ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆ ಸನ್ನಹಿತ,  ರೋಟರಿ ಅಭಿಯಾನ ಸಾರ್ಥಕವಾಗಲಿದೆ – ಡಾ.ಸಮೀರ್ ಹರಿಯಾನಿ

ರಾಮನಗರ: ವಿಶ್ವದಲ್ಲಿ ಪೋಲಿಯೋ ರೋಗ ನಿರ್ಮೂಲನೆಗೆ  ರೋಟರಿ ಸಂಸ್ಥೆ ನಡೆಸಿದ ಅಭಿಯಾನ ಬಹುತೇಕ ಫಲ ಕೊಟ್ಟಿದೆ. ವಿಶ್ವದಲ್ಲಿ ಕೇವಲ 2 ರಾಷ್ಟ್ರಗಳಲ್ಲಿ ಈ ವರ್ಷ ಬೆರಳೆಣಿಕೆಯಷ್ಟು ಪ್ರಕರಣಗಳು ಕಂಡು ಬಂದಿವೆ ಎಂದು ರೋಟರಿ ಜಿಲ್ಲೆ 3190ರ ಮಾಜಿ ಜಿಲ್ಲಾ ಪಾಲಕ ಡಾ.ಸಮೀರ್ ಹರಿಯಾನಿ ತಿಳಿಸಿದರು.

ನಗರದ ಎಸ್.ಎಲ್.ಎನ್ ಕನ್ವೆಷನ್ ಹಾಲ್‌ನಲ್ಲಿ ರೋಟರಿ ರಾಮನಗರದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು. ಕಳೆದ ಜನವರಿಯಿಂದ ಇಲ್ಲಿಯವರೆಗೆ ವಿಶ್ವದ 2 ರಾಷ್ಟ್ರಗಳಲ್ಲಿ ಕೇವಲ 4 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇನ್ನು ಕೆಲವೇ ವರ್ಷಗಳಲ್ಲಿ ಪೋಲೀಯೋ ರೋಗ ಸಂಪೂರ್ಣ ನಿರ್ಮೂಲನೆಯಾಗುವ ವಿಶ್ವಾಸವಿದೆ ಎಂದರು. ಸಂಪೂರ್ಣ ನಿರ್ಮೂಲನೆ ಸಾಧನೆಯಾಗಬೇಕಾದರೆ ಇನ್ನು ಕೆಲವು ವರ್ಷಗಳು  ಪಲ್ಸ್ ಪೋಲೀಯೋ ಲಸಿಕೆ ಮುಂದುವರೆಸಬೇಕಾಗಿದೆ, ಹೀಗಾಗಿ ರೋಟರಿ ಸದಸ್ಯರು  ತಮ್ಮ ಕೈಲಾದ ಮಟ್ಟಿಗೆ ಲಸಿಕಾ ಅಭಿಯಾನಕ್ಕೆ ಆರ್ಥಿಕವಾಗಿ ಸ್ಪಂದಿಸಬೇಕು. ಪೋಲೀಯೋ ರೋಗ ನಿರ್ಮೂಲನೆ ರೋಟರಿ ಸಂಸ್ಥೆಯ ಯಶಸ್ಸಿಗೆ ಜನರ ಸಹಕಾರವೂ ಬೇಕಾಗಿದೆ ಎಂದು ಕರೆ ಕೊಟ್ಟರು.

ವಿಶ್ವದಲ್ಲಿ  ಸೇವಾ ಸಂಸ್ಥೆಗಳ ಪೈಕಿ ರೋಟರಿ ಅಗ್ರ ಶ್ರೇಣಿಯಲ್ಲಿದೆ. ಭಾರತದ ಶೇಖರ್ ಮೆಹತ 2021-22ನೇ ಸಾಲಿನಲ್ಲಿ ಅಂತರರಾಷ್ಟ್ರೀಯ ರೋಟರಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು ಭಾರತದ ಹೆಮ್ಮೆ ಎಂದರು. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ 2022-23ನೇ ಸಾಲಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿದ್ದಾರೆ. ರೋಟರಿ ಇತಿಹಾಸದಲ್ಲೇ ಮಹಿಳೆಯೊಬ್ಬರು ಅಧ್ಯಕ್ಷರಾಗುತ್ತಿರುವುದು ಇದೇ ಮೊದಲು. ರೋಟರಿ ತಕ್ಕೆಗೆ ಹೆಚ್ಚು ಮಹಿಳೆಯರನ್ನು ಕರೆ ತಂದು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿ ಎಂದು ಡಾ.ಸಮೀರ್ ಹರಿಯಾನಿ  ನೂತನ ಪದಾಧಿಕಾರಿಗಳಿಗೆ ಸಲಹೆ ಕೊಟ್ಟರು. ರೋಟರಿ ಸಂಸ್ಥೆಯು ಪ್ರಸಕ್ತ ಸಾಲಿಗೆ  ರೋಟರಿ ಕಲ್ಪನೆ ( ಇಮಾಜಿನ್ ರೋಟರಿ) ಎಂಬ ಶೀರ್ಷಿಕೆ ಕೊಟ್ಟಿದೆ. ಈ ಶೀರ್ಷಿಕೆಯಂತೆ ಸಮಾಜದಲ್ಲಿ ಬದಲಾವಣೆ ತರಲು ರೋಟರಿ ಸದಸ್ಯರಲ್ಲಿ ಹೊಸ ಕಲ್ಪನೆಗಳು ಮೊಳೆಯಲಿ ಎಂದು ಆಶಿಸಿದರು.

ಉಮೇಶ್ ನೂತನ ಅಧ್ಯಕ್ಷ

ರೋಟರಿ ರಾಮನಗರದ ನೂತನ ಅಧ್ಯಕ್ಷರಾಗಿ ಪಿ.ಉಮೇಶ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಬಾಬು ಆಯ್ಕೆಯಾಗಿದ್ದು, ಅಧಿಕಾರ ಸ್ವೀಕರಿಸಿದರು.  ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಪಿ.ಉಮೇಶ್ ರೋಟರಿ ಹಿರಿಮೆಯನ್ನು ಮುಂದುವರೆಸುವುದಾಗಿ ತಿಳಿಸಿದರು.

ಇದೇ ವೇಳೆ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಎಕ್ಸಾಂ ಪ್ಯಾಡ್ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ  ವಲಯ ಪಾಲಕ ಎಲ್.ಸಿದ್ದಪ್ಪಾಜಿ, ರೋಟರಿ ನಿಲ್ಲೆ 3190ರ ಉಪ ಪಾಲಕ ಭರತ್.ಎಂ., ನಿರ್ಗಮಿತ ಅಧ್ಯಕ್ಷ ಡಿ.ಕೆ.ಪುಟ್ಟಸ್ವಾಮಿ ಗೌಡ, ಕಾರ್ಯದರ್ಶಿ ಶಿವಣ್ಣ , ಪ್ರಮುಖರಾದ ಕೆ.ಎಸ್.ಕೃಷ್ಣ, ಅಲ್ತಾಫ್‍ ಅಹಮದ್, ಮುಂತಾದವರು ಉಪಸ್ಥಿತರಿದ್ದರು.

……………….