ಪಿ.ಎಂ.ಕೇರ್ಸ್‌ ನಿಧಿಗೆ ತಾಲೂಕಿನ 3 ವರ್ಷದ ಬಾಲಕನ ಕೊಡುಗೆ

* ಟ್ಯಾಬ್ ಕೊಳ್ಳಲು ಕೂಡಿಟ್ಟ ಹಣ ದೇಶಕ್ಕಾಗಿ ಅರ್ಪಿಸಿದ ಬಾಲಕ

ರಾಮನಗರ, 15ಜೂನ್‍2020: ಸುದ್ದಿ ಪತ್ರಿಕೆಗಳು ಮತ್ತು ಸುದ್ದಿ ಚಾನಲ್‌ಗಳಲ್ಲಿ ದಿನನಿತ್ಯ ಪ್ರಸಾರವಾಗುತ್ತಿರುವ ಲಾಕ್‌ಡೌನ್‌ನಿಂದಾಗಿ ಜೀವನ ದುರ್ಬರಗೊಂಡವರ ಗೋಳು, ಕೊರೊನಾ ಕಾರಣ ದೇಶದ ಆರ್ಥಿಕ ಸ್ಥಿತಿಯ ವಿಚಾರಗಳು, ಕೊರೊನಾ ಸೋಂಕಿನ ಸುದ್ದಿಗಳು ಕಂಡ ಪುಟಾಣಿಯೊಬ್ಬ ತಾನು ಕೂಡಿಟ್ಟ ಹಣವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ (ಪಿಎಂ ಕೇರ್ಸ್‌ ಫಂಡ್‌ಗೆ) ಅರ್ಪಿಸಿದ್ದಾನೆ.

ತಾಲೂಕಿನ ಶೇಷಗಿರಿಹಳ್ಳಿಯಲ್ಲಿ ವಾಸವಿರುವ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲೋಹಿತ್ ಗೌಡ.ಎಸ್.ಎಂ ತನ್ನ ಪೋಷಕರು, ಸಂಬಂಧಿಕರು, ಹಿರಿಯರು ಹರಸಿ ನೀಡಿದ ಹಣವನ್ನು ಕೂಡಿಡುತ್ತಿದ್ದ. ಟ್ಯಾಬ್ (ಮೊಬೈಲ್‌ನಂತಹ ಅದಕ್ಕಿಂತ ದೊಡ್ಡ ಗಾತ್ರದ ಸಾಧನ) ಕೊಳ್ಳುವುದು ಆತನ ಇಚ್ಚೆಯಾಗಿತ್ತು. ಒಟ್ಟು 4050 ರೂ ಸಂಗ್ರಹವಾಗಿತ್ತು. ದಿನನಿತ್ಯ ಕೊರೋನಾ ಸೋಂಕಿತರ ಬವಣೆಯ ಸುದ್ದಿ ಕಂಡು ಮರಗುತ್ತಿದ್ದ. ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಉದಾರ ದೇಣಿಗೆ ನೀಡಿ ಎಂಬ ಸಂದೇಶಗಳು ಅವನ ಗಮನ ಸೆಳೆದಿವೆ.

ತನ್ನ ತಂದೆ ಮಂಜುನಾಥ್ ಮಂಚನಾಯ್ಕನಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಕರವಸೂಲಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಸೈನಿಕರಾಗಿ ತಮ್ಮ ಅನುಭವವನ್ನು  ತಮ್ಮ ಮಡದಿಯ ಬಳಿ ಹಂಚಿಕೊಳ್ಳುವುದನ್ನು ಆಲಿಸಿರುವ ಬಾಲಕನಿಗೆ ಸಹಾಯ ಮಾಡುವ ಆಸಕ್ತಿ ಚಿಗುರಿದೆ. ತನ್ನ ತಂದೆ ಮಂಜುನಾಥ್ ಮತ್ತು ತಾಯಿ ಮೀನಾ ಅವರ ಬಳಿ ತನ್ನ ಇಚ್ಚೆಯನ್ನು ಪ್ತಸ್ತಾಪಿಸಿದ್ದಾನೆ. ಅವರ ಮನವೂ ಮಿಡಿದಿದೆ. ತಕ್ಷಣ ಪೋಷಕರು ತಮ್ಮ ಪಾಲು 1 ಸಾವಿರ ರೂ ಸೇರಿಸಿ ಒಟ್ಟು 5050 ರೂಗಳನ್ನು  ಪಿ.ಎಂ.ಕೇರ್ಸ್‌ ಫಂಡ್‌ಗೆ (PM Cares Fund) ಗೂಗಲ್ ಪೇ ಮೂಲಕ ಕಳುಹಿಸಿದ್ದಾರೆ.

ಪುಟಾಣಿ ಲೋಹಿತ್ ಗೌಡ.ಎಸ್.ಎಂ ತತ್ವಾ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪಠ್ಯಕ್ಕೆ ಸಂಬಂಧಿಸಿದಂತೆ ಮತ್ತು ಮನರಂಜನೆಗಾಗಿ ಟ್ಯಾಬ್ ಕೊಳ್ಳಲು ಇಚ್ಚೆಯನ್ನು ಬದಲಿಸಿ ದೇಶಕ್ಕಾಗಿ ಅರ್ಪಿಸಿ ಮಾದರಿಯಾಗಿದ್ದಾನೆ.