ಎನ್.ಎಚ್.275 ಕಾಮಗಾರಿ: ಎಚ್.ಡಿ.ಕೆ – ಪ್ರತಾಪ್ ಸಿಂಹ ಮಾತಿನ ಜುಗಲ್ ಬಂಧಿ

* ಪ್ರತಾಪ್ ಸಿಂಹ ಇಂಜಿನಿಯರ್ ಏನ್ರಿ? – ಎಚ್.ಡಿ.ಕೆ ಪ್ರಶ್ನೆ

* ನಾನು ಕಾರ್ಮಿಕ – ಪ್ರತಾಪ್ ಸಿಂಹ ಉತ್ತರ

ರಾಮನಗರ: 1ನೇ ಸೆಪ್ಟಂಬರ್ 2022: ಇತ್ತೀಚೆಗೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಅನಾಹುತ ಸೃಷ್ಠಿಸಿದ್ದ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ನಡುವೆ ಹೇಳಿಕೆಗಳ ವರಸೆ ನಡೆದಿದೆ.

ನೀರು ನಿಂತಿದ್ದಕ್ಕೆ ಕಾರಣ ಅವೈಜ್ಞಾನಿಕ ಕಾಮಗಾರಿ ಎಂದು ಎಚ್.ಡಿ.ಕುಮಾರಸ್ವಾಮಿ ದೂರಿದ್ದರು.  ಹಳ್ಳ-ಕೊಳ್ಳ, ಕೆರೆ-ಕಟ್ಟೆ, ನಾಲೆಗಳ ಒತ್ತುವರಿ ಕಾರಣ ಎಂದು ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ ಒತ್ತುವರಿ ತೆರವುಗೊಳಿಸಿ ಎಂದು ಟ್ವೀಟ್ ಮಾಡಿದ್ದರು. ಇದು ಇಬ್ಬರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಅವರು ಇಂಜಿನಿಯರ್ ಏನ್ರಿ? ಎಚ್.ಡಿ.ಕೆ ಪ್ರಶ್ನೆ

ಪ್ರತಾಪ್ ಸಿಂಹ ಟ್ವೀಟ್ ಗೆ ಗರಂ ಆಗಿರುವ ಕುಮಾರಸ್ವಾಮಿ ಒತ್ತುವರಿ ಈಗ ಆಗಿರುವ ತೊಂದರೆ ಅಲ್ಲ . ರಾಜಕೀಯ ಸ್ವೇಚ್ಛಾಚಾರದಿಂದ ಆಗಿರುವ ಅನಾಹುತಗಳಿವು. ಈ ಹಿಂದಿನ ಸರ್ಕಾರಗಳಲ್ಲಿ ಆಗಿರುವ ತಪ್ಪು ತೀರ್ಮಾನಗಳಿವು. ಕುಮಾರಸ್ವಾಮಿ ಮಾಡಿರುವ ನಿರ್ಧಾರಗಳಲ್ಲ.

ಒತ್ತುವರಿ ನಾವು ತೆರವು ಮಾಡಿಸುತ್ತೇವೆ. ಅದು ಒಂದು ಭಾಗ. ಆದರೆ, ಹೈವೇ ಕಾಮಗಾರಿ ಪ್ರಾರಂಭ ಆದ ಮೇಲೆ ಈ ಸಮಸ್ಯೆ ಸೃಷ್ಠಿಯಾಗಿದೆ. ಪ್ರತಾಪ್ ಸಿಂಹ ಏನು ದೊಡ್ಡ ಎಂಜಿನಿಯರ್ ಏನ್ರೀ? ಎಂದು ಕುಮಾರ ಸ್ವಾಮಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಬಿಜೆಪಿ, ಮೋದಿ ಹೆಸರಿನಲ್ಲಿ ರಾಜಕೀಯ ಮಾಡಿ ಎಂಪಿ ಆಗಿದ್ದಾರೆ. ಕಷ್ಟಪಟ್ಟು ಎಂಪಿ ಸ್ಥಾನ ಪಡೆದಿಲ್ಲ ಎಂದು ಕುಟುಕಿದ್ದಾರೆ.

ನಾನು ಕಾರ್ಮಿಕಪ್ರತಾಪ್ ಸಿಂಹ ಪ್ರತಿಕ್ರಿಯೆ

ಅವರು ಇಂಜಿನಿಯರ್ ಏನ್ರಿ? ಎಂಬ ಕುಮಾರಸ್ವಾಮಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ನಾನು ಕಾರ್ಮಿಕ ಎಂದಿದ್ದಾರೆ.

ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಎಂದು ಮೊದಲು ಮಾಜಿ ಸಿಎಂ ಸಿದ್ದರಾಮಯ್ಯ ಬೈಯ್ದರು, ಈಗ ಕುಮಾರಣ್ಣ ಬೈತಾ ಇದ್ದಾರೆ. ನಾನು ಒಂದು ರೀತಿಯಲ್ಲಿ ಕಾರ್ಮಿಕನಿದ್ದಂತೆ. ಮಾಲೀಕರು ಅಂದು ಕೊಂಡಿರುವವರು ಕಾರ್ಮಿಕರನ್ನು ಬೈಯ್ತಾರೆ. ನನಗೆ ಬೇಸರ ಇಲ್ಲ ಎಂದಿದ್ದಾರೆ.

