ರಾಮನಗರ: ತಮ್ಮ ಸೇವೆಯನ್ನು ಖಾಯಂ ಮಾಡುವಂತೆ ಸ್ಥಳೀಯ ಪೌರ ಸಂಸ್ಥೆಗಳ ಪೌರ ಕಾರ್ಮಿಕರು ಹಮ್ಮಿಕೊಂಡಿರುವ ಅಹೋರಾತ್ರಿ ಅನಿರ್ಧಿಷ್ಟಾವಧಿ ಮುಷ್ಕರ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸಮತಾ ಸೈನಿಕ ದಳದ ಕಾರ್ಯಕರ್ತರು ಬೆಂಬಲ ಕೊಟ್ಟು ಮುಷ್ಕರದಲ್ಲಿ ಭಾಗವಹಿಸಿದ್ದರು.

ಸಮತಾ ಸೈನಿಕ ದಳದ ಮುಖಂಡ ಡಾ.ಜಿ.ಗೋವಿಂದಯ್ಯ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಡಾ.ಜಿ.ಗೋವಿಂದಯ್ಯ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ನೌಕರಿಯನ್ನು ಸರ್ಕಾರ ತಕ್ಷಣ ಖಾಯಂ ಮಾಡಬೇಕು, ಇಲ್ಲದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಮುಷ್ಕರ ನಿರತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಮತಾ ಸೈನಕ ದಳದ ಪ್ರಮುಖರಾದ ಲಕ್ಷ್ಮಣ್ ಕಲ್ಬಾಳ್, ಅಬ್ಬನಕುಪ್ಪೆ ಕುಮಾರ್, ಚಲುವರಾಜು, ದಿನೇಶ್ ಪ್ರಸನ್ನ, ಹರೀಶ್, ಕೆಂಪಶೆಟ್ಟಿದೊಡ್ಡಿ ಲಕ್ಷ್ಮಣ್, ವೆಂಕಟೇಶ್ ಮುಂತಾದವರು ಹಾಜರಿದ್ದರು. ಗುತ್ತಿಗೆ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
