* ನ.25ರಂದು ರಾಮನಗರದಲ್ಲಿ ಸ್ಪರ್ಧೆಗಳು
* 14 ಮತ್ತು 16 ವರ್ಷದೊಳಗಿನ ಬಾಲಕಿಯರಿಗೆ ಮಾತ್ರ
ರಾಮನಗರ:17/11/2025: ಹೆಣ್ಣು ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವುದು ಮತ್ತು ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಸ್ಮಿತಾ ಅಥ್ಲೆಟಿಕ್ ಲೀಗ್ 2025 ಕಾರ್ಯಕ್ರಮದಡಿ ಹೊಸ ಪ್ರತಿಭೆಗಳ ಅನ್ವೇಷಣೆ ನಡೆಸುತ್ತಿದೆ. ಈ ಸಂಬಂಧ ಇದೇ ನ.25ರಂದು ರಾಮನಗರದಲ್ಲಿ 12 ರಿಂದ 14 ವರ್ಷ ಹಾಗೂ 14 ರಿಂದ 16 ವರ್ಷದೊಳಗಿನ ಬಾಲಕಿಯರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗಳು ಆಯೋಜನೆಯಾಗಿದೆ.
ಯಾವ್ಯಾವ ಸ್ಪರ್ಧೆಗಳು?

14 ವರ್ಷದೊಳಗಿನ ಬಾಲಕಿಯರಿಗೆ 14 ಟ್ರಯಥ್ಲಾನ್ ಎ, ಬಿ ಮತ್ತು ಸಿ ಎಂಬ ಮೂರು ವಿಭಾಗಗಳಲ್ಲಿ ಕ್ರೀಡೆಗಳು ನಡೆಯಲಿವೆ. ಟ್ರಯಥ್ಲಾನ್ ಎ ವಿಭಾಗದಲ್ಲಿ 60 ಮೀ ಓಟದ ಸ್ಪರ್ಧೆ, ಲಾಂಗ್ ಜಂಪ್ ಮತ್ತು ಹೈಜಂಪ್, ಟ್ರಯಥ್ಲಾನ್ ಬಿ ವಿಭಾಗದಡಿ 60 ಮೀ ಓಟ, ಲಾಂಗ್ ಜಂಪ್, ಬ್ಯಾಕ್ ಥ್ರೋ ಮತ್ತು ಶಾಟ್ ಪುಟ್, ಟ್ರಯಥ್ಲಾನ್ ಸಿ ವಿಭಾಗದಡಿ 60 ಮೀ ಓಟ ಮತ್ತು 600 ಮೀಟರ್ ಲಾಂಗ್ ಜಂಪ್ ಮತ್ತು ಕಿಡ್ಸ್ ಜಾವೆಲಿನ್ ಸ್ಪರ್ಧೆಗಳಿವೆ.
16 ವರ್ಷದೊಳಗಿನ ಬಾಲಕಿಯರಿಗೆ 60 ಮೀಟರ್ ಓಟ, 600 ಮೀಟರ್ ಉದ್ದದ ಲಾಂಗ್ ಜಂಪ್, ಹೈ ಜಂಪ್, ಶಾಟ್‌ಪುಟ್, ಜಾವೆಲಿನ್ ಥ್ರೋ ಮತ್ತು ಡಿಸ್ಕಸ್ ಥ್ರೋ ಸ್ಪರ್ಧೆಗಳಿವೆ.
ವಯಸ್ಸಿನ ಮಿತಿ
14 ವಷದೊಳಗಿನ ಬಾಲಕಿಯರು 21-12-2011 ರಿಂದ20-12-2013ರೊಳಗೆ ಜನಿಸಿದವರಾಗಿರಬೇಕು. 16 ವರ್ಷದೊಳಗಿನ ಬಾಲಕಿಯರು 21-12-2009 ರಿಂದ 20-12-2011ರೊಳಗೆ ಜನಿಸಿರಬೇಕು.
