ರಾಮನಗರ ಯೂಟ್ಯೂಬ್‍ ಪ್ರತಿಭೆ ಹಂಸಿಕಾ ವಿಜೇತ

ರಾಮನಗರ: ಹಂಸಿಕಾ ವಿಜೇತ.ಪಿ. ಈಕೆ ಇಲ್ಲಿನ ಪವಿತ್ರ ರಾಷ್ಟ್ರೀಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ. ಯೂ-ಟ್ಯೂಬ್‌ನಲ್ಲಿ ಈಕೆಗೆ 900ಕ್ಕೂ ಹೆಚ್ಚು ಮಂದಿ ಸಬ್‌ಸ್ಕ್ರೈಬರ್ಸ್‍ ಇದ್ದಾರೆ. ಸಿಲ್ಕ್ ಮತ್ತು ಮಿಲ್ಕ್ ಜಿಲ್ಲೆಯ ಈ ಬಾಲಕಿಯ ವಾಗ್ಜರಿಗೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಭಾರತದ ಧಾರ್ಮಿಕ ಹಬ್ಬಗಳು, ಭಾರತದ ಸ್ವಾತಂತ್ರೃ, ಸ್ವಾಮಿ ವಿವೇಕಾನಂದರು, ಡಾ.ಬಿ.ಆರ್.ಅಂಬೇಡ್ಕರ್ ಹೀಗೆ ಹಲವಾರು ವಿಷಯಗಳಲ್ಲಿ  ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿ ಯೂಟ್ಯೂಬ್‌ನಲ್ಲಿ  ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾಳೆ.

ವಿವೇಕಾನಂದರ ಧಾರ್ಮಿಕ ಸಮ್ಮೇಳನದ ಭಾಷಣಗಳು ಕನ್ನಡದಲ್ಲಿ

1893ರಲ್ಲಿ ಚಿಕಾಗೋದಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ  ಹಿಂದೂ ಧರ್ಮದ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರು ಭಾಗಿಯಾಗಿದ್ದರು. ಧಾರ್ಮಿಕ ಸಮ್ಮೇಳನದಲ್ಲಿ ನಡೆದ 6 ಅಧಿವೇಶನಗಳಲ್ಲೂ ಭಾಷಣಗಳನ್ನು ಮಾಡಿದ್ದರು. ಯೂಟ್ಯೂಬ್‌ನಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿ ಯಾರು ಹೇಳಿರಲಿಲ್ಲ. ಹಂಸಿಕಾ ತನ್ನದೇ ಪದಗಳಲ್ಲಿ ಈ ಭಾಷಣಗಳನ್ನು  ಪ್ರಸ್ತುತಪಡಿಸಿದ್ದಾಳೆ. ಕಾಕತಾಳಿಯವೆಂಬಂತೆ ಈಕೆಯ ಈ  ಪ್ರಯತ್ನದ ನಂತರ ಕನ್ನಡದ ಕೆಲವು ಪ್ರಸಿದ್ದರು ಸಹ ಯೂಟ್ಯೂಬ್‌ನಲ್ಲಿ ಸ್ವಾಮಿ ವಿವೇಕಾನಂದರ  ಧಾರ್ಮಿಕ ಸಮ್ಮೇಳನದ ಭಾಷಣಗಳ ಬಗ್ಗೆ ಮಾತನಾಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಜೀವನದ ಬಗ್ಗೆ  ಹಂಸಿಕಾಳ ವೀಡಿಯೋವನ್ನು 45 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳಿವೆ. 2300ಕ್ಕೂ ಹೆಚ್ಚು ಮಂದಿ ’ಲೈಕ್’ ಮಾಡಿದ್ದಾರೆ.

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀ ಸ್ವಾಮಿ ಮುಕ್ತಿದಾನಂದ ಅವರು ಹಂಸಿಕಾಳನ್ನು ಪ್ರಶಂಶಿಸಿದ್ದಾರೆ.

