ಸರ್ಕಾರಿ ಶಾಲೆಗೆ ರಾಮನಗರ ವಾಸವಿ ಕ್ಲಬ್‌ವತಿಯಿಂದ ಪ್ರೊಜೆಕ್ಟರ್‌ ಕೊಡುಗೆ

ವರದಿ: ಎಸ್ಪಿ

ರಾಮನಗರ: ಹಲವಾರು ಅರ್ಥಪೂರ್ಣ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ವಾಸವಿ ಇಂಟರ್‌ನ್ಯಾಷನಲ್‌ಕ್ಲಬ್‌ನ ರಾಮನಗರ ಶಾಖೆ ಇತ್ತೀಚೆಗೆ ಇಲ್ಲಿನ ಬಳೇಪೇಟೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರೊಜೆಕ್ಟರ್‌ಕೊಡುಗೆ ನೀಡಿ ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ

ಪಠ್ಯಪುಸ್ತಕಗಳ ಜೊತೆಗೆ ಧ್ವನಿ ಮತ್ತು ದೃಶ್ಯ ಮಾಧ್ಯಮಗಳು ಕಲಿಕೆಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಬಳೆಪೇಟೆ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿಗಳಿವೆ. ಸರ್ಕಾರದಿಂದ ಹಲವಾರು ಸವಲತ್ತುಗಳು ಈ ಶಾಲೆಗೆ ಲಭ್ಯವಾಗಿದೆಯಾದರೂ ಇನ್ನು ಕೊರತೆಗಳಿವೆ. ಇದನ್ನರಿತ ಇಲ್ಲಿನ ವಾಸವಿ ಕ್ಲಬ್‌ಪದಾಧಿಕಾರಿಗಳು ಮತ್ತು ಸದಸ್ಯರು ದಾನಿಗಳ ನೆರವಿನಿಂದ ಸುಮಾರು 20 ಸಾವಿರ ರು ಮೌಲ್ಯದ ಪ್ರೊಜೆಕ್ಟರ್‌ಕೊಡುಗೆ ನೀಡಿದ್ದಾರೆ. ಮೊಬೈಲ್‌ ಬ್ಲೂಟೂತ್‌ ಸಹಾಯದಿಂದ ಶಿಕ್ಷಕರು ಪ್ರೊಜೆಕ್ಟರ್‌ ಮೂಲಕ ಪಠ್ಯಕ್ಕೆ ಪೂರಕವಾದ ದೃಶ್ಯಗಳು, ವೀಡಿಯೋಗಳನ್ನು ಪ್ರದರ್ಶಿಸಲು ಈಗ ಅನುಕೂಲವಾಗಿದೆ.

ರಾಮನಗರದ ವಾಸವಿ ಕ್ಲಬ್‌ಪರವಾಗಿ ಪ್ರೊಜೆಕ್ಟರ್‌ ಅನ್ನು ಕೊಡುಗೆ ನೀಡಿದ ವಾಸವಿ ಇಂಟರ್ ನ್ಯಾಷನಲ್‌ ಕ್ಲಬ್‌ನ ಜಿಲ್ಲಾ ಪಾಲಕ ನರಹರಿ ನವಕಾಂತ್‌ ಮಾತನಾಡಿ, ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ವಾಸವಿ ಕ್ಲಬ್‌ ತನ್ನ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ವಾಸವಿ ಇಂಟರ್‍  ನ್ಯಾಷನಲ್‌ ಕ್ಲಬ್‌ನ ಜಿಲ್ಲೆ ವಿ-303ಎ ಭಾಗವಾಗಿರುವ ರಾಮನಗರ ವಾಸವಿ ಕ್ಲಬ್‌ಜಿಲ್ಲೆಯಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದು ಶ್ಲಾಘಿಸಿದರು. ಮಕ್ಕಳ ಒಟ್ಟಾರೆ ಕಲಿಕೆಗೆ ಪೂರಕವಾಗಲಿ ಎಂಬ ಸದುದ್ದೇಶದಿಂದ ಪ್ರೊಜೆಕ್ಟರ್‌ಕೊಡುಗೆ ನೀಡಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಶಿಕ್ಷಕರಿಗೆ ಕರೆ ನೀಡಿದರು.

ಶಾಲೆಯ ಆವರಣದಲ್ಲಿ ಗಿಡಗಳನ್ನು ಬೆಳೆಸಲು ಅವಕಾಶವಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ವಿಚಾರದಲ್ಲಿ ಮನಸ್ಸು ಮಾಡಿದರೆ ತಾವು ಸಹಕಾರ ನೀಡುವುದಾಗಿ ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಗಂಗಾಧರಯ್ಯ ಮಾತನಾಡಿ, ವಾಸವಿ ಕ್ಲಬ್‌ ರಾಮನಗರದ ಪದಾಧಿಕಾರಿಗಳು ಶಾಲೆಯ ಬಗ್ಗೆ ಅಭಿಮಾನವನ್ನು ಇರಿಸಿಕೊಂಡಿದ್ದಾರೆ, ರಾಷ್ಟ್ರಿಯ ಹಬ್ಬಗಳ ವೇಳೆ ಮಕ್ಕಳನ್ನು ಪ್ರೋತ್ಸಾಹಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕಲಿಕೆಗೆ ಪೂರಕವಾಗಿ ಪ್ರೊಜೆಕ್ಟರ್‌ಕೊಡುಗೆ ನೀಡಿದ್ದಾರೆ ಎಂದು ಕೃತಜ್ಞತೆ ಅರ್ಪಿಸಿದರು.

ಕರ್ನಾಟಕ ಆರ್ಯ ವೈಶ್ಯ ಮಹಾಸಭೆಯ ವಿಭಾಗಿಯ ಕಾರ್ಯದರ್ಶಿ ಕೆ.ವಿ.ಪ್ರಸನ್ನ ಕುಮಾರ್‌ಮಾತನಾಡಿದರು. ಜಿಲ್ಲಾ ಪಾಲಕರ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ ಕ್ಲಬ್‌ ಕಾರ್ಯದರ್ಶಿ ಹರ್ಷಿತಾ ಕ್ಲಬ್‌ನ ಚಟುವಟಿಕೆಗಳ ವರದಿ ಮಂಡಿಸಿದರು. ಶಿಕ್ಷಕಿ ದೇವಿಕಾ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಡಿಡಿಪಿಐ ಕಚೇರಿಯ ಡಿವೈಪಿಸಿ ಅಧಿಕಾರಿಗಳಾದ ದ್ರಾಕ್ಷಾಯಿಣಿ, ಹೇಮಾವತಿ, ಇಒ ಶೈಲಜಾ, ಸಿಆರ್‌ಪಿ ಮುನಿಯಪ್ಪ, ವಾಸವಿ ಕ್ಲಬ್‌ನ ಜಿಲ್ಲಾ ಅಧಿಕಾರಿ ನರಸಿಂಹ, ಸ್ಥಳೀಯ ಶಾಖೆಯ ಖಜಾಂಚಿ ಅನುರಾಧ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.