ಪ್ರತಿದಿನ ಒಂದೊಂದು ಪುಟ ಸಂವಿಧಾನ ಓದಿ ಅರ್ಥ ಮಾಡಿಕೊಳ್ಳಿ – ಯುವ ಸಮುದಾಯಕ್ಕೆ ಜಿಪಂ ಉಪಕಾರ್ಯದರ್ಶಿ ಎನ್‍.ಆರ್‍.ಉಮೇಶ್‍ ಕರೆ

ರಾಮನಗರ (17/12/2020): ವಿಶ್ವದಲ್ಲೆ ಅತ್ಯಂತ ಶ್ರೇಷ್ಠವಾದದ್ದು ಭಾರತದ ಸಂವಿಧಾನ. ಯುವ ಜನರು ಪ್ರತಿದಿನ ಸಂವಿಧಾನದ ಒಂದೊಂದು ಪುಟವನ್ನೂ ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾುತಿಯ ಉಪ ಕಾರ್ಯದರ್ಶಿ ಎನ್.ಆರ್.ಉಮೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಯುವ ಜನರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆ ಕುರಿತ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನ ಜನರಿಂದ ಜನರಿಗಾಗಿ ರೂಪುಗೊಂಡಿದೆ. ಸಂವಿಧಾನವನ್ನು ನಿಯಮಗಳನ್ನು ಅರಿತಾಗ ಪ್ರಜಾಪ್ರಭುತ್ವ ಪ್ರಜ್ವಲಿಸುತ್ತದೆ ಎಂದರು.

ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ನೂರು ಕೋಟಿಗೂ ಹೆಚ್ಚು ಮತದಾರರಿದ್ದಾರೆ. ಪ್ರತಿಯೊಂದು ಚುನಾವಣೆಗಳ ಫಲಿತಾಂಶವನ್ನು 24 ಗಂಟೆಗಳಲ್ಲಿ ನೀಡುವ ಮೂಲಕ ಮಾದರಿಯಾಗಿದೆ. 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ ಯುವತಿಯರು ಮತದಾರರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರತಿಯೊಬ್ಬ ಮತದಾರರು ಮತದ ಮೌಲ್ಯವನ್ನು ತಿಳಿಯಬೇಕು. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.  

ರಾಮನಗರದಲ್ಲಿ ಮತದಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ಪರ್‘ಾತ್ಮಕ ಚಟುವಟಿಕೆಗಳಿಗೆ ಜಿಪಂ ಉಪಕಾರ್ಯದರ್ಶಿ ಎನ್.ಆರ್.ಉಮೇಶ್ ಉದ್ಘಾಟಿಸಿದರು

ನೂರಕ್ಕೆ ನೂರು ಮತದಾನವಾಗಬೇಕು – ಸಿ.ಎಲ್‍.ಶೈಲಜ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಮನಗರ ಜಿಲ್ಲಾ ಉಪ ನಿರ್ದೇಶಕಿ ಸಿ.ಎಲ್.ಶೈಲಜ ಭಾರತದ ಸಾರ್ವತ್ರಿಕ ಚುನಾವಣೆಗಳಲ್ಲಿ ಶೇ 50 ರಿಂದ 60ರಷ್ಟು ಮಾತ್ರ ಮತ ಚಲಾಯಿಸಲಾಗುತ್ತಿದೆ. ಉಳಿದ ಮತದಾರರು ತಮ್ಮ ಹಕ್ಕನ್ನು ಚಲಾಯಿಸದೆ ಇರುವುದರಿಂದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆಮಾಡಲು ಸಾಧ್ಯವಾಗುತ್ತಿಲ್ಲ. ಯುವ ಜನ ಜಾಗೃತರಾಗಿ ಶೇಕಡ ನೂರಕ್ಕೆ ನೂರರಷ್ಟೂ ಮತದಾನ ಮಾಡುವುದರಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಂತರಂಗ, ಬಹಿರಂಗ ಶುದ್ದರನ್ನು ಆಯ್ಕೆಮಾಡಿ – ಜಿ.ಶಿವಣ್ಣ

ಪ್ರಸ್ತಾವಿಕವಾಗಿ ಮಾತನಾಡಿದ ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಶಿವಣ್ಣ ಸ್ವಾತಂತ್ರ್ಯಪೂರ್ವದಲ್ಲಿ ಜಮೀನ್ದಾರರು ಮತ್ತು ತೆರಿಗೆ ಪಾವತಿದಾರರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು. ಸಂವಿಧಾನ ಅನುಷ್ಠಾನ ಆದಮೇಲೆ ಶ್ರೀಮಂತ ಬಡವ, ಮೇಲು ಕೀಳು, ಅಧಿಕಾರಸ್ಥ, ಅಧಿಕಾರರಹಿತ ಎನ್ನದೆ 18 ವರ್ಷ ತುಂಬಿದ ಎಲ್ಲಾ ಅರ್ಹ ಮತದಾರರಿಗೆ ಮತದಾನದ ಹಕ್ಕು ನೀಡಲಾಗಿದೆ. ಪ್ರತಿ ಮತವೂ ಸಮಾನ ಮೌಲ್ಯಹೊಂದಿರುವುದು ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಿದೆ. ಚುನಾವಣಾ ಆಯೋಗ ಹಲವಾರು ಮಾರ್ಪಾಡುಗಳನ್ನು ಮಾಡುತ್ತಿದ್ದರೂ ಚುನಾವಣೆಗಳು ಉಳ್ಳವರ ಸ್ವತ್ತಾಗಿವೆ. ಅಧಿಕಾರದಾಹಿಗಳ ಕೈವಶವಾಗಿವೆ. ಸಾಮಾನ್ಯರಿಗೂ ಅಧಿಕಾರ ಎಟುಕಬೇಕಾದರೆ ಮತದಾನ ಪ್ರಕ್ರಿಯೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕು. ಅಂತರಂಗ ಮತ್ತು ಬಹಿರಂಗ ಶುದ್ಧತೆಯುಳ್ಳವರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ರಾಮನಗರದಲ್ಲಿ ಮತದಾರರ ದಿನಾಚರಣೆಯ ಅಂಗವಾಗಿ ಅಯೋಜಿಸಲಾಗಿದ್ದ ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಕೆಲವು  ವಿದ್ಯಾರ್ಥಿಗಳು ತಮ್ಮ ರಚನೆಯೊಂದಿಗೆ.

