- ಆಹಾರ ಪೊಟ್ಟಣಗಳ ಹಿಂದೆ ಇರುವ ಮಾಹಿತಿಯನ್ನು ತಪ್ಪದೆ ಓದಿ
- ಪೊಟ್ಟಣದ ಮೇಲಿನ ಆಕರ್ಷಕ ಬರಹ, ಚಿತ್ರಗಳಿಗೆ ಮಾರು ಹೋಗಬೇಡಿ
ಬಿ.ವಿ.ಸೂರ್ಯ ಪ್ರಕಾಶ್, ಡಿ.ಫಾರ್ಮ್
ಸೂಪರ್‌ಮಾರ್ಕೆಟ್, ಅಂಗಡಿ, ಬೇಕರಿಗಳಿಗೆ ಹೋಗಿ ತಿಂಡಿ, ಬಿಸ್ಕತ್ತು ಅಥವಾ ಜ್ಯೂಸ್ ಖರೀದಿಸುವಾಗ ಪ್ಯಾಕೆಟ್ ಮೇಲಿನ ಆಕರ್ಷಕ ಚಿತ್ರಗಳು, ‘೧೦೦% ನೈಸರ್ಗಿಕ’ (100% Natural) ಅಥವಾ ‘ಶೂನ್ಯ ಕೊಬ್ಬು’ (Zero Fat) ಎಂಬ ಹಸಿರು ಬಣ್ಣದ ಬರಹಗಳನ್ನು ನೋಡಿ ಬುಟ್ಟಿಗೆ ಹಾಕಿಕೊಳ್ಳುವುದು ನಮ್ಮ ಅಭ್ಯಾಸ.

ಆದರೆ, ಇಂತಹ ಆಕರ್ಷಕ ಬರಹ, ಚಿತ್ರಗಳನ್ನು ಪರಿಗಣಿಸಬೇಡಿ. ಪ್ಯಾಕೆಟ್‌ನ ಹಿಂಭಾಗದಲ್ಲಿರುವ ಸಣ್ಣ ಅಕ್ಷರಗಳ ‘ನ್ಯೂಟ್ರಿಷನ್ ಲೇಬಲ್’ (Nutrition Label) ಮತ್ತು ಪದಾರ್ಥಗಳ ಪಟ್ಟಿ (Ingredients List) ನಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಮಹತ್ವದ್ದು. ಮಧುಮೇಹ, ಬೊಜ್ಜು, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಆಹಾರ ಲೇಬಲ್ ಓದುವ ಕಲೆ ಪ್ರತಿಯೊಬ್ಬ ಗ್ರಾಹಕನಿಗೂ ತಿಳಿದಿರಲೇಬೇಕು.
ಲೇಬಲ್ ಓದುವಾಗ ಗಮನಿಸಬೇಕಾದ ಮುಖ್ಯ ಅಂಶಗಳು
1. ಸರ್ವಿಂಗ್ ಸೈಜ್ (Serving Size – ಸೇವನೆಯ ಪ್ರಮಾಣ)
ನ್ಯೂಟ್ರಿಷನ್ ಚಾರ್ಟ್ ನೋಡುವಾಗ ಮೊದಲಿಗೆ ‘ಸರ್ವಿಂಗ್ ಸೈಜ್’ ಗಮನಿಸಿ. ಪ್ಯಾಕೆಟ್‌ನಲ್ಲಿ ನಮೂದಿಸಲಾದ ಕ್ಯಾಲೊರಿ, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ಇಡೀ ಪ್ಯಾಕೆಟ್‌ಗೆ ಅನ್ವಯಿಸುವುದಿಲ್ಲ; ಅದು ಕೇವಲ ಒಂದು ‘ಸರ್ವಿಂಗ್’ಗೆ ಮಾತ್ರ. ಉದಾಹರಣೆಗೆ, ಒಂದು 100 ಗ್ರಾಂ ಚಿಪ್ಸ್ ಪ್ಯಾಕೆಟ್‌ನಲ್ಲಿ ಸರ್ವಿಂಗ್ ಸೈಜ್ 25 ಗ್ರಾಂ ಎಂದು ಬರೆದಿದ್ದರೆ, ಇಡೀ ಪ್ಯಾಕೆಟ್ ತಿಂದರೆ ಅದರಲ್ಲಿರುವ ಪೋಷಕಾಂಶಗಳ ನಾಲ್ಕರಷ್ಟು ಪ್ರಮಾಣ ದೇಹ ಸೇರುತ್ತದೆ.
