ವ್ಯಾಯಾಮ ಮಾಡುವಾಗ, ವಾಕಿಂಗ್ ಮಾಡುವಾಗ ಮೈತುಂಬಾ ಬೆವರು ಹರಿದರೆ, ನಮ್ಮಲ್ಲಿ ಬಹುತೇಕರು “ಕೊಬ್ಬು ಕರಗಿ ತೂಕ ಇಳಿಯುತ್ತಿದೆ” ಎಂದು ಸಂಭ್ರಮಿಸುತ್ತಾರೆ. ಆದರೆ ಈ ನಂಬಿಕೆ ಸಂಪೂರ್ಣ ತಪ್ಪು! ವೈಜ್ಞಾನಿಕವಾಗಿ ಹೇಳುವುದಾದರೆ ಬೆವರುವುದಕ್ಕೂ ಮತ್ತು ಕೊಬ್ಬು ಕರಗುವುದಕ್ಕೂ ನೇರ ಸಂಬಂಧವಿಲ್ಲ.

ಬೆವರು ಎಂದರೇನು?
ಬೆವರು ಎಂದರೆ ಕೊಬ್ಬು ಅಲ್ಲ! ಅದು ದೇಹದ ನೈಸರ್ಗಿಕ ಹವಾನಿಯಂತ್ರಣ (AC) ವ್ಯವಸ್ಥೆ. ಇದು ಶೇಕಡಾ 99ರಷ್ಟು ನೀರು, ಉಪ್ಪು ಮತ್ತು ಅಲ್ಪ ಪ್ರಮಾಣದ ಯೂರಿಯಾದಿಂದ ಕೂಡಿದೆ. ದೇಹದ ಉಷ್ಣತೆ ಹೆಚ್ಚಾದಾಗ, ದೇಹವನ್ನು ತಂಪಾಗಿಸಲು ಚರ್ಮದ ರಂಧ್ರಗಳ ಮೂಲಕ ನೀರು ಹೊರಬರುತ್ತದೆ.
ಜನರಲ್ಲಿ ಗೊಂದಲವೇಕೆ?
ವೇಗದ ನಡಿಗೆ, ಓಟ, ಜಾಗಿಂಗ್ ಅಥವಾ ಜಿಮ್‌ನಲ್ಲಿ ಒಂದು ಗಂಟೆ ಬೆವರು ಹರಿಸಿ ತೂಕ ಪರೀಕ್ಷಿಸಿದರೆ ೦.೫ ರಿಂದ ೧-೨ ಕೆಜಿ ಇಳಿಕೆಯಾದಂತೆ ಕಾಣಬಹುದು. ಆದರೆ ಇದು ಕೇವಲ ನೀರಿನ ತೂಕದ ನಷ್ಟ (WaterWeight). ಅರ್ಧ ಲೀಟರ್ ನೀರು ಕುಡಿದ ತಕ್ಷಣ ಆ ತೂಕ ಮರಳಿ ಬರುತ್ತದೆ. ಬಿಸಿಲ ದಿನ, ಖಾರವಾದ ಆಹಾರ ಅಥವಾ ಸೌನಾ ಬಾತ್‌ನಿಂದಲೂ ಜಾಸ್ತಿ ಬೆವರು ಬರಬಹುದು, ಆದರೆ ಅದರಿಂದ ಕೊಬ್ಬು ಕರಗುವುದಿಲ್ಲ. ಕೊಬ್ಬು ಕರಗುವುದು ದೀರ್ಘಕಾಲದ ಪ್ರಕ್ರಿಯೆಯಾಗಿದ್ದು, ಅದು ವಾರಗಳ ಶ್ರಮದ ನಂತರ ಬಟ್ಟೆಗಳು ಸಡಿಲವಾಗುವುದರ ಮೂಲಕ ಸ್ಪಷ್ಟವಾಗುತ್ತದೆ.
ವ್ಯಾಯಾಮ ಮತ್ತು ಬೆವರಿನ ಸಂಬಂಧ:
ನೀವು ವೇಗದ ನಡಿಗೆ ಅಥವಾ ಸ್ಟ್ರೆಂತ್ ಟ್ರೆೈನಿಂಗ್ ಮಾಡಿದಾಗ ದೇಹ ಶಕ್ತಿಗಾಗಿ ಕ್ಯಾಲೋರಿಗಳನ್ನು ದಹಿಸುತ್ತದೆ. ಆ ಶ್ರಮದಿಂದಾಗಿ ಮೈ ಬಿಸಿಯಾಗಿ ಬೆವರು ಬರುತ್ತದೆ. ಇಲ್ಲಿ ಕೊಬ್ಬನ್ನು ಕರಗಿಸಿದ್ದು ಸ್ನಾಯುಗಳು ಮಾಡಿದ ಕಠಿಣ ಪರಿಶ್ರಮವೇ ಹೊರತು, ಬೆವರಲ್ಲ.
ಕೊಬ್ಬು ಕರಗಿಸಲು ಸರಿಯಾದ ಮಾರ್ಗಗಳು:
* ಕ್ಯಾಲೋರಿ ಕೊರತೆ (calorie deficit):
ದೇಹವು ಬಳಸುವುದಕ್ಕಿಂತ ಕಡಿಮೆ ಕ್ಯಾಲೋರಿಯುಕ್ತ ಪೌಷ್ಟಿಕ ಆಹಾರ ಸೇವಿಸಬೇಕು.
* ಸ್ಟ್ರೆಂತ್ ಟ್ರೆೈನಿಂಗ್ (ವೇಟ್ ಟ್ರೆೈನಿಂಗ್):
ಸ್ನಾಯುಗಳ ಬೆಳವಣಿಗೆಯಿಂದ ಚಯಾಪಚಯ ಕ್ರಿಯೆ (metobolism) ಹೆಚ್ಚಾಗಿ, ದಿನದ 24 ಗಂಟೆಯೂ ದೇಹವು ಕೊಬ್ಬನ್ನು ಸುಡಲು ನೆರವಾಗುತ್ತದೆ.
* ಹಾರ್ಮೋನ್ ಸಮತೋಲನ ಮತ್ತು ಸಮಯಪ್ರಜ್ಞೆ:
ರಾತ್ರಿ 8 ಗಂಟೆಯೊಳಗೆ ಲಘು ಊಟ ಮುಗಿಸುವುದು, ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವುದು ಕೊಬ್ಬು ಶೇಖರಣೆಯನ್ನು ತಡೆಯುತ್ತದೆ.

ತೂಕ ಇಳಿಸುವ ಗುರಿ ಇರುವವರು ಬೆವರಿನ ಹಿಂದೆ ಬೀಳದೆ, ಶಿಸ್ತುಬದ್ಧ ಜೀವನಶೈಲಿ, ಪೌಷ್ಟಿಕ ಆಹಾರ ಹಾಗೂ ವ್ಯಾಯಾಮವನ್ನು ರೂಢಿಸಿಕೊಳ್ಳುವುದು ಆರೋಗ್ಯಕರ. ಬೆವರು ದೇಹದ ಸಾಮಾನ್ಯ ಪ್ರತಿಕ್ರಿಯೆ ಮಾತ್ರ, ನಿಮ್ಮ ಅಂತಿಮ ಗುರಿಯಲ್ಲ!