ನ.23ರೊಳಗೆ ಆನ್ ಲೈನ್ನಲ್ಲಿ ನೋಂದಾಯಿಸಿಕೊಳ್ಳಿ
14 ವರ್ಷದೊಳಗಿನ ಹಾಗೂ 16 ವರ್ಷದೊಳಗಿನ ಬಾಲಕಿಯರಿಗಾಗಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತರು ನ.20 ರಿಂದ ನ.23ರೊಳಗೆ ತಮ್ಮ ಹೆಸರುಗಳನ್ನು ಆನ್ ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ. ಸ್ಪೋಟ್ಸ್ ಅಥಾರಿಟಿ ಆಫ್ ಇಂಡಿಯಾ ಸೃಜಿಸಿರುವ ಎನ್.ಎಸ್.ಆರ್.ಎಸ್ ಪೋರ್ಟಲ್‌ನಲ್ಲಿ ಖೇಲೋ ಇಂಡಿಯಾ ಅಸ್ಮಿತಾ ಲೀಗ್ ವಿಭಾಗದ ಮೂಲಕ ನೋಂದಾಯಿಸಿಕೊಳ್ಳಬಹುದು. ಆಯಾ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿರುವ ಕ್ರೀಡಾ ವಿಭಾಗದ ಸಹಕಾರವನ್ನು ಪಡೆದು ನೋಂದಾಯಿಸಿಕೊಳ್ಳಬಹುದು.
ನಗರಸಭೆಯ ಸಹಕಾರ – ಕೆ.ಶೇಷಾದ್ರಿ
ಕ್ರೀಡಗಳಲ್ಲಿ ತೊಡಗಿಸಿಕೊಳ್ಳುವಂತೆ ಬಾಲಕಿಯರನ್ನು ಪ್ರೋತ್ಸಾಹಿಸಲು ದೇಶಾದ್ಯಂತ ನೂತನ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ ಮತ್ತು ಇಂಡಿಯನ್ ಅಥ್ಲೆಟಿಕ್ಸ್ ಸಂಸ್ಥೆಗಳು ಸಂಯುಕ್ತವಾಗಿ ಖೇಲೋ ಇಂಡಿಯಾ ಕಾರ್ಯಕ್ರಮದಡಿ ಅಸ್ಮಿತಾ ಅಥ್ಲೆಟಿಕ್ಸ್ ಲೀಗ್ 2025-26 ಆರಂಭಿಸಿದೆ. ನ.26ರಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ಆಯೋಜನೆಯಾಗುತ್ತಿವೆ. ಸ್ಪರ್ಧೆಗೆ ನಗರಸಭೆ ಸಹಕಾರ ಇರಲಿದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದ್ದಾರೆ.
ಕ್ರೀಡಾಸ್ಪರ್ಧೆಗಳ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿದ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ಉಮೇಶ್ ಬಾಬು, ನ.26ರಂದು ರಾಮನಗರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲು ಅಂತರರಾಷ್ಟ್ರೀಯ ಕ್ರೀಡಾಪಟು ನೀರಜಾ ಚೌದರಿಯವರಿಗೆ ತರಬೇತಿ ನೀಡಿದ ಕಾಶಿನಾಥ್ ನಾಯಕ್ ಮತ್ತು ಸತೀಷ್ ತಂಗವೇಲ್ ಎಂಬ ತರಬೇತುದಾರರು ಸ್ವತಃ ಹಾಜರಿರಲಿದ್ದಾರೆ ಎಂದರು.
ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನವನ್ನು ಕಟ್ಟಿಕೊಳ್ಳಬಹುದು. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಶೇ 3ರಷ್ಟನ್ನು ಕ್ರೀಡಾಪಟುಗಳಿಗೆ ಮೀಸಲಿಟ್ಟಿದೆ. ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಪೊಲೀಸ್ ಇಲಾಖೆಯಲ್ಲಿಯೂ ಉದ್ಯೋಗ ಪಡೆಯಲು ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಜಿಲ್ಲೆಯ ಬಾಲಕಿಯರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಪ್ರವೀಣ್, ಯಂಗ್ ಬಾಯ್ಸ್ ಸಂಸ್ಥೆಯ ವಿಜಿ, ದೇವರಾಜ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.