ಸಂಗನಬಸವನದೊಡ್ಡಿಯ ಬಳಿ ಹೆದ್ದಾರಿ ರಸ್ತೆಯಲ್ಲಿ ಮಳೆ ನೀರು ನಿಂತಿದ್ದ ಸ್ಥಳಕ್ಕೆ ಹೆದ್ದಾರಿಯ ಯೋಜನಾ ನಿರ್ದೇಶಕರು, ಡಿಬಿಎಲ್ ಪ್ರತಿನಿಧಿಗಳು, ಕರ್ನಾಟಕ, ದೆಹಲಿಯ ಡ್ರೈನ್ ತಜ್ಞರನ್ನು ಕರೆದುಕೊಂಡು ಬಂದಿದ್ದೇನೆ. ಎಲ್ಲಾ ಕಡೆ ಪರಿಶೀಲನೆ ನಡೆಯುತ್ತಿದೆ. ಇಲ್ಲಿ ನೀರು ನಿಂತಿದ್ದೇಕೆ ಎಂದು ಎಲ್ಲರಿಗು ಗೊತ್ತಿದೆ. ರಾಮದೇವರ ಬೆಟ್ಟದ ಕಡೆಯಿಂದ ನೀರು ಹರಿದು ಬಂದಿದೆ. ನಾಲೆಗಳು ಒತ್ತುವರಿಯಿಂದಾಗಿ ಮುಚ್ಚಿ ಹೋಗಿವೆ. ಇಲ್ಲಿ ನೀರು ನಿಂತಿದ್ದು ಒತ್ತುವರಿಗೆ ಸಾಕ್ಷಿಯಾಗಿದೆ. ಹೊಸ ರಸ್ತೆ ಮಾಡುವಾಗ ಹಲವಾರು ಸವಾಲು ಎದುರಾಗುವುದು ಸಹಜ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಎಚ್.ಡಿ.ಕೆ.ಗೆ ಪ್ರತಾಪ್ ಸಿಂಹ ಸವಾಲು!

ಮಾನ್ಯ ಕುಮಾರಣ್ಣ ಅವರು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ, ಕಳಪೆ ಕಾಮಗಾರಿ ಎಂದು ದೂರಿದ್ಧಾರೆ. ಅವರು ಮೂರನೇ ವ್ಯಕ್ತಿಯಿಂದ ಪರಿಶೀಲನೆ ಮಾಡಿಸಲಿ, ಎಲ್ಲಿ ಕಳಪೆ ಅವೈಜ್ಞಾನಿಕ ಹೇಳಲಿ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಕುಮಾರಸ್ವಾಮಿ ತಾವು ರಸ್ತೆಯಲ್ಲಿ ನೀರು ನಿಂತು ಆಗಿದ್ದ ಅನಾಹುತಗಳ ವೀಡಿಯೋ ಮಾಡಿಸಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ತಲುಪಿಸುವೆ ಎಂದಿದ್ದಾರೆ.

ನನ್ನ ವೃತ್ತಿಗೆ ಅಗೌರವ ತರುವುದು ಬೇಡ!

ಅದೆಲ್ಲೋ ಬರವಣಿಗೆ ಮಾಡುತ್ತಿದ್ದವನು ಎಂದು ಕುಮಾರಸ್ವಾಮಿ ಛೇಡಿಸಿರುವ ವಿಚಾರದಲ್ಲಿ ತಿರುಗೇಟು ನೀಡಿರುವ ಪ್ರತಾಪ್ ಸಿಂಹ ಟೀ ಮಾರುತ್ತಿದ್ದವರು ಇಂದು ಪ್ರಧಾನಿ ಆಗಿದ್ದಾರೆ. ನಾನು ಪತ್ರಕರ್ತ ಆಗಿದ್ದವನು ಜನರ ಆಶೀರ್ವಾದದಿಂದ ಸಂಸದನಾಗಿದ್ದೇನೆ. ನನ್ನ ವೃತ್ತಿಗೆ ಅಗೌರವ ತರುವುದು ಬೇಡ. ನಾನು ರಾಜಕಾರಣಿ ಅಂತೂ ಅಲ್ಲ. ರಾಜಕಾರಣದಲ್ಲಿ ಇದೀನಿ,  ನಾನು ಕಾರ್ಮಿಕ. ನೀವು ಹೇಳಿದ ಕೆಲಸ ಮಾಡ್ತೇನೆ.

ಹಿರಿಯರು ಹೇಳಿದ್ದನ್ನು ಸಕರಾತ್ಮಕವಾಗಿ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಶಾಸಕರು, ಜೆಡಿಎಸ್ ಕಾರ್ಯಕರು ಹೇಳಿದ ಕೆಲಸವನ್ನೂ ಮಾಡುಕೊಟ್ಟಿದ್ದೀನಿ ಎಂದು ಕುಮಾರಸ್ವಾಮಿ ಹೇಳಿಕೆಗಳಿಗೆ ನಯವಾಗಿ ಕುಟುಕಿದ್ದಾರೆ.

…………….