾಲಯ ಉಸ್ತುವಾರಿ ಒಬ್ಬರಿಂದ ಕರೆ ಬಂದಿತ್ತು. ೪೮ ದಿನಗಳ ಕಾಲ ಮಂಗಳವಾದ್ಯ ಮೊಳಗಿಸಲು ಆಹ್ವಾನಿಸಿದ್ದಾರೆ. ತಮ್ಮ ವೃತ್ತಿ ಜೀವನಕ್ಕೆ ಸಂದ ಸೌಭಾಗ್ಯ ಎಂದು ಭಾವಿಸಿ ತಕ್ಷಣ ಆಹ್ವಾನವನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ಇದೇ ಜ.೧೯ರಂದು ನಾಲ್ವರು ನಾದಸ್ವರ ವಾದಕರು, ನಾಲ್ವರು ಡೋಲು ಭಾರಿಸುವವರು, ಸ್ಯಾಕ್ಸಾಫೋನ್ ನುಡಿಸುವವರು ಒಬ್ಬರು ಮತ್ತು ತಾಳ-ಶೃತಿಗೆ ಒಬ್ಬರು ಹೀಗೆ ೧೦ ಮಂದಿಯ ತಂಡ ಅಯೋಧ್ಯೆಗೆ ತೆರಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ತಮ್ಮ ತಂಡಕ್ಕೆ ಸಂಭಾವನೆ ಸಹ ದೊರೆಯಲಿದೆ ಎಂದಿರುವ ಅವರು, ಒಟ್ಟು ೪೮ ದಿನಗಳ ಕಾಲ ಶ್ರೀರಾಮ ಲಲ್ಲನ ಸನಿಧಿಯಲ್ಲಿ ಮಂಗಳವಾದ್ಯ ಮೊಳಗಿಸುವ ಅವಕಾಶ ದೊರೆತಿದ್ದು ಶ್ರೀರಾಮನ ಕೃಪೆ ಮತ್ತು ತಮ್ಮ ತಂದೆ-ತಾಯಿಯರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಿವಿದೆಡೆ ಕಛೇರಿ, ಗೌರವ

ವಿಜಯ್ ಕುಮಾರ್ ತಮ್ಮ ಕಲೆಯನ್ನು ದೇಶದ ವಿವಿದೆಡೆ ಪ್ರದರ್ಶಿಸಿದ್ದಾರೆ. ದ್ವಾರಕೆಯಲ್ಲಿ ಶ್ರೀಕೃಷ್ಣನ ಸನ್ನಿದಿಯಲ್ಲಿ ಮಂಗಳವಾದ್ಯ ಮೊಳಗಿಸಿದ ಕೀರ್ತಿ ಇವರಿಗಿದೆ. ೨೦೦೯ರಲ್ಲಿ ವಿಶ್ವ ವಿಖ್ಯಾತ ಮೈಸೂರು ದಸಾರ ಮಹೋತ್ಸವದಲ್ಲಿ, ಬೆಂಗಳೂರಿನಲ್ಲಿ ಸದ್ಗುರು ಶ್ರೀ ತ್ಯಗರಾಜ ಮಹಾಸ್ವಾಮಿ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ ಆರಾಧನ ಮಹೋತ್ಸವದಲ್ಲಿ ಕಛೇರಿ ನಡೆಸಿಕೊಟ್ಟಿದ್ದಾರೆ. ಹೈದರಾಬಾದ್, ತಿರುಚಿ, ಧರ್ಮಸ್ಥಳ ಹೀಗೆ ದೇಶ ಮತ್ತು ರಾಜ್ಯದ ವಿವಿದೆಡೆಯಲ್ಲಿ ಇವರ ಕಲಾ ಪ್ರದರ್ಶನವಾಗಿದೆ. ಪಾಂಡವಪುರ ತಾಲೂಕು ಸವಿತಾ ಸಮಾಜ, ವಿಶ್ವಮಾನವ ಟ್ರಸ್ಟ್ , ಕನ್ನಡಿಗರೊಬ್ಬರು ಕೆತ್ತಿದ ಶ್ರೀರಾಮ ಲಲ್ಲನ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಕನ್ನಡಿಗರು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಇದೀಗ ಪ್ರಾಣಪ್ರತಿಷ್ಠಾಪನೆ ವೇಳೆ ಮಂಗಳವಾದ್ಯ ಮೊಳಗಿಸಲು ಕನ್ನಡಿಗರ ತಂಡ ಆಯ್ಕೆಯಾಗಿರುವುದು, ಕನ್ನಡಿಗರು ಮತ್ತೊಮ್ಮೆ ಹೆಮ್ಮೆ ಪಡಬೇಕಾದ ಸಮಯ.