ಇಸ್ಲಾಂ ಧರ್ಮ ಹುಟ್ಟಿದ್ದು ಭಾರತದಲ್ಲಿ – ಮಾಜಿ ಸಚಿವ ಪಿ.ಜಿ.ಆರ್‍.ಸಿಂಧ್ಯಾ

* ಸರ್ವೇಜನ ಸುಖಿನೋಭವಂತು ಆಶಿರ್ವಾದ ಮುಸ್ಲೀಮರು, ಕ್ರೈಸ್ತರಿಗೆ ಅನ್ವಯಿಸುವುದಿಲ್ಲವೇ?

* ನವ ಚಿಂತನ ಶಿಬಿರದಲ್ಲಿ ಕಾಂಗ್ರೆಸ್‍ ನಾಯಕರ ವಾಗ್ದಾಳಿ

ರಾಮನಗರ:  ಇಸ್ಲಾಂ ಧರ್ಮ ಹುಟ್ಟಿದ್ದು ಭಾರತದಲ್ಲಿ. ಈ ಧರ್ಮವನ್ನು ವಿರೋಧಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಪಿ.ಜಿ.ಆರ್‍.ಸಿಂಧ್ಯಾ ಅಭಿಪ್ರಾಯಪಟ್ಟರು.

ತಾಲೂಕಿನ ಬಿಡದಿ ಬಳಿಯ ಮ್ಯಾಗ್ನೋಲಿಯಾ ರೆಸಾರ್ಟ್‍ನಲ್ಲಿ ಜಿಲ್ಲಾ ಕಾಂಗ್ರೆಸ್‍ ಸಮತಿ ಹಮ್ಮಿಕೊಂಡಿದ್ದ ನವ ಚಿಂತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರೋಕ್ಷವಾಗಿ ಬಿಜೆಪಿ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ ಅವರು ಕೆಲ ರಾಜಕೀಯ ಪಕ್ಷಗಳು ಇಸ್ಲಾಂ ಧರ್ಮ ಆಚರಣೆ ಮಾಡುವ ಜನರನ್ನು ವಿರೋಧಿಸುವುದನ್ನೇ ಅಜೆಂಡಾ ಮಾಡಿಕೊಂಡಿವೆ. ಅಷ್ಟಕ್ಕೂ ಅಖಂಡ ಭಾರತ ಹೇಗಿತ್ತು ಹಾಗೂ ಇಸ್ಲಾಂ ಧರ್ಮ ಎಲ್ಲಿತ್ತು ಎಂಬುದನ್ನು ಆಲೋಚನೆ ಮಾಡಬೇಕು. ಇಸ್ಲಾಂ ಭರತ ಖಂಡದಲ್ಲಿ ಜನಿಸಿದ ಧರ್ಮ. ಅದನ್ನು ದ್ವೇಷ ಮಾಡುವ ಅವಶ್ಯಕತೆ ಇಲ್ಲ ಎಂದರು.

ಆ ಪಕ್ಷದ ನಾಯಕರು ಸರ್ವೇ ಜನ ಸುಖಿನೋಭವಂತು ಎಂದು ಹೇಳುತ್ತಾರೆ. ಅದರಲ್ಲಿ  ಮುಸ್ಲಿಮರು, ಕ್ರೈಸ್ತರು, ಹಿಂದುಳಿದ ವರ್ಗದವರು ಬರುವುದಿಲ್ಲವೇ ಎಂಬ ಪ್ರಶ್ನಿಸಿದರು. ದೇಶದ ಅಖಂಡತೆ, ಸಮಗ್ರತೆಯನ್ನು ಉಳಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಭಾರತ ದೇಶವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‍ ಅನಿರ್ವಾಯ

ಇಂದು ಭಾರತ ಸೇರಿದಂತೆ ವಿಶ್ವದ ಕೆಲವು ರಾಷ್ಟ್ರಗಳು ಸಂಕಷ್ಟ ಎದುರಿಸುತ್ತಿವೆ. ಶ್ರೀಲಂಕಾ ಆರ್ಥಿಕ ದಿವಾಳಿಗೆ ಬಂದಿದೆ. ಇನ್ನೆರೆಡು ದೇಶಗಳು ಆರ್ಥಿಕ ದಿವಾಳಿ ಅಂಚಿಗೆ ತಲುಪಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ದೇಶವನ್ನು ಯಾರು,  ಹೇಗೆ ಮುನ್ನಡೆಸಬೇಕು ಎಂಬ ಪ್ರಶ್ನೆ ಕಾಡುತ್ತಿದೆ. ಬಿಜೆಪಿ ಜನರು ಇಟ್ಟಿದ್ದ ವಿಶ್ವಾಸ ಕಳೆದುಕೊಂಡಿದೆ. ದೇಶವನ್ನು ಉಳಿಸುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಇಂದು ಅನಿವಾರ್ಯವಾಗಿದೆ ಎಂದರು.