2. ಪದಾರ್ಥಗಳ ಪಟ್ಟಿ (Ingredients List)
ನಿಯಮಾವಳಿಗಳ ಪ್ರಕಾರ, ಆಹಾರ ತಯಾರಿಸಲು ಬಳಸಿದ ಪದಾರ್ಥಗಳನ್ನು ಅವುಗಳ ತೂಕದ ಆಧಾರದ ಮೇಲೆ ಇಳಿಕೆ ಕ್ರಮದಲ್ಲಿ (ಹೆಚ್ಚಿನ ಪ್ರಮಾಣದಿಂದ ಕಡಿಮೆ ಪ್ರಮಾಣಕ್ಕೆ) ಪಟ್ಟಿ ಮಾಡಲಾಗುತ್ತದೆ.
* ಪಟ್ಟಿಯ ಮೊದಲ ಮೂರು ಹೆಸರುಗಳು ಆ ಆಹಾರದ ಮುಕ್ಕಾಲು ಭಾಗವನ್ನು ನಿರ್ಧರಿಸುತ್ತವೆ.
* ಮೊದಲ ಮೂರು ಸ್ಥಾನಗಳಲ್ಲಿ ಮೈದಾ (Refined Wheat Flour), ಸಕ್ಕರೆ (Sugar) ಅಥವಾ ತಾಳೆ ಎಣ್ಣೆ (Palm Oil) ಇದ್ದರೆ, ಅದು ಆರೋಗ್ಯಕ್ಕೆ ಸೂಕ್ತವಲ್ಲ ಎಂದರ್ಥ.
3. ಸಕ್ಕರೆಯ ನಾನಾ ಮುಖಗಳು (Hidden Sugars)
ಪ್ಯಾಕೆಟ್ ಮೇಲೆ ‘ನೋ ಆಡೆಡ್ ಶುಗರ್’ (No Added Sugar) ಎಂದಿದ್ದರೂ ಒಳಗೆ ಸಕ್ಕರೆಯ ಬೇರೆ ರೂಪಗಳು ಅಡಗಿರುತ್ತವೆ. ಪದಾರ್ಥಗಳ ಪಟ್ಟಿಯಲ್ಲಿ ಈ ಕೆಳಗಿನ ಹೆಸರುಗಳಿವೆಯೇ ಎಂದು ಪರೀಕ್ಷಿಸಿ:
* ಮಾಲ್ಟೋಡೆಕ್ಸ್‌ಟ್ರಿನ್ (Maltodextrin)
* ಹೈ ಫ್ರಕ್ಟೋಸ್ ಕಾರ್ನ್ ಸಿರಪ್ (HFCS)
* ಡೆಕ್ಸ್‌ಟ್ರೋಸ್, ಸುಕ್ರೋಸ್, ಗ್ಲುಕೋಸ್
* ಇನ್ವರ್ಟ್ ಶುಗರ್ ಸಿರಪ್, ಜೇನುತುಪ್ಪ ಅಥವಾ ಕಾನ್ಸೆಂಟ್ರೇಟೆಡ್ ಫ್ರೂಟ್ ಜ್ಯೂಸ್
ಹೆಬ್ಬೆರಳ ನಿಯಮ: 100 ಗ್ರಾಂ ಘನ ಆಹಾರದಲ್ಲಿ ೫ ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಸಕ್ಕರೆ ಇದ್ದರೆ ಉತ್ತಮ. 22.5 ಗ್ರಾಂ ಗಿಂತ ಹೆಚ್ಚಿದ್ದರೆ ಅದು ಅಧಿಕ ಸಕ್ಕರೆಯುಕ್ತ ಆಹಾರ.
