ಜನ ಸಾಮಾನ್ಯರಿಗೆ ನಿರುಪಯುಕ್ತ ಬಜೆಟ್ – ಇಕ್ಬಾಲ್ ಹುಸೇನ್

ರಾಮನಗರ: 17/2/2023: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡನೆ ಮಾಡಿರುವ ಬಜೆಟ್‌ನಲ್ಲಿ ಯಾವುದೇ ದೂರ ದೃಷ್ಟಿಯಿಲ್ಲ. ಇದು ಕೇವಲ ಚುನಾವಣೆ ಸಂದರ್ಭದಲ್ಲಿ ಜನರ ಮನಸ್ಸನ್ನು ಸೆಳೆಯಲು ಮಾಡಿರುವ ವ್ಯರ್ಥ ಪ್ರಯತ್ನವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಟೀಕಿಸಿದರು.
ತಾಲೂಕಿನ ಬೂರಗಮರ ದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸದ್ದ ಸ್ವಾತಂತ್ರ್ಯೋತ್ಸವ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಮೂರೂವರೆ ವರ್ಷಗಳಿಂದ ಯಾವುದೇ ಜನಪರ ಕಾರ್ಯಕ್ರಮಗಳನ್ನು ಮಾಡದ ಬಿಜೆಪಿ ಸರ್ಕಾರ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗ ರಾಜ್ಯದ ಜನರನ್ನು ಸೆಳೆಯಲು ಇಲ್ಲ ಸಲ್ಲದ ಭರವಸೆಗಳನ್ನು ನೀಡಲು ಪ್ರಯತ್ನಿಸಿದ್ದು, ಯಾವುದೇ ಹೊಸ ಯೋಜನೆಗಳು ಬಜೆಟ್ ನಲ್ಲಿ ಸೃಷ್ಟಿಯಾಗಿಲ್ಲ. ಅಲ್ಲದೆ ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಧ್ಯೆಯೋದ್ದೇಶಗಳನ್ನು ಹೊಂದಿಲ್ಲ ಎಂದು ಕಿಡಿ ಕಾರಿದರು.
ರೈತರಿಗೆ ಈಗಾಗಲೇ ಮೂರು ಲಕ್ಷ ರೂಗಳನ್ನು ಬಡ್ಡಿರಹಿತ ಸಾಲವಾಗಿ ನೀಡಲಾಗುತ್ತಿದೆ. ಇದನ್ನು ೫ ಲಕ್ಷ ರೂಗಳಿಗೆ ಹೆಚ್ಚಿಸಿ ದೊಡ್ಡದಾಗಿ ಬಿಂಬಿಸಿಕೊಳ್ಳಲು ಹೊರಟಿದೆ. ದೂರದೃಷ್ಟಿಯಿಲ್ಲದೇ ಮಂಡಿಸಿರುವ ಬಡ್ಜೆಟ್ ಇದಾಗಿದ್ದು, ಇದೊಂದು ಜನ ವಿರೋಧಿ ಬಡ್ಜೆಟ್ ಎಂದು ದೂರಿದರು.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ವಾತಂತ್ರ್ಯೋತ್ಸವ ನಡಿಗೆ ಕಾರ್ಯಕ್ರಮದಲ್ಲಿ ೬೪ ಸಾವಿರ ಕುಟುಂಬಗಳ ಮನೆ ಬಾಗಿಲಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈಗಾಗಲೇ ಭೇಟಿ ನೀಡಿದ್ದಾರೆ. ೨ನೇ ಹಂತದಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಮುಂದಿನ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದು, ಜನರು ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ರಾಜು ಮಾತನಾಡಿ, ಅಧಿಕಾರ ಇದ್ದಾಗ ಯಾವುದೇ ರೀತಿಯ ಜನಪರ ಕೆಲಸಗಳನ್ನು ಮಾಡದ ಬಿಜೆಪಿ ಸರ್ಕಾರ ಇದೀಗ ಜನರನ್ನು ಭಾವನೆಗಳ ಮೂಲಕ ತನ್ನತ್ತ ಸೆಳೆಯಲು ಹೊರಟಿದೆ ಇದು ಯಾವುದೇ ಕಾರಣಕ್ಕೂ ಪರಿಣಾಮ ಬೀರುವುದಿಲ್ಲ. ಜನರು ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದು ಬದಲಾವಣೆಗೆ ಕಾಯುತ್ತಿದ್ದಾರೆ ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ರಾಮನಗರ ಚನ್ನಪಟ್ಟಣ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೊಡ್ಡವೀರಯ್ಯ, ಸುಗ್ಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಹೆಚ್.ಬಿ. ಶಿವಪ್ಪ, ಹರೀಸಂದ್ರ ಗ್ರಾಮ ಪಂಚಾಯ್ತಿ ಸದಸ್ಯ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಬೂರಗಮರದೊಡ್ಡಿ ಜಯರಾಮು, ಕೆ.ರವಿ, ಲಕ್ಕಸಂದ್ರ ಗುಂಡಣ್ಣ, ಶೇಖರ್, ಪಾದ್ರಳ್ಳಿ ಮಹದೇವ್, ಸಲೀಂ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.