ಹಾರೋಹಳ್ಳಿ ನೂತನ ತಾಲೂಕು ನಾಳೆ (ಫೆ.21) ಉದ್ಘಾಟನೆ

* ರಾಮನಗರ ಜಿಲ್ಲೆಯ 5ನೇ ತಾಲೂಕು ಅಸ್ತಿತ್ವಕ್ಕೆ

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನಿಂದ  ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನು ಬೇರ್ಪಡಿಸಿ ಹಾರೋಹಳ್ಳಿ ಹೊಸ ತಾಲೂಕು ಉದ್ಘಾಟನೆಗೆ ಸರ್ಕಾರ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದೆ. ಫೆ.21ರ ಮಂಗಳವಾರ ಜಿಲ್ಲೆಯ 5ನೇ ತಾಲೂಕು ಅಸ್ತಿತ್ವಕ್ಕೆ ಬರಲಿದೆ.

ಹಾರೋಹಳ್ಳಿ ಹೊಸ ತಾಲೂಕು ರಚನೆಗೆ  2018ರಲ್ಲಿ ಉದ್ದೇಶಿಸಲಾಗಿತ್ತು. 2019 ಫೆಬ್ರವರಿಯಲ್ಲಿ ಮಂಡನೆಯಾದ ಬಜೆಟ್‌ನಲ್ಲಿ ಈ ವಿಚಾರ ಉಲ್ಲೇಖವಾಗಿತ್ತು. ರಾಜ್ಯದ ಆರ್ಥಿಕ ಇಲಾಖೆಯ ಅನುಮೋದನೆ ಸಿಗುವುದು ತಡವಾಗಿದೆ ಎಂದು ಸರ್ಕಾರ ಹೇಳಿತ್ತು. 2022ರ ಜನವರಿಯಲ್ಲಿ ಸರ್ಕಾರ ಹಾರೋಹಳ್ಳಿ ಹೊಸ ತಾಲೂಕು ರಚನೆಗೆ ಕಂದಾಯ ವೃತ್ತಗಳನ್ನು ಗುರುತಿಸಿ ಅಂತಿಮ ಆದೇಶ ಹೊರೆಡಿಸಿತ್ತು.

252 ಗ್ರಾಮಗಳನ್ನು ಒಳಗೊಂಡಿದೆ ನೂತನ ತಾಲೂಕು!

ಹಾರೋಹಳ್ಳಿಯ 11 ವೃತ್ತಗಳ 107 ಗ್ರಾಮಗಳು ಮತ್ತು ಮರಳವಾಡಿ ಹೋಬಳಿಯ 15 ವೃತ್ತಗಳ 145 ಗ್ರಾಮಗಳು ಒಟ್ಟು 26 ಕಂದಾಯ ವೃತ್ತಗಳ 252 ಗ್ರಾಮಗಳನ್ನು ನೂತನ ತಾಲೂಕಿಗೆ ಸೇರ್ಪಡೆಯಾಗಲಿವೆ. ಹಾರೋಹಳ್ಳಿ ತಾಲೂಕಿನ ಗಡಿಯಲ್ಲಿ ಪೂರ್ವಕ್ಕೆ ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಪಶ್ವಿಮಕ್ಕೆ ರಾಮನಗರ ತಾಲೂಕು, ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲೂಕು ಮತ್ತು ಆನೇಕಲ್ ತಾಲೂಕುಗಳ ಗಡಿ ಹಾಗೂ ದಕ್ಷಿಣದಲ್ಲಿ ಕನಕಪುರ ತಾಲೂಕಿನ ಗಡಿ ಇರಲಿದೆ.

ತಾಲೂಕು ಕಚೇರಿ ಸೇರಿದಂತೆ ಒಟ್ಟು 31 ಸರ್ಕಾರಿ ಕಚೇರಿಗಳು ನೂತನ ತಾಲೂಕಿನ ಆಡಳಿತ ನಡೆಸಲಿವೆ. ಹಾರೋಹಳ್ಳಿ ತಾಲೂಕು ಕಚೇರಿ ಪಟ್ಟಣ ಪಂಚಾಯ್ತಿ ಕಟ್ಟಡದಲ್ಲೇ ಸಧ್ಯಕ್ಕ ಕಾರ್ಯನಿರ್ವಹಿಸಲಿದೆ.

ಹಾರೋಹಳ್ಳಿ ತಾಲೂಕು ರಚನಾ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮುರುಳೀಧರ ಈ ವಿಚಾರದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿ ಪ್ರತ್ಯೇಕ ತಾಲೂಕು ರಚನೆಗೆ ಹಲವಾರು ವರ್ಷಗಳ ಹೋರಾಟ ಇದೀಗ ಸಫಲವಾಗುತ್ತಿದೆ ಎಂದು ತಿಳಿಸಿದರು.

ನಾಳೆ ಉದ್ಘಾಟನೆ

ಹಾರೋಹಳ್ಳಿ ನೂತನ ತಾಲ್ಲೂಕಿನ ಉದ್ಘಾಟನಾ ಸಮಾರಂಭವನ್ನು ಜಿಲ್ಲಾಡಳಿತ ಇದೇ ಫೆ. 21ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಹಾರೋಹಳ್ಳಿಯ ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವರಾದ ಆರ್. ಅಶೋಕ್ ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ ವಹಿಸುವರು.