* ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ರಾಮನಗರ: ರಾಮನಗರ ಜಿಲ್ಲೆಯಲ್ಲಿ ಇದೀಗ ಕೋವಿಡ್ 19 ಸೋಂಕಿತರ ಸಂಖ್ಯೆ 4ಕ್ಕೆ ಏರಿದೆ. ಗುರುವಾರ ಸಂಜೆ ಜಿಲ್ಲಾಡಳಿತ ಹೊರೆಡಿಸಿರುವ ಹೆಲ್ತ್ ಬುಲೆಟಿನ್‌ನಲ್ಲಿ ಇಬ್ಬರು ಹೊಸ ಸೋಂಕಿತರು ಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ.
ನಗರದ ಕೋವಿಡ್ 19 ಸೋಂಕಿತ ಸಂಖ್ಯೆ ಪಿ.3313 ವ್ಯಕ್ತಿಯ 23 ವರ್ಷದ ಮಗನಿಗೂ ಸೋಂಕು ತಗುಲಿದೆ. ಕ್ವಾರಂಟೈನ್‌ನಲ್ಲಿದ್ದ ಈತನನ್ನು ನಗರದ ಕೋವಿಡ್ 19 ರೆರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚನ್ನಪಟ್ಟಣದಲ್ಲಿ ಒಂದು ಪಕ್ರರಣ
ಚನ್ನಪಟ್ಟಣ ತಾಲೂಕು ವಿರೂಪಾಕ್ಷಿಪುರ ಹೋಬಳಿ ಶ್ಯಾನುಬೋಗನಹಳ್ಳಿಯಲ್ಲಿ 28 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಸದರಿ ಯುವಕ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಎಂದು ಗೊತ್ತಾಗಿದೆ. ಪಾದರಾಯನಪುರ ಗಲಭೆಕೋರರು ಇಲ್ಲಿ ವಾಸ್ತವ್ಯವಿದ್ದಾಗ ಈತ ಕರ್ತವ್ಯದಲ್ಲಿದ್ದ ಎಂದು ಗೊತ್ತಾಗಿದೆ. ಆದರೆ ಜಿಲ್ಲಾಡಳಿತ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸದರಿ ಸೋಂಕಿತ ಯುವಕನನ್ನು ಸಹ ಇಲ್ಲಿನ ಕೋವಿಡ್ 19 ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಂಟೈನ್‌ಮೆಂಟ್ ಜೋನ್ ವಾಟ್ಸಪ್ ಗ್ರೂಪ್
ನಗರದ ಕುಂಬಾರ ಬೀದಿಯಲ್ಲಿ ಪಿ.3313 ಸೋಂಕಿತ ವ್ಯಕ್ತಿ ವಾಸವಿದ್ದ ಕಾರಣ ಸುತ್ತಮುತ್ತ 100 ಮೀಟರ್ ಅಳತೆಯನ್ನು ಕಂಟೈನ್‌ಮೆಂಟ್ ಜೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ. ಕಂಟೈನ್‌ಮೆಂಟ್ ಜೋನ್‌ನಲ್ಲಿರುವ ಕುಟುಂಬದ ಮುಖ್ಯಸ್ಥರ ವಾಟ್ಸಪ್ ಗುಂಪನ್ನು ನಗರಸ‘ೆಯ ಅಧಿಕಾರಿಗಳು ರಚಿಸಿದ್ಧಾರೆ. ನಿವಾಸಿಗಳು ತಮ್ಮ ದಿನನಿತ್ಯದ ಅಗತ್ಯಗಳನ್ನು ಗ್ರೂಪ್‌ನಲ್ಲಿ ನಮೂದಿಸಬಹುದು. ದಿನ ನಿತ್ಯ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಯಿಂದ ಹಾಲು, ತರಕಾರಿಗಳನ್ನು ಪೂರೈಸಲಾಗುತ್ತಿದೆ, ನಾಗರೀಕರು ತಮ್ಮ ಅಗತ್ಯವಿದ್ದಷ್ಟನ್ನು ಹಣ ಕೊಟ್ಟು ಖರಿದಿಸಬೇಕಾಗಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

