ಬೆಂಗಳೂರಲ್ಲಿ ಕೆರೆಗಳ ನಾಶ, ಕೆಂಪೇಗೌಡರ ಶ್ರಮಕ್ಕೆ ಪೆಟ್ಟು- ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

ರಾಮನಗರ: ಇಂದಿನ ಬೆಂಗಳೂರಿಗೆ ಕಾರಣರಾದ ನಾಡಪ್ರಭು ಕೆಂಪೇಗೌಡರು ಜನರ ಬದುಕಿಗಾಗಿ ಹಲವು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಆದರೆ ಇಂದು ಸ್ವಾರ್ಥಕ್ಕೆ ಹಲವಾರು ಕೆರೆ-ಕಟ್ಟೆಗಳು ನಾಶವಾಗಿವೆ. ಕೆಂಪೇಗೌಡರ ಶ್ರಮವೂ ನಾಶವಾಗುತ್ತಿದೆ ಎಂದು ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ರಾಮನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಸೋಮವಾರ ಕೆಂಪೇಗೌಡರ ಜಯಂತೋತ್ಸವ ಸಮಿತಿ ಹಾಗೂ ರಾಮನಗರ ತಾಲೂಕು ಒಕ್ಕಲಿಗರ ಸಂಘಗಳು ಸಂಯುಕ್ತವಾಗಿ ಆಯೋಜಿಸಿದ್ದ ಕೆಂಪೇಗೌಡರ 153ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಂಪೇಗೌಡರನ್ನು ನೀರಾವರಿ ತಜ್ಞ ಎಂದು ಹೇಳಲಾಗಿದೆ. ಓದು ಬರಹಗಳು ಇಲ್ಲದೇ ಇದ್ದರೂ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಗೂ ರೈತರ ಕೃಗೆ ಹಲವಾರು ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದರು. ಇಂದು ದಮ್ಮಾಂಬುದ್ದಿ ಕೆರೆ, ಕೆಂಪಾಂಬುದಿ ಕೆರೆ ನಿರ್ಮೂಲನೆಯಾಗಿವೆ. ಬೆಂಗಳೂರಿನಲ್ಲಿ  ಹಂತ ಹಂತವಾಗಿ ಕೆರೆಗಳು ಮುಚ್ಚಿ ಹೋಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2006ರಲ್ಲಿ ತಾವು ಮುಖ್ಯಮಂತ್ರಿಗಳಾಗಿದ್ದ ವೇಳೆ ಶಾಸಕ ಎ.ಟಿ.ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಬೆಂಗಳೂರು ನಗರದಲ್ಲಿ ಭೂ ಕಬಳಿಕೆಯಾಗುವುದನ್ನು ನಿಲ್ಲಿಸುವ ಸಲುವಾಗಿ ರಚನೆಯಾಗಿದ್ದ ಈ ಸಮಿತಿಯ ಪರಿಶೀಲನೆ ಮಾಡಿ ವರದಿ ನೀಡಿತ್ತು. ಆ ಪ್ರಕಾರ ಬೆಂಗಳೂರು ನಗರದಲ್ಲಿ 9 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಲೂಟಿ ಮಾಡಿರುವ ಕುರಿತು ಸಮತಿ ವರದಿ ನೀಡಿತ್ತು ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರಿನಲ್ಲಿ ಇಂದು ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ.  ಕನ್ನಡಿಗರ ಧ್ವನಿ ಕ್ಷೀಣಿಸುವ ಕೆಲಸವಾಗುತ್ತಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಾನು ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದಿದ್ದೇನೆ. ನನ್ನ ಬಗ್ಗೆ ಕೆಲವರು ಸಣ್ಣದಾಗಿ ಮಾತನಾಡುತ್ತಾರೆ. ರಾಮನಗರ ತಾಲೂಕಿನ ಜನತೆ ನೀಡಿದ ಶಕ್ತಿುಂದಾಗಿ ರಾಜ್ಯದ ಅಭಿವೃದ್ಧಿಗೆ ನಾನು ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದರ ಬಗ್ಗೆ ನನಗೆ ತೃಪ್ತಿ ಇದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್‍.ರವಿ, ರಾಮನಗರ ಶಾಸಕಿ ಅನಿತಾಕುಮಾರಸ್ವಾಮಿ, ಮಾಗಡಿ ಶಾಸಕ ಎ.ಮಂಜುನಾಥ್ ಮಾತನಾಡಿದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರ”ಸಲಾಯಿತು. ರಾಮನಗರ ತಾಲೂಕು ಸರ್ಕಾರಿ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿ ಅತೀ ಹೆಚ್ಚು ಅಂಕಗಳಿಸಿದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಈ ವೇಳೆ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಮುಖ್ಯಸ್ಥ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ಸಂತೋಷ್ ಬಾಬು , ಕುವೆಂಪು ಕಾಲೇಜು ಪ್ರಾಧ್ಯಾಪಕ ರವೀಂದ್ರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಒಕ್ಕಲಿಗರ ಸಂಘದ ಪ್ರಮುಖರಾದ ಚಂದ್ರಯ್ಯ, ಹನುಮೇಲಿಂಗು ಮುಂತಾದವರು ಹಾಜರಿದ್ದರು.

…………