4. ಕೊಬ್ಬಿನ ವಿಧಗಳು (Fats to Avoid)
ಎಲ್ಲ ಕೊಬ್ಬುಗಳೂ ಕೆಟ್ಟದ್ದಲ್ಲ, ಆದರೆ ಈ ಎರಡು ವಿಧಗಳ ಬಗ್ಗೆ ಎಚ್ಚರವಿರಲಿ:
ಟ್ರಾನ್ಸ್ ಫ್ಯಾಟ್ (Trans Fat): ಇದು ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಗೆ ಕಾರಣವಾಗುತ್ತದೆ. ಲೇಬಲ್‌ನಲ್ಲಿ ಇದು ಕಡ್ಡಾಯವಾಗಿ 0 ಗ್ರಾಂ ಇರಬೇಕು. ಪದಾರ್ಥಗಳ ಪಟ್ಟಿಯಲ್ಲಿ ‘Partially Hydrogenated Vegetable Oil’ ಎಂದು ಕಂಡರೆ ಅದನ್ನು ಖರೀದಿಸಬೇಡಿ.
ಸ್ಯಾಚುರೇಟೆಡ್ ಫ್ಯಾಟ್ (Saturated Fat): 100 ಗ್ರಾಂಗೆ 1.5 ಗ್ರಾಂ ಗಿಂತ ಕಡಿಮೆ ಇದ್ದರೆ ಒಳ್ಳೆಯದು. 5 ಗ್ರಾಂ ಗಿಂತ ಹೆಚ್ಚಿರುವ ಪದಾರ್ಥಗಳ ಸೇವನೆ ಮಿತವಾಗಿರಲಿ.
5. ಸೋಡಿಯಂ ಅಥವಾ ಉಪ್ಪು (Sodium)
ಉಪ್ಪು ರಕ್ತದೊತ್ತಡದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ರುಚಿ ಮತ್ತು ಬಾಳಿಕೆಗಾಗಿ ಅಧಿಕ ಸೋಡಿಯಂ ಬಳಸಲಾಗುತ್ತದೆ.
* ದಿನಕ್ಕೆ ಒಬ್ಬ ವ್ಯಕ್ತಿಗೆ ಗರಿಷ್ಠ 2000 ಮಿಲಿಗ್ರಾಂ (ಅಂದಾಜು ೧ ಟೀಚಮಚ ಉಪ್ಪು) ಸೋಡಿಯಂ ಸಾಕು.
* ಒಂದು ಸರ್ವಿಂಗ್‌ಗೆ 140 ಮಿಲಿಗ್ರಾಂ ಗಿಂತ ಕಡಿಮೆ ಸೋಡಿಯಂ ಇದ್ದರೆ ಅದು ‘ಕಡಿಮೆ ಸೋಡಿಯಂ’ ಆಹಾರ. 400 ಮಿಲಿಗ್ರಾಂ ಗಿಂತ ಹೆಚ್ಚಿದ್ದರೆ ದೂರವಿಡಿ.

ಗ್ರಾಹಕರನ್ನು ದಿಕ್ಕುತಪ್ಪಿಸುವ ಕ್ಲೈಮ್‌ಗಳ ಸತ್ಯಾಸತ್ಯತೆ
ಪ್ಯಾಕೆಟ್ ಮೇಲಿನ ಕ್ಲೈಮ್ , ವಾಸ್ತವವೇನು?
ಫ್ಯಾಟ್ ಫ್ರೀ (Fat-Free): ಕೊಬ್ಬು ಕಡಿಮೆ ಮಾಡಿ, ರುಚಿಗಾಗಿ ಅಧಿಕ ಸಕ್ಕರೆ ಮತ್ತು ಕೃತಕ ಪದಾರ್ಥಗಳನ್ನು ಸೇರಿಸಿರಬಹುದು.
