ರಾಮನಗರದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ಸುದ್ದಿ ಪ್ಲಸ್,  ರಾಮನಗರ:

ಎರಡು ವಾರಗಳ ನಂತರವೂ ಜಿಲ್ಲಾ ಕೇಂದ್ರ ರಾಮನಗರದ 1 ರಿಂದ 10ನೇ ವಾರ್ಡುಗಳಲ್ಲಿ ಕುಡಿಯುವ ನೀರು ಸರಬರಾಜು ಆಗದೆ ಜನ ಪರದಾಡುತ್ತಿದ್ದಾರೆ. ಜಲಮಂಡಳಿ ಮತ್ತು ನಗರಸಭೆಗೆ ನಾಗರೀಕರು ಹಿಡಿ ಶಾಪ ಹಾಕುತ್ತಿದ್ದಾರೆ. ಮಳೆ ನೆಪ ಹೇಳಿಕೊಂಡು ಜಲಮಂಡಳಿ ಅಧಿಕಾರಿಗಳು ಸಮಜಾಯಿಷಿ ಕೊಟ್ಟಿದ್ದಾರೆ.

ಅರ್ಕಾವತಿ ನದಿ ಮೂಲದಿಂದ ರಾಮನಗರ ನಗರ ವ್ಯಾಪ್ತಿಯಲ್ಲಿ ದ್ಯಾವರಸೇಗೌಡನದೊಡ್ಡಿ ಪಂಪ್ ‌ಹೌಸ್‌ನಿಂದ ನಗರದ ವಾರ್ಡ್ ನಂ.01 ರಿಂದ 10 ಹಾಗೂ ವಾರ್ಡು 12ಕ್ಕೆ ಮಂಡಳಿಯವತಿಯಿಂದ ಶುದ್ಧೀಕೃತ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ಅರ್ಕಾವತಿ ನದಿ ಪಾತ್ರದ ಸಂಗ್ರಹಣಾ ಪ್ರದೇಶದಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ, ನದಿಯಲ್ಲಿ ಹೆಚ್ಚಾಗಿ ಮಣ್ಣು ಮಿಶ್ರಿತ ನೀರು ಹರಿಯುತ್ತಿದೆ. ಇದರಿಂದ ನೀರು ಶುದ್ಧೀಕರಿಸುವ ಫಿಲ್ಟರ್‌ಗಳು ಪದೇ ಪದೇ ಬ್ಲಾಕ್ ಆಗುತ್ತಿದೆ . ಹೀಗಾಗಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ನದಿಯಲ್ಲಿಹರಿಯುತ್ತಿರುವ ಮಣ್ಣುಮಿಶ್ರಿತ ನೀರಿನಿಂದ ಸಾಂಕ್ರಮಿಕ ರೋಗಗಳನ್ನುತಡೆಯುವಸಲುವಾಗಿ ಮುನ್ನೆಚ್ಚರಿಕೆಯಾಗಿ ಮತ್ತು ನದಿಯ ನೀರು ತಿಳಿಯಾಗುವವರೆಗೆ ನೀರು ಸರಬರಾಜನ್ನುಸ್ಥಗಿತಗೊಳಿಸಲಾಗಿದೆ, ಸಾರ್ವಜನಿಕರುಸಹಕರಿಸಬೇಕುಎಂದುಮಂಡಳಿಯಸಹಾಯಕಕಾರ್ಯಪಾಲಕರುಪತ್ರಿಕಾಪ್ರಕಟಣೆಹೊರೆಡಿಸಿದ್ದಾರೆ.

ಅಧಿಕಾರಿಗಳಿಗೆ ನೈತಿಕ ಹೊಣೆ ಇಲ್ಲವೇ? ನಾಗರೀಕರ ಪ್ರಶ್ನೆ

ಹೀಗೆ ವಾರಗಟ್ಟಲೆ ನೀರು ಸರಬರಾಜು ಮಾಡದ ಜಲಮಂಡಳಿ ಪರ್ಯಾಯ ವ್ಯವಸ್ಥೆ ಅಂದರೆ ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡುತ್ತಿಲ್ಲವೇಕೆ ಎಂದು ನಾಗರೀಕರು ಪ್ರಶ್ನಿಸಿದ್ದಾರೆ. ಪ್ರತಿ ತಿಂಗಳು ನೀರು ಶುಲ್ಕ ಪಾವತಿ ಮಾಡದಿದ್ದರೆ ದಂಡ ಕಟ್ಟಿಸಿಕೊಳ್ಳುವ ಮತ್ತು ಸರಬರಾಜು ಸ್ಥಗಿತಗೊಳಿಸುವ ಬೆದರಿಕೆ ಒಡ್ಡುವ ಅಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ನೈತಿಕ ಹೊಣೆ ಇಲ್ಲವೆ ಎಂದು ನಾಗರೀಕರು ಖಾರವಾಗಿ ಪ್ರಶ್ನಿಸಿದ್ದಾರೆ.

……………..