*ರಾಮನಗರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ
ರಾಮನಗರ, ಜೂನ್ 7: ರಾಮನಗರ ಜಿಲ್ಲೆಯಲ್ಲಿ ಭಾನುವಾರ ಮತ್ತೊಂದು ಕೋವಿಡ್ 19 ಸೋಂಕಿತ ಪತ್ತೆಯಾಗಿದೆ. ಚನ್ನಪಟ್ಟಣ ತಾಲೂಕಿನಲ್ಲಿ 65 ವರ್ಷದ ವೃದ್ದರೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ.
ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಹೋಬಳಿ ವೈ.ಟಿ.ಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿ ಬಾಣಂತಳ್ಳಿ ಗ್ರಾಮದ ನಿವಾಸಿ 65 ವರ್ಷದ ಮಹಿಳೆಯಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿದೆ. ಸದರಿ ಸೋಂಕಿತ ಮಹಿಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕಳೆದೆರೆಡು ವಾರಗಳಿಂದ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ರಾಮನಗರ ಜಿಲ್ಲೆಯಲ್ಲಿ ಇದೀಗ ಸಕ್ರಿಯ ಸೋಂಕಿತರ ಸಂಖ್ಯೆ 4 ಮಾತ್ರ ಇದೆ.
ಸಾಂಸ್ಥಿಕ ಕ್ವಾರಂಟೈನ್‍ಗೆ ಗುಡ್ ಬೈ, ಹೋಂ ಕ್ವಾರಂಟೈನ್ ಮಾತ್ರ
ಅಂತರರಾಷ್ಟ್ರೀಯ ಪ್ರಯಾಣಿಕರು ಮತ್ತು ಮಹಾರಾಷ್ಟ್ರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಮಾತ್ರ ಸಾಂಸ್ಥಿಕ (ಇನ್ಸ್ ಟಿಟ್ಯೂಷನಲ್) ಕ್ವಾರಂಟೈನ್‍ಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ದೇಶದ ಉಳಿದ ರಾಜ್ಯಗಳಿಂದ ಆಗಮಿಸುವ ಆದರೆ ಸೋಂಕು ಲಕ್ಷಣಗಳಿಲ್ಲದ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಹೋಂ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಸರ್ಕಾರ ಘೋಷಿಸಿದೆ.
ಹೋಂ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಯ ನಿವಾಸದ ಬಾಗಿಲಿನ ಮೇಲೆ ಆರೋಗ್ಯ ಇಲಾಖಾಧಿಕಾರಿಗಳು ಪೋಸ್ಟರ್ ಮೆತ್ತಿಸುವರು. ನೆರೆಹೊರೆಯ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡುವರು. ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಕಠೀಣ ಕಾನೂನು ಕ್ರಮ ಜರುಗಿಸಲಾಗುವುದು, ಅಲ್ಲದೆ ಅಂತಹವರನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಕಳುಹಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ವಿದೇಶಗಳು ಮತ್ತು ಅನ್ಯರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‍ನಲ್ಲಿ ಅನುಮತಿ ಪಡೆಯಬೇಕಾಗಿದೆ.
……..
