ಜೂನ್ 27ರಂದು ವೀರಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ – ಸಚಿವ ಅಶ್ವಥನಾರಾಯಣ

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿರುವ ಕೆಂಪೇಗೌಡ ವೀರಸಮಾಧಿಯ ಬಳಿ ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನ ಮತ್ತು ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ಬೆಂಗಳೂರಿನ ತಮ್ಮ ಕಛೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ವೇಳೆ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂದು ಮಾಗಡಿಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದರು. ಕೆಂಪೇಗೌಡರ ಸಮಾಧಿಯನ್ನು ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಅಧಿಕಾರಿಗಳ ಗಮನ ಸೆಳೆದ ಅವರು, ಜೂನ್ 27ರ ಒಳಗಾಗಿ ನೀಲನಕ್ಷೆಯನ್ನು ಸಿದ್ದಪಡಿಸಿ ಅದಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ಸಹ ಪಡೆದುಕೊಳ್ಳಲಾಗುವುದು ಎಂದರು.
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ಬೆಂಗಳೂರಿನಲ್ಲಿ ಮತ್ತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಅದೇ ದಿನ ಆಚರಿಸಲಾಗುವುದು ಎಂದರು.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೆಂಪೇಗೌಡರ ಜಯಂತಿಯನ್ನು ಆಚರಣೆ ಆಚರಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ, ರಾಜ್ಯದಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪ್ರತಿಮೆ ಅನಾವರಣ:
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿರುವ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸುವ ನಿರೀಕ್ಷೆ ಇದೆ. ಪ್ರತಿಮೆ ನಿರ್ಮಾಣವಾಗುವ ಜಾಗದಲ್ಲಿ ಲ್ಯಾಂಡ್ಸ್ಕೇಪ್ ಅಭಿವೃದ್ಧಿ ಪಡಿಸಬೇಕಾಗಿದ್ದು. ಇದಕ್ಕಾಗಿ ಮೂರು ತಿಂಗಳು ಬೇಕಾಗಬಹುದು ಎಂದು ಸಚಿವರು ಹೇಳಿದರು.