ಮೋದಿ ಸಾಧನೆ ಶೂನ್ಯ – ರಾಮಲಿಂಗಾ ರೆಡ್ಡಿ

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ 8 ವರ್ಷದ ಆಡಳಿತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಸಾಧನೆ ಶೂನ್ಯ ಎಂದು ಟೀಕಾ ಪ್ರಹಾರ ನಡೆಸಿದರು. ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿ ನಿಸ್ಸೀಮರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳನ್ನೇ ಹೇಳಿಕೊಂಡು 8 ವರ್ಷ ಆಡಳಿತ ನಡೆಸಿಬಿಟ್ಟಿದ್ದಾರೆ ಎಂದು ದೂರಿದರು. ಬಿಜೆಪಿಯ ಕಟ್ಟ ಕಡೆಯ ಕಾರ್ಯಕರ್ತನೂ ಸುಳ್ಳನ್ನೇ ಹೇಳುತ್ತಿದ್ಧಾರೆ. ಸುಳ್ಳು ಹೇಳುವುದರಲ್ಲಿ ಇವರು ನಿಪುಣರು ಎಂದು ಜರಿದರು.

ಬಿಡದಿಯಲ್ಲಿದೆ ಸುಳ್ಳಿನ ಫ್ಯಾಕ್ಟರಿ – ಸಂಸದ ಡಿ.ಕೆ.ಸುರೇಶ್‍

ಶಿಬಿರದ ಅಧ್ಯಕತೆಯನ್ನುವಹಿಸಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್‍ ಬಿಡದಿಯಲ್ಲಿ ಸುಳ್ಳಿನ ಫ್ಯಾಕ್ಟರಿ ಇದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರನ್ನು ಕುಟುಕಿದರು. ಸುಳ್ಳಿನ ಜೊತೆಗೆ ಈ ಫ್ಯಾಕ್ಟರಿ (ಎಚ್.ಡಿ.ಕೆ) ಕಣ್ಣೀರನ್ನು ಸುರಿಸುತ್ತದೆ ಎಂದು ಲೇವಡಿ ಮಾಡಿದರು.

ಇತ್ತಿಚೆಗೆ ಉದಯ್‌ಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ರಾಹುಲ್ ಗಾಂಧಿಯವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ್ ಜೋಡೋ ಎಂದು ಅಭಿಯಾನ ಕೈಗೊಂಡು ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ. ಸುಮಾರು 8 ತಿಂಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ಅವರು 3800 ಕಿಮೀ ಪಾದಯಾತ್ರೆ ನಡೆಸಲಿದ್ದಾರೆ. ಅಭಿಯಾನದ ವೇಳೆ ಜನರಿಗೆ ಉತ್ತಮ ಆಡಳಿತ ನೀಡುವ ಭರವಸೆ ಕಾಂಗ್ರೆಸ್ ನೀಡಲಿದೆ ಎಂದರು.

ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಕೆ.ರಾಜು, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ, ಬಿಡದಿ ಪುರಸಭೆ ಸದಸ್ಯ ಸಿ.ಉಮೇಶ್, ರಾಮನಗರ ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್ , ರಾಮನಗರ ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ,  ಎಂಇಎಲ್‍ ಮಾಜಿ ಅಧ್ಯಕ್ಷ ಹಾಲಿ ನಗರಸಭಾ ಸದಸ್ಯ ಕೆ.ಶೇಷಾದ್ರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ನಿಜಾಮುದ್ದೀನ್  ಷರೀಫ್ ,   ಮುಖಂಡರಾದ ಪ್ರಸನ್ನ ಪಿ.ಗೌಡ, ಎ.ಬಿ. ಚೇತನ್ ಕುಮಾರ್, ವಿಜಯ್  ದೇವ್, ಕೃಷ್ಣಮೂರ್ತಿ ಮುಂತಾದವರು ಹಾಜರಿದ್ದರು.