ರಾಮನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಸಂಕಲ್ಪ, ಭೂಮಿ ಪೂಜೆ

* ಮೂರು ಕೋಟಿ ರೂ ವೆಚ್ಚದ ಅಂದಾಜು

* ಶಬರಿಮಲೆ ದೇವಾಲಯದ ಪ್ರತಿರೂಪ

ರಾಮನಗರ:15 ಏಪ್ರಿಲ್ 2024:  ನಗರದ ಅಗ್ರಹಾರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿದೆ. ಸುಮಾರು 3 ಕೋಟಿ ರೂ ವೆಚ್ಚದಲ್ಲಿ ದೇವಾಲಯ ನಿರ್ಮಾಣವನ್ನು ಉದ್ದೇಶಿಸಲಾಗಿದೆ.

ನಗರದ ಅಗ್ರಹಾರದ ಶ್ರೀ ವ್ಯಾಸರಾಯರ ರಸ್ತೆಯಲ್ಲಿರುವ (ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದ ಹಿಂಭಾಗ) ಶ್ರೀ ಅಯ್ಯಪ್ಪಸ್ವಾಮಿ ಸೇವಾ ಮಂಡಳಿ ಟ್ರಸ್ಟ್‌ನ ಸ್ವಂತ ಭೂಮಿಯಲ್ಲಿ ಭವ್ಯ ದೇವಾಲಯ ನಿರ್ಮಾಣಕ್ಕೆ ಟ್ರಸ್ಟ್ ಪದಾಧಿಕಾರಿಗಳು ಸಂಕಲ್ಪಿಸಿ ಭೂಮಿ ಪೂಜೆ ನೆರೆವೇರಿಸಿದರು.

ಈ ವೇಳೆ ಟ್ರಸ್ಟ್ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಕೆ.ಶೇಷಾದ್ರಿ (ಶಶಿ) ಮಾತನಾಡಿ ರಾಮನಗರದ ಆಸ್ತಿಕರ ಬಹುದಿನಗಳ ಕನಸು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣಕ್ಕೆ ಗಳಿಗೆ ಕೂಡಿ ಬಂದಿದೆ ಎಂದರು. ದೇವಾಲಯ ನಿರ್ಮಾಣಕ್ಕೆ ಭಕ್ತರು ತನು, ಮನ, ಧನ ಅರ್ಪಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಆರ್.ಜೆ.ಕುಮಾರಸ್ವಾಮಿ (ಅನಂತು), 1995ರಲ್ಲಿ ನಗರದ ಭಕ್ತವೃಂದ 1 ಎಕರೆ 5 ಕುಂಟೆ ಭೂಮಿಯನ್ನು ಖರೀದಿಸಲಾಗಿದೆ. ನಗರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದ ಕಟ್ಟಡ ನಿರ್ಮಾಣ ಶಿಲ್ಪಿ ಕಾರ್ಕಳ ನಗರದ ಚಂದ್ರಶೇಖರ್ ಅವರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೂ ನೀಲನಕ್ಷೆ ತಯಾರಿಸಿ ಕೊಟ್ಟಿದ್ದಾರೆ. ಸುಮಾರು 12 ಸಾವಿರ ಚದರಡಿಯಲ್ಲಿ ದೇವಾಲಯ ಕಟ್ಟಡ ನಿರ್ಮಾಣವಾಗಲಿದೆ. ಶಬರಿ ಮಲೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದ ಪ್ರತಿರೂಪವಾಗಿ ರಾಮನಗರದಲ್ಲಿಯೂ ದೇವಾಲಯ ನಿರ್ಮಾಣವಾಗಲಿದೆ ಎಂದರು. ದೇವಾಲಯ ನಿರ್ಮಾಣಕ್ಕೆ ಜಿಲ್ಲೆಯ ನಾಗರೀಕರ ಸಹಕಾರ ಬೇಕಾಗಿದೆ ಎಂದರು. ಸಧ್ಯಕ್ಕೆ ವಾಹನಗಳ ಪಾರ್ಕಿಂಗ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಭವ್ಯವಾದ ದೇವಾಲಯ ನಿರ್ಮಾಣವಾಗಲಿದೆ, ಮುಂದಿನ ದಿನಗಳಲ್ಲಿ ಪೂಜಾಕರ್ತರು ಉಳಿದುಕೊಳ್ಳಲು ಕೊಠಡಿಗಳು ಸೇರಿದಂತೆ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶವಿದೆ ಎಂದರು.

ಪೂಜಾ ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯಾಕಾರಿ ಅಧ್ಯಕ್ಷ ಪಿ.ವಿ.ಪ್ರಭಾಕರ ಶೆಟ್ಟಿ, ನಿರ್ದೇಶಕರುಗಳಾದ ಪ್ರದೀಪ್, ಪಿ.ವಿ.ಬದರಿನಾಥ್, ಕೃಷ್ಣಪ್ಪ (ಸ್ಟೀಲ್), ಸಿ.ಎಸ್.ಮಹೇಶ್, ಕಿಟ್ಟಪ್ಪ ಮತ್ತು ಸಾರ್ವಜನಿಕ ಪ್ರಮುಖರು ಭಾಗವಹಿಸಿದ್ದರು.