ತೀರಾ ಇತ್ತೀಚೆಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀ ಸ್ವಾಮಿ ಮುಕ್ತಿದಾನಂದ ಅವರು ಹಂಸಿಕಾಳನ್ನು ಪ್ರಶಂಶಿಸಿ ಆಶೀರ್ವದಿಸಿ ಪ್ರೋತ್ಸಾಹಿಸಿದ್ದಾರೆ.

2ನೇ ತರಗತಿಯಿಂದಲೇ ಭಾಷಣೆ ಕಲೆ

ನಗರದ ಪವಿತ್ರ ರಾಷ್ಟ್ರೀಯ ವಿದ್ಯಾಲಯದ ಕಾರ್ಯದರ್ಶಿ ಪ್ರದೀಪ್ ಮತ್ತು ಸವಿತಾ ದಂಪತಿಗಳ ಪುತ್ರಿ ಹಂಸಿಕಾ ವಿಜೇತ. ತಾಯಿ ಸವಿತಾರಿಗೆ ವಿವೇಕಾನಂದರ ಬಗ್ಗೆ  ಅಭಿಮಾನ ಹೆಚ್ಚು. ಆಗಾಗ್ಗೆ ವಿವೇಕಾನಂದರ ಬಗ್ಗೆ ಮಗಳಿಗೆ ಹೇಳುತ್ತಿದ್ದರು. ಪುಟಾಣಿ ಹಂಸಿಕಾ ಕೂಡ ಪ್ರಭಾವಿತಳಾಗಿದ್ದಳು. ಹಂಸಿಕಾ 2ನೇ ತರಗತಿಯಲ್ಲಿದ್ದಾಗ, ಶಾಲೆಯಲ್ಲಿ ನಡೆದ ವಿವೇಕಾನಂದರ ಜಯಂತಿಯಂದು ಮಾತನಾಡಲು ಬಯಸಿದಳು, ಅವಕಾಶವೂ ದೊರೆಯಿತು. ಆದರೆ ಪುಟ್ಟ ಹಂಸಿಕಾಳ ನಿರರ್ಗಳ ಮಾತುಗಳಿಗೆ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕ ವೃಂದದಿಂದ ಮೆಚ್ಚುಗೆ ಪಡೆಯಿತು. ಅಂದಿನಿಂದ ಹಂಸಿಕಾ ವಿವಿಧ ವಿಷಯಗಳಲ್ಲಿ ಮಾತನಾಡಲು ಆರಂಭಿಸಿದ್ದಾಳೆ. ತನ್ನ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಸ್ವಯಂ ಅಧ್ಯಯನ ಮಾಡುವುದು ಈಕೆಯ ವಿಶೇಷ, ಪುಸ್ತಕ, ನಿಯತಕಾಲಿಕೆಗಳು, ದಿನ ಪತ್ರಿಕೆಗಳು, ಇಂಟರ್‌ನೆಟ್‌ನಲ್ಲಿ ಮಾಹಿತಿಗಳನ್ನು ಕಲೆ ಹಾಕಿ ತನ್ನ ಅಭಿಪ್ರಾಯಗಳನ್ನು ಬರವಣಿಗೆಯಲ್ಲಿ ಮೂಡಿಸುತ್ತಾಳೆ. ತಾಯಿಯವರ ಮಾರ್ಗದರ್ಶನ ಸದಾ ಸಿಗುತ್ತಿದೆ. ಇಲ್ಲಿಯವರೆಗೆ ಯೂಟ್ಯೂಬ್‌ನಲ್ಲಿ 43 ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾಳೆ.

ನಗರದಲ್ಲಿ  ನಡೆದ ವಿವೇಕಾನಂದರ ಜಯಂತಿ ಕಾರ್ಯಕ್ರಮಗಳ ವೇದಿಕೆಗಳಲ್ಲಿಯೂ ಮಾತನಾಡಿದ್ದಾಳೆ, ಪ್ರೇಕ್ಷಕರು ಸಹ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ. ಪಾಲಕರ, ಶಿಕ್ಷಕರ ತರಬೇತಿ, ಸ್ವಯಂ ಪ್ರಯತ್ನಗಳಿಂದ ಈ ಪ್ರತಿಭೆ ಅರಳುತ್ತಿದೆ.