ಪಡೆದ ಸಾಲವನ್ನು ಸಕಾಲಕ್ಕೆ ಹಿಂತಿರುಗಿಸಿ : ಡಿ.ಎಸ್. ಅರುಣ್

ರಾಮನಗರ, ಜೂನ್‍ 20: ನಿಗಮದಿಂದ ಸಾಲ ಪಡೆದ ಫಲಾನುಭವಿಗಳು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದರೆ ಸಮುದಾಯದ ಇನ್ನಷ್ಟು ಬಡವರಿಗೆ ಅನುಕೂಲ ಮಾಡಿಕೊಡಬಹುದು ಎಂದು ಕರ್ನಾಟಕ ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್‍.ಅರುಣ್‍ ಕರೆ ನೀಡಿದರು.

ನಗರದಲ್ಲಿರುವ ನಿಗಮದ ಜಿಲ್ಲಾ ಕಚೇರಿಯಲ್ಲಿ ಆರ್ಯ ವೈಶ್ಯ ಸಮುದಾಯದ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಸಾಲ ಪಡೆದ ಫಲಾನುಭವಿಗಳು ಸಮಾಜ ಕಟ್ಟುವ ಕೆಲಸ ಮಾಡಬೇಕು. ಸಾಲದ ಮೊತ್ತ ಅಲ್ಪ ಮೊತ್ತವಾದರೂ ಅದರ ಸದುಪಯೋಗ ಪಡೆದುಕೊಳ್ಳಿ. ಒಳ್ಳೆಯ ಕೆಲಸಕ್ಕೆ ಬಳಸಿ ಅಭಿವೃದ್ಧಿ ಹೊಂದಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ನೇರಸಾಲ ಯೋಜನೆಗಳನ್ನು ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಆರಂಭಿಸಲಾಗಿದೆ ಎಂದರು.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿದ ಅರ್ಜಿದಾರರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 1 ಲಕ್ಷ ರೂ ಆರ್ಥಿಕ ನೆರವು ಒದಗಿಸಲಾಗುವುದು. ಈ ಯೋಜನೆಯಡಿಯಲ್ಲಿ ಜಿಲ್ಲೆಯಿಂದ 16 ಫಲಾನುಭವಿಗಳಿಗೆ ತಲಾ ರೂ. 1 ಲಕ್ಷ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆರ್ಯ ವೈಶ್ಯ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯಡಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಿ ಇ ಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶೇ.2ರ ಬಡ್ಡಿದರದಲ್ಲಿ ಗರಿಷ್ಠ 1 ಲಕ್ಷ ರೂ ಶೈಕ್ಷಣಿಕ ಸಾಲ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ಸಾಂಪ್ರದಾಯಕ ವೃತ್ತಿಗಳಲ್ಲದೆ ಹಸು ಸಾಕಾಣಿಕೆ, ಸೇವಾ ಚಟುವಟಿಕೆಗಳು ಚಕ್ಕಲಿ, ನಿಪ್ಪಟ್ಟು ತಯಾರಿಸಿ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಸಹ ಈ ನೆರವು ಪಡೆದುಕೊಳ್ಳಬಹುದು. ಯೋಜನೆಯಡಿ ಕನಿಷ್ಠ 50 ಸಾವಿರ ರೂ. ನೆರವು ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ. 20 ರಷ್ಟು ಸಹಾಯಧನವಾಗಿ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುವುದು. ಅರ್ಜಿದಾರರು 45 ವರ್ಷಕ್ಕಿಂತ ಒಳಗಿನವರಾಗಿರಬೇಕು. ನಿಗಮದ ಯೋಜನೆಯ ನೆರವು ಸುಲಭವಾಗಿ ಪಡೆಯಲು ಹಾಗೂ ಶಾಲಾ ಪ್ರವೇಶಕ್ಕೆ ಅರ್ಜಿಸಲ್ಲಿಸಲು, ಸರ್ಕಾರಿ ಸಂಸ್ಥೆಗಳಿಂದ ಸಾಲ ಸೌಲಭ್ಯ, ಸಹಾಯಧನ ಮತ್ತು ತರಬೇತಿ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವೂ ಕಡ್ಡಾಯವಾಗಿದೆ. ಆದರೆ ಈ ಮೊದಲು ಜಾತಿ ಪ್ರಮಾಣ ಪತ್ರ ನೀಡುತ್ತಿರಲಿಲ್ಲ. ಕ್ಯಾಬಿನೆಟ್ನಲ್ಲಿ ಅನುಮತಿ ಪಡೆದು ಡಿಸೆಂಬರ್ 16 ರಿಂದ ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಇದರ ನೆರವು ಪಡೆದುಕೊಂಡು ಸರ್ಕಾರದಿಂದ ಬರುವ ಎಲ್ಲಾ ಸೌಲತ್ತುಗಳಗಳೊಂದಿಗೆ ಈ ನಿಗಮದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.

ಫುಡ್‍ ಟ್ರಕ್‍

ಆರ್ಯವೈಶ್ಯ ಸಮುದಾಯದವರು ಹೆಚ್ಚಾಗಿ ಆಹಾರ ಉತ್ಪನ್ನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲಾ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಮೂರು ಗಾಲಿ ಹಾಗೂ ನಾಲಕ್ಕು ಗಾಲಿಗಳ ಫುಡ್ ಟ್ರಕ್ ನೀಡಲಾಗುವುದು ಎಂದು ಹೇಳಿದರು. ಪ್ರತಿ ಟ್ರಕ್ಕಿಗೆ 5 ಲಕ್ಷ ರೂ ವೆಚ್ಚವಾಗಲಿದೆ. ಟ್ರಕ್ ತಯಾರಿಕರ ಬಳಿಯು ಈ ಬಗ್ಗೆ ಚರ್ಚಿಸಲಾಗಿದೆ. 100 ಟ್ರಕ್ ಗಳನ್ನು ನೀಡಲು 5 ಕೋಟಿ ರೂಗಳ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿರುವುದಾಗಿ ಅವರು ಹೇಳಿದರು. ರಾಜ್ಯದಲ್ಲಿ 10 ಲಕ್ಷದಷ್ಟು ಆರ್ಯವೈಶ್ಯ ಸಮುದಾಯದವರಿದ್ದು ಸಮಾಜದ ಕಡುಬಡವರನ್ನು ಮೇಲೆತ್ತುವ ಉದ್ದೇಶದಿಂದ ಸರ್ಕಾರವು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪ್ರಕಾಶ್ ಹಾಗೂ ಸಮಾಜದ ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷ ಕೆ.ಎಲ್. ರತ್ನಶೇಖರ್, ಕಾರ್ಯದರ್ಶಿ ಕೆ.ವಿ.ಉಮೇಶ್, ವಾಸವಿ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್.ನಾಗೇಶ್, ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಕೆ.ರಾಮನಾಥ್, ಕೆ.ಎ.ವಿ.ಎಂ.ಎಸ್‍ ನಿರ್ದೇಶಕ ಕೆ.ವಿ.ಪ್ರಸನ್ನ ಕುಮಾರ್‍, ಆರ್ಯ ವೈಶ್ಯ ಮಹಿಳಾ ಮಂಡಳಿ ಮತ್ತು ವಾಸವಿ ಯೂತ್ಸ್ ಫೋರಂ ಪದಾಧಿಕಾರಿಗಳು ಉಪಸ್ಥಿತರಿದ್ದರು.

...........