ಕಲಾವಿದರಿಗೆ ಪ್ಯಾಕೇಜ್: ಇಂದಿನಿಂದ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ

ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂತೆ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಸಂಬಂಧ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ಕಲಾವಿದರು/ಕಲಾತಂಡದವರು ನಿಗಧಿತ ಅರ್ಜಿ ನಮೂನೆಯಲ್ಲಿ ದಿ:28-05-2021 ರ ಬೆಳಿಗ್ಗೆ 10.00 ರಿಂದ ದಿ:05-06-2021 ರವರೆಗೆ ಸೇವಾಸಿಂಧು ವೆಬ್ ಸೈಟ್ (sevasindhu.karnataka.gov.in) ನಲ್ಲಿ ನಾಗರೀಕ ಸೇವಾ ಕೇಂದ್ರಗಳು ಅಥವಾ ಮೊಬೈಲ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ.

ನಿಯಮಗಳು:

1) ಅರ್ಜಿದಾರರು ವೃತ್ತಿನಿರತರ ಕಲಾವಿದರಾಗಿದ್ದು, ಕನಿಷ್ಟ 35 ವರ್ಷ ಮೇಲ್ಪಟ್ಟಿರಬೇಕು ಹಾಗೂ ಕನಿಷ್ಠ 10 ವರ್ಷಗಳ ಕಾಲ ಕಲಾಸೇವೆ ಮಾಡಿರುವ ಬಗ್ಗೆ ಪ್ರಶಸ್ತಿ ಪತ್ರಗಳು, ಛಾಯಾಚಿತ್ರ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಆನ್ ಲೈನ್ ಸೇವಾಸಿಂಧು ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು.

2) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಇದಕ್ಕೆ ಆರ್ಹರಾಗಿರುವುದಿಲ್ಲ ಹಾಗೂ ಅರ್ಜಿ ಸಲ್ಲಿಸುವಂತಿಲ್ಲ.

3) ಅರ್ಜಿದಾರರು ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿ, ಸರ್ಕಾರಿ ಅನುದಾನಿತ ಸಂಘ ಸಂಸ್ಥೆಗಳಲ್ಲಿ ಲಾಭದಾಯಕ ಹುದ್ದೆ ಹೊಂದಿರಬಾರದು ಹಾಗೂ ನೌಕರರಾಗಿರಬಾರದು.

4) 2020-21 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಧನಸಹಾಯ ಪಡೆದ ಸಂಘ- ಸಂಸ್ಥೆಗಳು/ಪದಾಧಿಕಾರಿಗಳು ಹಾಗೂ ವಾದ್ಯಪರಿಕರ/ವೇಷಭೂಷಣ, ಚಿತ್ರಕಲೆ/ಶಿಲ್ಪಕಲೆಗೆ ಪ್ರೋತ್ಸಾಹಧನ ಪಡೆದ ಕಲಾವಿದರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

5) ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ, ಸೇವಾಸಿಂಧು ಮೂಲಕವೇ ಅರ್ಜಿ ಸಲ್ಲಿಸಬೇಕು. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲನೇ ಅದ್ಯತೆ ನೀಡಲಾಗುವುದು.

6) ಅರ್ಜಿದಾರರ ದಾಖಲಾತಿಯನ್ನು ಪರಿಶೀಲಿಸಿ ಆಯ್ಕೆ ಸಮಿತಿಯ ಮೂಲಕ ಅಯ್ಕೆ ಮಾಡಲಾಗುವುದು ಹಾಗೂ ಅರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ 1 ಬಾರಿ ಮಾತ್ರ ರೂ. 3,000/- ಆರ್ಥಿಕ ನೆರವು ನೀಡಲಾಗುವುದು.

7) ತಪ್ಪು ಮಾಹಿತಿ ನೀಡಿ ಇದರ ಲಾಭ ಪಡೆದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅಧಿನಿಯಮದನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.