ದಿಶಾ ಸಭೆ: ಬೆಂ-ಮೈ ದಶಪಥ ಹೆದ್ದಾರಿ ರಾದ್ದಾಂತ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎ.ಮಂಜುನಾಥ್‍

ರಾಮನಗರ: ಶುಕ್ರವಾರ ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್‍ ತೀರಾ ಆಕ್ರೋಶಗೊಂಡಿದ್ದರು.  ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಧ್ಯ ಬೆಂಗಳೂರು ರಾಮನಗರದ ನಡುವೆ ನಡೆಯುತ್ತಿರುವ ದಶಪಥ ಹೆದ್ದಾರಿ ಕಾಮಗಾರಿಯ ರಾದ್ದಾಂತಗಳನ್ನು ಪೋಟೋಗಳನ್ನು ಪ್ರದರ್ಶಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.  ಹೆದ್ದಾರಿ ಸರ್ವಿಸ್ ರಸ್ತೆಗಳು ಕಿರಿದಾಗಿವೆ, ಅಂಡರ್ ಪಾಸ್ ಗಳು ಅವೈಜ್ಞಾನಿಕವಾಗಿವೆ. ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿಲ್ಲ ಎಂದು ಶಾಸಕರು ಆರೋಪಿಸಿ ಅಂಡರ್ ಪಾಸ್ಗಳಲ್ಲಿನ  ಅವ್ಯವಸ್ಥೆಯ ಚಿತ್ರಗಳನ್ನು ಪ್ರದರ್ಶಿಸಿದರು.

ಮಾರುಕಟ್ಟೆ ದರ ಕೊಡಲಿಲ್ಲ ಏಕೆ?

ಹೆದ್ದಾರಿ ವಿಸ್ತರಣೆಗೆ ಭೂ ಸ್ವಾಧೀನವಾಗಿದೆ. ಕೆಲವು ಭೂ ಮಾಲೀಕರಿಗೆ ಮಾರುಕಟ್ಟೆ ದರ ಅನ್ವಯ ಪರಿಹಾರ ಸಿಗದಿರಲು ಯೋಜನಾ ನಿರ್ದೇಶಕರೇ ಅಡ್ಡಗಾಲು ಹಾಕುತ್ತಿದ್ದಾರೆಂದು ಶಾಸಕ ಮಂಜುನಾಥ್‍ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‍ ವಿರುದ್ದ ಆರೋಪಿಸಿದರು.

ದಶಪಥ ರಸ್ತೆ ವಿಸ್ತಿರಣೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ವೇಳೆ ಬಿಡದಿ ಗ್ರಾಮ ಪಂಚಾಯಿತಿ ಆಗಿತ್ತು. ಆನಂತರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿರುವ ಕಾರಣ ಮಾರುಕಟ್ಟೆ ದರ ಅನ್ವಯ ಹೆಚ್ಚಿನ ಪರಿಹಾರ ನೀಡಬೇಕಿತ್ತು. ಆದರೆ ಕೆಲವು ಭೂ ಮಾಲೀಕರಿಗೆ ಮಾತ್ರ ಈ ರೀತಿಯ ಪರಿಹಾರ ಸಿಕ್ಕಿದೆ. ಮುಗದ್ದ ಭೂ ಮಾಲೀಕರಿಗೆ ಈ ಯೋಗ ಇಲ್ಲ. ಇವರಿಗೆ ಮಾರುಕಟ್ಟೆ ದರ ಕೊಟ್ಟಿಲ್ಲ ಏಕೆ ಎಂದು ಪ್ರಶ್ನಿಸಿದರು.  ಯೋಜನಾ ನಿರ್ದೇಶಕರೇ ತಕರಾರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಮಾರುಕಟ್ಟೆ ದರದಲ್ಲಿ ಪರಿಹಾರ ಕೊಡದಿದ್ದರೆ ಕಾಮಗಾರಿ ನಡೆಸಲು ನಾನೇ ಬಿಡೋಲ್ಲ, ಅಧ್ಯಾರನ್ನು ಕರೆದುಕೊಂಡು ಬಂದು ಕಾಮಗಾರಿ ಮಾಡ್ತೀರೋ ನೋಡೋಣ ಎಂದು ಸವಾಲು ಎಸೆದರು.

ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾ ನಿರ್ದೇಶಕ ಶ್ರೀಧರ್, ಸ್ವಾಧೀನ ಪಡಿಸಿಕೊಂಡ ಭೂಮಿಗೆ 1ಕ್ಕೆ 3 ಪಟ್ಟು ಪರಿಹಾರ ನೀಡಬಹುದು. ಆದರೆ, ಬಡ್ಡಿ ಜತೆ ಭತ್ಯೆಯೂ ಸೇರಿ 1 ಕ್ಕೆ 4ಪಟ್ಟು  ಪರಿಹಾರ ಕೇಳುತ್ತಿದ್ದಾರೆ. ಆ ರೀತಿ ಪರಿಹಾರ ನೀಡಲು ಅವಕಾಶ ಇಲ್ಲ ಎಂದು ಉತ್ತರಿಸಿದರು.

ಅಧಿಕಾರಿಯ ಉತ್ತರದಿಂದ ಮತ್ತೆ ಕೋಪಗೊಂಡ ಶಾಸಕ ಮಂಜುನಾಥ್‍ ಭತ್ಯೆ ಅಂದರೇನು ಎಂದು ಏರುಧ್ವನಿಯಲ್ಲಿ  ಪ್ರಶ್ನಿಸಿದರು. ಈ ವೇಳೆ ಸಭೆಯ ಅಧ್ಯಕ್ಷತೆವಹಿಸಿದ್ದ ಸಂಸದ ಡಿ.ಕೆ.ಸುರೇಶ್‍ ಮಧ್ಯೆ ಪ್ರವೇಶಿಸಿ  ಭೂ ಪರಿಹಾರ ಮೊತ್ತದಲ್ಲಿ  ವ್ಯತ್ಯಾಸವಾದರೆ ಸರಿಪಡಿಸಿ ನೀಡಲು ಭೂ ಸ್ವಾಧೀನಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ. ಇದರನ್ವಯ ಪರಿಹಾರ ಕೊಟ್ಟು ಸಮಸ್ಯೆ ಸರಿಪಡಿಸಿ ಎಂದು ಸಲಹೆ ಕೊಟ್ಟರು.

ಡಿ.ಕೆ.ಸುರೇಶ್‍ ಅಸಮಾಧಾನ

ಹೆದ್ದಾರಿ ಅಂಡರ್‍ ಪಾಸ್‍ಗಳ ಅವಾಂತರವನ್ನು ಕಂಡ ಸಂಸದರು. ಅಂಡರ್  ಪಾಸ್ ಗಳ ಬಳಿ ಲೆವಲ್ ಏಕೆ ಮೈಂಟೇನ್ ಮಾಡಿಲ್ಲ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಏಕೆ ಮಾಡಿಲ್ಲವೆಂದು ಪ್ರಶ್ನಿಸಿದರು. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉತ್ತರ ನೀಡಲು ತಡವರಿಸಿದರು.

ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಈ ಭಾಗದಲ್ಲಿ ಭೂ ಸ್ವಾಧೀನಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡಿರುವುದಾಗಿ, ಆದರೆ ಮಂಡ್ಯ ಮತ್ತು ಮೈಸೂರು ಸಂಸದರು ಒಂದಿಂಚು ಭೂಮಿ ಕೊಡಿಸಲಿಲ್ಲ ಎಂದು ಪರೋಕ್ಷವಾಗಿ ಸಂಸದರುಗಳಾದ ಸುಮಲತಾ ಮತ್ತು ಪ್ರತಾಪ್‍ ಸಿಂಹ ವಿರುದ್ದ ಟೀಕಾ ಪ್ರಹಾರ ನಡೆಸಿದರು.

ಭೂ ವ್ಯಾಜ್ಯ ಪರಿಹಾರ, ಸರ್ವಿಸ್  ರಸ್ತೆ ಹಾಗೂ ಅಂಡರ್ ಪಾಸ್ ಸಮಸ್ಯೆ ಬಗೆಹರಿಸಲು ಸಭೆ ನಿಗದಿ ಮಾಡುವಂತೆ ಯೋಜನಾ ನಿರ್ದೇಶಕರಿಗೆ ಸಂಸದರು ಸೂಚಿಸಿದರು. ಯೋಜನ ನಿದೇರ್ಶಕರು ಸಭೆ ಕರೆದರೆ ತಾವು ಭಾಗವಹಿಸುವುದಿಲ್ಲ.  ಭೂ ಮಾಲೀಕರಿಗೆ ಮಾರುಕಟ್ಟೆ ದರ ಅನ್ವಯ ಪರಿಹಾರ ಹಾಗೂ ಅಂಡರ್ ಪಾಸ್ ಗಳ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ದಶಪಥ ರಸ್ತೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ಮಂಜುನಾಥ್ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ಅಪರ ಜಿಲ್ಲಾಧಿಕಾರಿ ಜವರೇಗೌಡ ಉಪಸ್ಥಿತರಿದ್ದರು.