ರಾಮನಗರ ಜಿಲ್ಲೆಯಲ್ಲಿ 81ಕ್ಕೇರಿದ ಕೋವಿಡ್‍ 19 ಸೋಂಕಿತರ ಸಂಖ್ಯೆ

ರಾಮನಗರ, ಜೂನ್‍ 19: ಜಿಲ್ಲೆಯಲ್ಲಿ ಶುಕ್ರವಾರ 35 ಮಂದಿಯಲ್ಲಿ ಕೋವಿಡ್ 19 ಸೋಂಕು ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ 81ಕ್ಕೇರಿದೆ.

ಶುಕ್ರವಾರ ಜಿಲ್ಲಾಡಳಿತ ನೀಡಿದ ಫಲಿತಾಂಶದ ವಿವರದಲ್ಲಿ ಕನಕಪುರದಲ್ಲಿ 25, ಮಾಗಡಿಯಲ್ಲಿ 4, ರಾಮನಗರದಲ್ಲಿ 4 ಮತ್ತು ಚನ್ನಪಟ್ಟಣದಲ್ಲಿ 2 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ರಾಮನಗರ ತಾಲೂಕಿನ ಬಿಡದಿಯಲ್ಲಿ 50 ಮತ್ತು 30 ವರ್ಷದ ಇಬ್ಬರು ಪುರುಷರು, ಬೈರಮಂಗಲದಲ್ಲಿ 36 ವರ್ಷದ ಪುರುಷ ಮತ್ತು ನಗರಸಭೆ ವ್ಯಾಪ್ತಿಯ ಮೆಹಬೂಬನಗರದ 21 ವರ್ಷದ ಮಹಿಳೆಯಲ್ಲಿ ಸೋಂಕು ತಗುಲಿದೆ.

ಚನ್ನಪಟ್ಟಣ ನಗರ ಪ್ರದೇಶದಲ್ಲಿ ಒಬ್ಬ ಮಹಿಳೆ ಮತ್ತು  ಬೈರಾಪಟ್ಟಣದಲ್ಲಿ ಪುರುಷರೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಮಾಗಡಿಯ ತಿರುಮಲೆಯಲ್ಲಿ 54 ವರ್ಷದ ಪುರುಷ, 19 ವರ್ಷದ ಯುವಕ, 50 ವರ್ಷದ ಮಹಿಳೆ ಮತ್ತು ಪಟ್ಟಣದ 31 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.

ಕನಕಪುರದಲ್ಲಿ ಖಾಸಗಿ ಆಸ್ಪತ್ರೆಯ ಸೋಂಕಿತ ವೈದರಿಂದ ಮತ್ತು ಇತ್ತೀಚೆಗೆ ಮೃತ ಪಟ್ಟ ಸೋಂಕಿತ ವ್ಯಕ್ತಿಯ ಕುಟಂಬದ ಕೆಲವು ಸದಸ್ಯರು ಒಟ್ಟು 25ಮಂದಿಗೆ ಸೋಂಕು ತಗುಲಿದೆ.

ಈ ಮಧ್ಯೆ ಸೋಂಕಿತರಾದ ಪಿ.3313, ಪಿ.6135 ಮತು ಪಿ-6136, ಇವರುಗಳಲ್ಲಿ ಸೋಂಕು ಗುಣಮುಖರಾಗಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 6 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಸಾವನಪ್ಪಿದ್ದಾರೆ.