ಶುಗರ್ ಫ್ರೀ (Sugar-Free): ಕೃತಕ ಸಿಹಿಕಾರಕಗಳು (Artificial Sweeteners) ಅಥವಾ ಕಾರ್ಬೋಹೈಡ್ರೇಟ್ ಹೆಚ್ಚಿರುವ ಸಾಧ್ಯತೆ ಇರುತ್ತದೆ.
ಮಲ್ಟಿಗ್ರೇನ್ / ಹೋಲ್ ವೀಟ್: ಇದರಲ್ಲಿ ಕೇವಲ 5-10% ಮಾತ್ರ ಸಿರಿಧಾನ್ಯ ಅಥವಾ ಗೋಧಿ ಇರಬಹುದು; ಉಳಿದದ್ದು ಮೈದಾ ಆಗಿರುವ ಸಾಧ್ಯತೆ ಹೆಚ್ಚು.
ಕೊಲೆಸ್ಟ್ರಾಲ್ ಫ್ರೀ: ಸಸ್ಯಜನ್ಯ ಎಣ್ಣೆಗಳಲ್ಲಿ ಮೂಲತಃ ಕೊಲೆಸ್ಟ್ರಾಲ್ ಇರುವುದಿಲ್ಲ. ಆದರೆ ಅದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರಬಹುದು.
ಆರೋಗ್ಯಕರ ಖರೀದಿಗೆ 3 ಸರಳ ಸೂತ್ರಗಳು
ಸಣ್ಣ ಪಟ್ಟಿ, ಉತ್ತಮ ಆಹಾರ: ಪದಾರ್ಥಗಳ ಪಟ್ಟಿ ಎಷ್ಟು ಚಿಕ್ಕದಾಗಿದೆಯೋ, ಆಹಾರ ಅಷ್ಟು ನೈಸರ್ಗಿಕ. 15-20 ರಾಸಾಯನಿಕ ಹೆಸರುಗಳು, ‘INS’ ಸಂಖ್ಯೆಗಳು (ಉದಾ: INS 621, INS 211) ತುಂಬಿದ್ದರೆ ಅದು ಅಲ್ಟ್ರಾ-ಪ್ರೊಸೆಸ್ಡ್ ಆಹಾರ ಎಂದರ್ಥ.
ದೈನಂದಿನ ಮೌಲ್ಯದ ಶೇಕಡಾವಾರು (% Daily Value): ಲೇಬಲ್‌ನಲ್ಲಿ % DV ನೋಡಿ. ಯಾವುದೇ ಪೋಷಕಾಂಶ 5% ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಅದು ‘ಕಡಿಮೆ’, ಮತ್ತು 20% ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ‘ಅಧಿಕ’ ಎಂದು ಪರಿಗಣಿಸಲಾಗುತ್ತದೆ. ಫೈಬರ್ (ನಾರಿನಂಶ) 20% ಇದ್ದರೆ ಒಳ್ಳೆಯದು, ಸಕ್ಕರೆ ಅಥವಾ ಸೋಡಿಯಂ 20% ಮೀರಿದರೆ ಅಪಾಯಕಾರಿ.
ಬಾಳಿಕೆ ಅವಧಿ (Expiry / Best Before / Use By): ದಿನಾಂಕ ಮುಗಿದ ಆಹಾರವನ್ನು ಎಂದಿಗೂ ಸೇವಿಸಬೇಡಿ.
ತಿನ್ನುವ ಆಹಾರದ ಗುಣಮಟ್ಟವೇ ನಮ್ಮ ನಾಳಿನ ಆರೋಗ್ಯ. ಕೇವಲ ಬ್ರಾಂಡ್ ಮತ್ತು ಜಾಹೀರಾತು ನಂಬುವ ಬದಲು, ಲೇಬಲ್ ಓದುವ ಹವ್ಯಾಸ ಬೆಳೆಸಿಕೊಂಡರೆ ಕಲಬೆರಕೆ ಹಾಗೂ ಅನಾರೋಗ್ಯಕರ ಪದಾರ್ಥಗಳಿಂದ ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬಹುದು.