ಚುನಾವಣಾಪೂರ್ವದಲ್ಲಿ ಹಣ ಹಂಚಿಕೆ ಮತ್ತು ಚುನಾವಣೋತ್ತರದಲ್ಲಿ ಹಣಗಳಿಕೆಗೆ ಕಡಿವಾಣ ಹಾಕಿದಾಗ ಪ್ರಜಾಸೇವಾ ಪ್ರಜಾಪ್ರಭುತ್ವವನ್ನು ಕಟ್ಟಲು ಸಾಧ್ಯವಾಗುತ್ತದೆ. ಉಮೇದುವಾರರು ಆಸೆ ಆಮೀಷಗಳನ್ನು ತೋರಿಸಿ ಮತಯಾಚನೆ ಮಾಡುವ ಬದಲು ಜನಕಲ್ಯಾಣ ಕಾರ್ಯಕ್ರಮಗಳನ್ನು ಮುಂದಿಟ್ಟು ಮತ ಕೇಳಬೇಕು. ಹೆದರಿಸಿ, ಬೆದರಿಸಿ ಮತ ಬೇಡುವಿಕೆ ಸರ್ವಾಧಿಕಾರತ್ವದ ಸಂಕೇತವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಜ್ಜನಿಕೆ, ಪ್ರಾಮಾಣಿಕತೆ, ಸಚ್ಚ್ಯಾರಿತ್ರ್ಯ, ನೈತಿಕತೆ ಗುಣಗಳನ್ನು ಆಧರಿಸಿ ಮತ ಕೇಳಬೇಕು. ರಾಜಕೀಯ ಹಿಂಸೆ, ಹತ್ಯೆಗಳನ್ನು ತಡೆಗಟ್ಟಿ ಪ್ರಾಜಾಪೂರಕ ಚುನಾವಣೆಗಳನ್ನು ನಡೆಸಲು ಯುವ ಜನರಲ್ಲಿ ಜಾಗೃತಿ ಅತ್ಯವಶ್ಯಕ ಎಂದರು.

ಜನಸಾಮಾನ್ಯರು ಮತದಾನ ಮಾಡುವುದಕ್ಕೆ ಸೀಮಿತವಾಗದೆ ಅಭ್ಯರ್ಥಿಗಳಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಹಸಕ್ಕೆ ಇಳಿಯಬೇಕು. ಚುನಾವಣೆ ಮಾಡಲು ಹಣಬೇಕು ಎನ್ನುವ ನೆಪವನ್ನು ಮುಂದಿಟ್ಟು ಅಭ್ಯರ್ಥಿಗಳಾಗದೆ ದೂರಉಳಿಯುವಿಕೆ ಸದೃಢ ಪ್ರಜಾಪ್ರಭುತ್ವ ನಿರ್ಮಿಸುವುದು ಅಸಾಧ್ಯವಾಗುತ್ತದೆ. ಚುನಾವಣೆಗಳಲ್ಲಿ ನಿಂತವರೆ ಮತ್ತೆ ಮತ್ತೆ ನಿಲ್ಲುವ ಪ್ರವೃತ್ತಿ ವಿಪರೀತವಾಗಿದೆ. ಕುಟುಂಬ ರಾಜಕಾರಣ, ಭ್ರಷ್ಠ ರಾಜಕಾರಣ ಕೊನೆಗೊಳಿಸಲು ನೈತಿಕ ರಾಜಕಾರಣ, ನಿಯತ್ತಿನ ರಾಜಕಾರಣ ಅನುಷ್ಠಾನಕ್ಕೆ ತರಲು ಯುವ ಜನರಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಚಿಕ್ಕಂದಿನಿಂದಲೇ ತುಂಬಬೇಕಾಗಿದೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸೋಮಶೇಖರಯ್ಯ, ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಜಿಲ್ಲಾ ಮಟ್ಟದ ಸ್ಪರ್ಧೆಗಳ ನೋಡಲ್ ಅಧಿಕಾರಿಗಳಾದ ಎಂ.ಎನ್.ಪ್ರದೀಪ್, ಚಿನ್ನಸ್ವಾಮಿ, ಪ್ರಾಂಶುಪಾಲ ಕೆ.ಎಂ.ಭೈರೇಶ್, ಮುಖ್ಯೋಪಾಧ್ಯಾುನಿ ಪಿ.ವಿ.ಅನಿತಾ, ಉಪನ್ಯಾಸಕರುಗಳಾದ ಪಿ.ಮಂಜುಳಾ, ಡಾ.ವೆಂಕಟಾಚಲಯ್ಯ, ಜಿ.ಎಂ.ವೀಣಾ, ಶಾರದಾ ಬಡಿಗೇರ, ಎಚ್.ಎನ್.ಶಶಿಕಲಾ, “ಜಯಾಂಬಿಕೆ, ಹಾಲೇಶ್, ಮಹಾದೇವು ಮೊದಲಾದವರು ಉಪಸ್ಥಿತರಿದ್ದರು.

********