ಗ್ರಾಮ ಪಂಚಾಯ್ತಿಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ – ಉಮಾ ಮಹದೇವನ್

ರಾಮನಗರ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಗ್ರಂಥಾಲಯ ತೆರೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಡಿಜಿಟಲ್ ಗ್ರಂಥಾಲಯ ತೆರೆಯುವುದರಿಂದ ಗ್ರಾಮೀಣ ಭಾಗದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮತ್ತು ಓದುವ ವಿದ್ಯಾರ್ಥಿಗಳಿಗೆ ಅನೂಕೂಲವಾಗುತ್ತದೆ ಎಂದರು. ಸಿ.ಎಸ್.ಆರ್ ನಿಧಿ ಬಳಸಿಕೊಂಡು ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ಎಂದರು.

ಈಗಾಗಲೇ ಗ್ರಾಮೀಣ ಭಾಗದಲ್ಲಿ ಶೈಕ್ಷಿಣಿಕ ಮಟ್ಟ ಅಭಿವೃದ್ಧ್ಧಿಗೊಂಡಿದ್ದು, ಸಾಕ್ಷರತೆಯ ಪ್ರಮಾಣ ಹೆಚ್ಚುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣದ ಅವಶ್ಯಕತೆ ತುಂಬಾ ಇದೆ. ಜೊತೆಗೆ ಓದುವ ಆಸಕ್ತಿವುಳ್ಳವರಿಗೂ ಗ್ರಂಥಾಲಯ ಸಹಕಾರಿಯಾಗಲಿದೆ. ಹೀಗಾಗಿ ಪರೀಕ್ಷಾ ಸಂಬಂಧ ಪುಸ್ತಕಗಳ ಜೊತೆ ಒಳ್ಳೆಯ ಸಾಹಿತ್ಯ ಪುಸ್ತಕಗಳನ್ನು ಶೇಖರಿಸಿಡಿ, ಇದರಿಂದ ಪ್ರತೀಯೊಬ್ಬರೂ ಗ್ರಂಥಾಲಯದ ಕಡೆ ಮುಖ ಮಾಡುತ್ತಾರೆ ಎಂದರು.
ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ರೈತರು ಕೃಷಿ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಡಿಜಿಟಲ್ ಗ್ರಂಥಾಲಯ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರಿ ಶಾಲೆಗಳಲ್ಲಿನ ಗ್ರಂಥಾಲಯಗಳಲ್ಲಿ ಸಾಹಿತ್ಯ ಪುಸ್ತಕ, ಶಾಲಾ ಪುಸ್ತಕ, ಮಕ್ಕಳ ಪುಸ್ತಕ, ಸಂವಿಧಾನದ ಗ್ರಂಥಗಳು ಇರಲಿ. ದಿನಪತ್ರಿಕೆ ಓದುವ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು..

ಗ್ರಾಮೀಣಾ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಿ ಶಾಲೆಗಳ ಆವರಣದಲ್ಲಿ ನರೇಗಾ ಯೋಜನೆಯಡಿ ಕ್ರೀಡಾಂಗಣ ಅಭಿವೃದ್ಧಿ ಪಡಿಸಬೇಕು ಎಂದು ಸೂಚನೆ ಕೊಟ್ಟರು.
ಸಭೆಯಲ್ಲಿ ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿ.ಪಂ.ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಸಹಾಯಕ ಕಾರ್ಯದರ್ಶಿ ಮಮತ ಅವರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.