ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮಕ್ಕೆ ರೆಬಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಭೇಟಿ ನೀಡಿದ್ದರು. ಗ್ರಾಮದ ಸರ್ಕಾರಿ ಶಾಲೆಯ ಸುಮಾರು 800 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತಿರಿಸಿದರು.

ಈ ವೇಳೆ ಮಾತನಾಡಿದ ಅವರು ಇದು ಅಭಿಮಾನಿಗಳು ಹಮ್ಮಿಕೊಂಡಿರುವ ಕಾರ್ಯಕ್ರಮ. ಕ್ರಡಿಟ್ ಅವರಿಗೆ ಹೋಗಬೇಕು ಎಂದರು. ಸರ್ಕಾರಿ ಶಾಲೆಗಳು ಉಳಿಯಬೇಕಾಗಿದೆ. ಹಲವಾರು ಸರ್ಕಾರಿ ಶಾಲೆಗಳು ಮುಚ್ಚಿವೆ. ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುವ ವಿಚಾರದಲ್ಲಿ ಸರ್ಕಾರ ಗಮನಹರಿಸಬೇಕು ಎಂದರು. ರಾಜಕೀಯಕ್ಕೆ ಬರ್ತೀರಾ ಎಂಬ ಪ್ರಶ್ನೆಗೆ ಪ್ರೀತಿ ಇರುವ ಕಡೆ ತಾವು ಇರುವುದಾಗಿ, ಏನೇ ನಿರ್ಧಾರ ಮಾಡಿದರು ನಿಮಗೆ (ಅಭಿಮಾನಿಗಳು ಮತ್ತು ಮಾಧ್ಯಮ) ಹೇಳಿಯೇ ಮಾಡುತ್ತೇನೆ ಎಂದರು. ತಾವು ನಟಿಸಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಸಧ್ಯದಲ್ಲೇ ತೆರೆಕಾಣಲಿದೆ. ಕಾಳಿ ಚಿತ್ರ ಮಾಡುತ್ತಿರುವುದಾಗಿ, ಮತ್ತೊಂದು ಚಿತ್ರದಲ್ಲೂ ನಟಿಸುವುದಾಗಿ ತಿಳಿಸಿದರು.
ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಅಂಬರೀಶ್ ಅಭಿಮಾನಿ ಸಂಘ ಹಮ್ಮಿಕೊಂಡಿತ್ತು. ಸಂಘದ ಪರಮೇಶ್ ಪ್ರಮುಖ ಪಾತ್ರವಹಿಸಿದ್ದರು. ಅಭಿಷೇಕ್ ಅಂಬರೀಶ್ ಅವರ ಭೇಟಿ ವಿಷಯ ತಿಳಿದ ಯುವಕ, ಯುವತಿಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಕಿಕ್ಕಿರಿದು ತುಂಬಿದ್ದ ಜನರನ್ನು ಕಂಡು ಅಭಿಷೇಕ್ ಸಹ ಪುಳಕಿತರಾದರು. ಅಭಿಮಾನಿಗಳ ಕೋರಿಕೆಯ ಮೇರೆಗೆ ಕನ್ವರ್ ಲಾಲ್ ಚಿತ್ರದ ಡೈಲಾಗ್ ಹೇಳಿದರು.
