ಮರ ಬಿದ್ದು ಅಸುನೀಗಿದ್ದ ಬೋರೆಗೌಡರ ಕುಟುಂಬಕ್ಕೆ ಹೆಚ್.ಡಿ.ಕೆ ಸಾಂತ್ವನ


ರಾಮನಗರ: ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರ ಉರುಳಿಬಿದ್ದು ದುರ್ಮರಣಕ್ಕೀಡಾದ ಬಿಡದಿಯ ಇಟ್ಟಮಡು ಬೋರೆಗೌಡರ ಕುಟುಂಬಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿ, 5 ಲಕ್ಷ ರೂ‌ ಪರಿಹಾರದ ಚೆಕ್ ವಿತರಿಸಿದರು.

ಮೃತ ಬೋರೆಗೌಡರ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ಮಾಗಡಿ ಕ್ಷೇತಗರದ ಶಾಸಕ‌ ಎ.ಮಂಜುನಾಥ್ ಅವರೊಂದಿಗೆ‌ ಭೇಟಿ ನೀಡಿದ್ದರು.

ಈ ವೇಳೆ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಧೈರ್ಯ ತುಂಬಿ ಕುಟುಂಬದ ಸ್ಥಿತಿಗತಿಗಳನ್ನು ಕೇಳಿ ತಿಳಿದುಕೊಂಡರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿನ್ನೆಯ ದಿನ ಅವಘಡದಲ್ಲಿ ಬೋರೆಗೌಡರು ನಿಧನ ಹೊಂದಿದ್ದರು. ಅವರದ್ದು ಕಷ್ಟಪಟ್ಟು ಜೀವನ ಮಾಡುತ್ತಿರುವ ಕುಟುಂಬ. ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ನಮ್ಮ ಒಡನಾಟದಲ್ಲಿ ಬೋರೇಗೌಡರು ಇದ್ದರು. ನಮ್ಮ ಜತೆಗೂಡಿ ಕೆಲಸ ಮಾಡುತ್ತಿದ್ದರು. ಅವರ ನಿಧನ ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.

ಪ್ರತಾಪ್ ಸಿಂಹ ಅವರೇ, ಬನ್ನಿ ಸ್ವಿಮ್ಮಿಂಗ್ ಮಾಡಿ:

ಹೈವೆ ಕೆಲಸ ಉತ್ತಮವಾಗಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಉತ್ತಮವಾದ ಕೆಲಸ ಏನಾಗಿದೆ ಎಂದು ಬಂದು ನೋಡೋಕೆ ಹೇಳಿ ಎಂದು ಟೀಕಿಸಿದರು. ರಸ್ತೆ ಮೇಲೆ ನಿಂತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಇವರೇ ರಸ್ತೆ ನಿರ್ಮಾಣ‌ ಮಾಡಿರುವ ರೀತಿ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಲೇವಡಿಯಾಡಿದರು.

ಹೆದ್ದಾರಿ ರಸ್ತೆಯ ಸಂಗಬಸವನ ದೊಡ್ಡಿ ಬಳಿ ನೀರು ನಿಂತಿತ್ತು. ಪ್ರತಾಪ್ ಸಿಂಹ ಅಧಿಕಾರಿಗಳ ಸಭೆ ನಡೆಸಿದ್ದರು. ಈಗ ಬಂದು ಸ್ವಿಮ್ಮಿಂಗ್ ಮಾಡಬಹುದಿತ್ತು ಎಂದು ಕುಟುಕಿದರು. ಅವರು ಸ್ವಿಮ್ಮಿಂಗ್ ಮಾಡೋಕೆ ಅಂತಲೇ‌ ಚೆನ್ನಾಗಿ ನೀರು ನಿಂತಿತ್ತು. ರಸ್ತೆ ಮಾಡಿ ಅಂದ್ರೆ ಸ್ವಿಮ್ಮಿಂಗ್ ಫೂಲ್ ನಿರ್ಮಾಣವಾಗ್ತಿದೆ ಎಂದು ವ್ಯಂಗ್ಯವಾಡಿದರು.

ಕೆರೆ ಒಡೆದಿರೋದರಿಂದ ರಸ್ತೆಲಿ ನೀರು ನಿಂತಿರೋದಲ್ಲ. ಶಾಶ್ವತವಾದ ಕೆಲಸ ಆಗಬೇಕು. ಸರ್ಟಿಫಿಕೆಟ್ ಕೊಡೋಕಲ್ಲ ಅವರು ಇರೋದು ಎಂದು ಕಿಡಿಕಾರಿದರು. ಪ್ರತಾಪ್ ಸಿಂಹ ಪಬ್ಲಿಸಿಟಿ ತಗೋಳೋದನ್ನು ನಿಲ್ಲಿಸಲಿ ಎಂದರು.

ಚೆಕ್ ವಿತರಣೆ ವೇಳೆ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಮತ್ತು ಸ್ಥಳೀಯ ಪ್ರಮುಖರು ಹಾಜರಿದ್ದರು.